ಯಾದಗಿರಿ: ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದರಿಂದ ಭೀಮಾ ನದಿಗೆ ಒಳಹರಿವು ಹೆಚ್ಚಿದೆ. ಇದರಿಂದ ಭೀಮಾ ನದಿ ಸುತ್ತಮುತ್ತಲೂ ಈಗ ಭತ್ತ ನಾಟಿ ಕಾರ್ಯ ಭರದಿಂದ ಸಾಗಿದೆ.
ಹಿಂಗಾರು ಹಂಗಾಮಿನಲ್ಲಿ ಬ್ಯಾರೇಜ್‌ಗಳಲ್ಲಿನ ನೀರಿನ ಕೊರತೆ ನಡೆಯುವ ಕೆಲ ರೈತರು ಭೀಮಾ ನದಿ ಅಕ್ಕಪಕ್ಕದಲ್ಲಿ ಭತ್ತ ನಾಟಿ ಮಾಡಿದ್ದರು. ಆದರೆ, ಈಗ ಎಲ್ಲ ರೈತರು ಸಸಿ ಮಡಿ ಭತ್ತ ನಾಟಿಗೆ ಕೈ ಹಾಕಿದ್ದಾರೆ.
ಭೀಮಾ ನದಿಯ ಎಡ ಮತ್ತು ಬಲ ಭಾಗದಲ್ಲಿ ಈಗ ಭತ್ತದ ಹಸಿರು ಪೈರು ಕಾಣಿಸುತ್ತಿದೆ. ನದಿಗೆ ಒಳ ಹರಿವು ಇರುವ ಕಾರಣ ರೈತರು ಸಂತಸಗೊಂಡಿದ್ದಾರೆ.
ಭತ್ತದ ಸಸಿ ಟ್ರ್ಯಾಕ್ಟರ್‌ನಲ್ಲಿ: ಭತ್ತದ ನಾರಿನ ಸಸಿಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಟ್ರ್ಯಾಕ್ಟರ್ ಬಳಕೆಯಾಗುತ್ತಿದೆ. ಮಹಿಳೆಯರು, ಪುರುಷರು ಸಸಿಯನ್ನು ಕಿತ್ತು ಟ್ರ್ಯಾಕ್ಟರ್ ಮೂಲಕ ಬೇರೆಡೆ ಸಾಗಿಸಿ ಅಲ್ಲಿ ನಾಟಿ ಮಾಡುತ್ತಿದ್ದಾರೆ.
‘ಗುತ್ತಿಗೆದಾರರು ನಮ್ಮನ್ನು ಇಲ್ಲಿಗೆ ಭತ್ತ ನಾಟಿಗೆ ಕರೆ ತಂದಿದ್ದಾರೆ. ಎಕರೆಗೆ ಇಂತಿಷ್ಟು ಎಂದು ನಿಗದಿ ಮಾಡಿ ಭತ್ತ ನಾಟಿ ಮಾಡುತ್ತೇವೆ. ನಾಟಿ ಮುಗಿದ ನಂತರ ಗ್ರಾಮಗಳಿಗೆ ತೆರಳುತ್ತೇವೆ’ ಎಂದು ಕೂಲಿಕಾರ ಮಹಿಳೆಯರು ತಿಳಿಸಿದರು.
ಪುರುಷರ ಅಂಗಿ ಧರಿಸಿದ ಮಹಿಳೆಯರು: ಭೀಮಾ ನದಿ ವ್ಯಾಪ್ತಿಯಲ್ಲಿ ಭತ್ತ ನಾಟಿ ಮಾಡಲು ವಿವಿಧೆಡೆಯಿಂದ ಕೂಲಿಕಾರರು ಬಂದಿದ್ದಾರೆ. ಮಹಿಳೆಯರು ಪುರುಷರ ಅಂಗಿಗಳನ್ನು ಧರಿಸಿ ನಾರು ಮಡಿ ಕಿತ್ತು ಭತ್ತ ನಾಟಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವರು ಮುಖಕ್ಕೆ ಟವಲ್ ಸುತ್ತಿಕೊಂಡಿದ್ದರೆ, ತಲೆಗೆ ಪ್ಲಾಸ್ಟಿಕ್ ಹೊದಿಕೆ, ಮಳೆ ಬಂದರೆ ಆಸರೆ ಪಡೆಯಲು ತಾಡಪತ್ರಿ ಬೆನ್ನಿಗೆ ಕಟ್ಟಿಕೊಂಡು ನಾಟಿ ಮಾಡುತ್ತಿರುವ ದೃಶ್ಯ ಈಗ ಕಾಣಿಸುತ್ತಿದೆ.
