
ವಡಗೇರಾ: ಕಳೆದ ತಿಂಗಳು ಸುರಿದ ಮಳೆ ಹಾಗೂ ಭೀಮಾ ನದಿಯ ಪ್ರವಾಹದಿಂದ ತಾಲ್ಲೂಕಿನ ವ್ಯಾಪ್ತಿಯ ಜಿಲ್ಲಾ ಮುಖ್ಯರಸ್ತೆ ಹಾಗೂ ಗ್ರಾಮೀಣ ಕೂಡು ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಜಿಲ್ಲಾ ಮುಖ್ಯ ರಸ್ತೆ (ಎಂಡಿಆರ್) ರಸ್ತೆಯು ತಾಲ್ಲೂಕಿನ ಹುಲ್ಕಲ್ ಗೇಟ್‌ನ ಅನತಿ ದೂರದಲ್ಲಿ ಹಾಗೂ ಹಳ್ಳದ ಸೇತುವೆಯ ಹತ್ತಿರ ರಸ್ತೆಯ ನಡುವೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ವಾಹನ ಚಾಲಕರು ಚಾಲನೆಯಲ್ಲಿ ಅಜಾಗುರುಕತೆ ತೋರಿದರೆ ವಾಹನದ ಜತೆ ಹಳ್ಳದಲ್ಲಿ ಬೀಳುವದು ಗ್ಯಾರಂಟಿ.
ಕಳೆದ ಎರಡು ತಿಂಗಳ ಹಿಂದೆ ಹುಲ್ಕಲ್ ಗೇಟ್‌ನ ಅನತಿ ದೂರದಲ್ಲಿ ಇರುವ ಹಳ್ಳದ ಸೇತುವೆಯ ಹತ್ತಿರ ಗುಂಡಿಗಳನ್ನು ತಪ್ಪಿಸಲು ಹೋಗಿ ತರಕಾರಿ ಸರಬರಾಜು ಮಾಡುವ ವಾಹನ ಹಾಗೂ ಕಾರ್ ರಸ್ತೆ ಬದಿಯಲ್ಲಿ ಉರುಳಿದ್ದವು.
ವಡಗೇರಾ ಪಟ್ಟಣದಿಂದ ತುಮಕೂರು ಗ್ರಾಮಕ್ಕೆ ಹೋಗುವ ಜಿಲ್ಲಾ ಮುಖ್ಯ ರಸ್ತೆಯ ನಡುವೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಇದರಿಂದಾಗಿ ಅನೇಕ ದ್ವಿಚಕ್ರ ವಾಹನ ಸವಾರರು ವಾಹನದ ನಿಯಂತ್ರಣ ತಪ್ಪಿ ಕೈ ಕಾಲುಗಳನ್ನು ಮುರಿದುಕೊಂಡ ಉದಾಹರಣೆಗಳೂ ಇವೆ.
ಇನ್ನೂ ಕೆಲವೆ ದಿನಗಳಲ್ಲಿ ತುಮಕೂರು ಗ್ರಾಮದ ಹತ್ತಿರವಿರುವ ಕೋರಗ್ರೀನ್ ಸಕ್ಕರೆ ಕಾರ್ಖಾನೆಗೆ ಜಿಲ್ಲೆಯಿಂದ ಹಾಗೂ ಪಕ್ಕದ ಜಿಲ್ಲೆಯಿಂದ ಲಾರಿಗಳು ಕಬ್ಬನ್ನು ತುಂಬಿಕೊಂಡು ಬರುತ್ತವೆ. ಕಬ್ಬು ತುಂಬಿರುವ ಲಾರಿಗಳು ಸಂಚರಿಸಲಿದ್ದು, ಗುಂಡಿಗಳಿಂದ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು. ಶೀಘ್ರ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಲಾರಿ ಚಾಲಕರು.
ತಾಲ್ಲೂಕಿನ ಗಡ್ಡೆಸೂಗುರು ಗೇಟ್‌ದಿಂದ ಶ್ರೀರಂಗಪುರ, ಹಾದಿ ಬಸವಣ್ಣನ ದೇವಸ್ಥಾನದಿಂದ ಕೋನಹಳ್ಳಿ, ಕೋನಹಳ್ಳಿ ಯಿಂದ ರೊಟ್ನಡಗಿ ಗೇಟ್, ಬಿಳ್ಹಾರ, ಕಂದಳ್ಳಿ ಗಡಿ ಅಂಚಿನ ಗ್ರಾಮಗಳಾದ ಜೋಳದಡಗಿ ಯಿಂದ ಕೊಂಗಂಡಿ ಹಾಗೂ ಸೂಗೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇದರಿಂದಾಗಿ ಸಕಾಲದಲ್ಲಿ ಗ್ರಾಮಸ್ಥರಿಗೆ ತಮಗೆ ತಲುಪಬೇಕಾದ ಸ್ಥಳಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಬೆಳಗಿನ ಅವಧಿಯ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.
ಕೆಲವು ಗ್ರಾಮಗಳಿಗೆ ಹೋಗುವ ರಸ್ತೆಗಳು ಹಾಳಾಗಿರುವದರಿಂದ ಸಾರಿಗೆ ಬಸ್‌ಗಳು ಸಂಚರಿಸುವುದನ್ನು ನಿಲ್ಲಿಸಿದೆ. ಇದರಿಂದ ಗ್ರಾಮಸ್ಥರು ಖಾಸಗಿ ವಾಹನಗಳ ಮೋರೆ ಹೋಗುವದು ಅನಿವಾರ್ಯವಾಗಿದೆ.
ವಡಗೇರಾ ತಾಲ್ಲೂಕಿನ ಬಹುತೇಕ ಗ್ರಾಮೀಣ ಕೂಡು ರಸ್ತೆಗಳು ಸಂಪೂರ್ಣ ಹಾಳಾಗಿವೆ. ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ತಾಲ್ಲೂಕಿನ ಗ್ರಾಮೀಣ ರಸ್ತೆಗಳ ದುರಸ್ತಿಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ, ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಒತ್ತಾಸೆಯಾಗಿದೆ.
ವಡಗೇರಾ ದಿಂದ ತುಮಕೂರ ಗ್ರಾಮದವರೆಗೆ ಜಿಲ್ಲಾ ಮುಖ್ಯರಸ್ತೆ ದುರಸ್ತಿಗೆ ಸುಮಾರು ₹ 5 ಕೋಟಿ ಯೋಜನೆ ಸಿದ್ದಪಡಿಸಿ ಅನುಮೋದನೆಗೆ ಕಳುಹಿಸಲಾಗಿದೆ. ಅನುಮೋದನೆಗೆ ಅನುಮತಿ ಸಿಕ್ಕ ತಕ್ಷಣ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದುಸೂಗರಡ್ಡಿ ಎಇಇ ಲೋಕೋಪಯೋಗಿ ಇಲಾಖೆ
ತಾಲ್ಲೂಕಿನ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಸಾಮಾನ್ಯ ಜನರು ಈ ರಸ್ತೆಗಳ ಮೇಲೆ ನಡೆದಾಡಬೇಕಾದರೆ ಹರಸಾಹಸ ಪಡಬೇಕಾಗಿದೆ. ಕೂಡಲೆ ಗ್ರಾಮೀಣ ಕೂಡು ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕುಹಣಮಂತ ಬಸಂತಪೂರ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.