ಭೀಮಾ ನದಿ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವುದರಿಂದ ಒಳಹರಿವು ಹೆಚ್ಚಳವಾಗಿದೆ. ಈ ಬಾರಿಯಾದರೂ ಎರಡು ಬೆಳೆ ಸಮೃದ್ಧಿಯಾಗಿ ಬೆಳೆದು ರೈತರು ಕಷ್ಟ ನಿವಾರಿಸಿಕೊಳ್ಳಬೇಕಾಗಿದೆ
-ಬಾಗೂ ಬಾಲೆಸನೋರ್ ರೈತ ನಾಯ್ಕಲ್
ಭೀಮಾ ನದಿ ವ್ಯಾಪ್ತಿಯಲ್ಲಿ ಭತ್ತ ನಾಟಿಗೆ ಸ್ಥಳೀಯರೂ ಸೇರಿದಂತೆ ವಿವಿಧೆಡೆಯಿಂದ ಜನರು ಬಂದಿದ್ದಾರೆ. ಈಗ ಎಲ್ಲೆಡೆ ಭತ್ತ ನಾಟಿ ಮಾಡುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ
- ಸಿದ್ಧಬಸಯ್ಯಸ್ವಾಮಿ ರೈತ ಗುರುಸಣಗಿ
1000 ಕ್ಯುಸೆಕ್ ಒಳಹರಿವು ಯಾದಗಿರಿ ನಗರ ಹೊರವಲಯದ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಗುರುಸಣಗಿ–ಯಾದಗಿರಿ ಬ್ರಿಜ್ ಕಂ ಬ್ಯಾರೇಜ್‌ಗೆ 1000 ಕ್ಯುಸೆಕ್ ಒಳ ಹರಿವು ಇದ್ದರೆ ಅಷ್ಟೆ ಪ್ರಮಾಣದ ನೀರನ್ನು ಭೀಮಾ ನದಿಗೆ ಬಿಡಲಾಗು ತ್ತಿದೆ. ಬ್ಯಾರೇಜ್ 24 ಹೈಡ್ರಾಲಿಕ್ ಗೇಟ್‌ಗಳನ್ನು ಹೊಂದಿದ್ದು ಒಂದು ಗೇಟಿನ ಮೂಲಕ ನೀರನ್ನು ಹರಿಸಲಾಗುತ್ತಿದೆ. 0.568 ಸಂಗ್ರಹ ಸಾಮರ್ಥ್ಯ ಹೊಂದಿದ್ದು 0.435 ಟಿಎಂಸಿ ನೀರಿದೆ. 8 ಮೀಟರ್ ಎತ್ತರ ಹೊಂದಿದ್ದು ಸದ್ಯ 6 ಮೀಟರ್ ನೀರಿದೆ. ಚಿತ್ತಾಪುರ ತಾಲ್ಲೂಕಿನ ಸನ್ನತಿ ಬ್ರಿಜ್ ಕಂ ಬ್ಯಾರೇಜ್‌ನಿಂದ 1500 ಕ್ಯುಸೆಕ್ ನೀರು ಒಳ ಹರಿವಿದ್ದರೆ 1500 ಕ್ಯುಸೆಕ್ ನೀರು ಭೀಮಾ ನದಿಗೆ ಹರಿಸಲಾಗುತ್ತಿದೆ.
ಯಾದಗಿರಿಯಲ್ಲಿ ಭತ್ತಕ್ಕೆ ‘ಗ್ರೀನ್ ಸಿಗ್ನಲ್’ ಜಿಲ್ಲೆಯಲ್ಲಿ ಭೀಮಾ ನದಿ ವ್ಯಾಪ್ತಿಯಲ್ಲಿ ಮಾತ್ರ ಭತ್ತ ನಾಟಿ ಮಾಡಲು ಕೃಷಿ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ್ದು ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ನೀಡುತ್ತಿದೆ. ಉಳಿದ ಕಡೆ ಭತ್ತ ನಿಷೇಧಿತ ಬೆಳೆಯಾಗಿದೆ. ಭೀಮಾ ನದಿ ನೀರನ್ನು ಕುಡಿಯಲು ಹಾಗೂ ಕೃಷಿಗೂ ಬಳಸುತ್ತಿರುವುದರಿಂದ ಇಲ್ಲಿ ಭತ್ತ ಬೆಳೆಯಬಹುದು. ಆದರೆ ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಭತ್ತ ನಿಷೇಧಿತ ಬೆಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.