ADVERTISEMENT

ಯಾದಗಿರಿ | ಕೃಷಿಗೆ ಮುನ್ನುಡಿ: ರೈತರಿಗೆ ಜಾಗೃತಿ

ಜಿಲ್ಲೆಯಾದ್ಯಂತ ಕೃಷಿ ಚಟುವಟಿಗಳ ಜಾಗೃತಿ ಆಂದೋಲನ

ಬಿ.ಜಿ.ಪ್ರವೀಣಕುಮಾರ
Published 24 ಮೇ 2025, 6:49 IST
Last Updated 24 ಮೇ 2025, 6:49 IST
ಯಾದಗಿರಿ ಜಿಲ್ಲೆಯ ಹುಣಸಗಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಗುಂಡಲಗೇರಾ ಗ್ರಾಮದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು
ಯಾದಗಿರಿ ಜಿಲ್ಲೆಯ ಹುಣಸಗಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಗುಂಡಲಗೇರಾ ಗ್ರಾಮದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು    

ಯಾದಗಿರಿ: ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ‌‌ಆರಂಭಗೊಂಡಿದ್ದು, ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

2025–26ನೇ ಸಾಲಿನ ಮುಂಗಾರು ಹಂಗಾಮಿನ ಕೃಷಿ ಚಟುವಟಿಗಳ ಜಾಗೃತಿ ಆಂದೋಲನ ಜಿಲ್ಲೆಯಾದ್ಯಂತ ನಡೆಯುತ್ತಿದೆ. ಗ್ರಾಮದ ಅರಳಿ ಕಟ್ಟೆ, ದೇವಸ್ಥಾನದ ಆವರಣ, ಗ್ರಾಮ ಪಂಚಾಯಿತಿ ಆವರಣ ಸೇರಿದಂತೆ ಜನರು ಗುಂಪಾಗಿ ಇರುವ ಕಡೆ ಕೃಷಿ ಅಧಿಕಾರಿಗಳು ತೆರಳಿ ಮಾಹಿತಿ ನೀಡುತ್ತಿದ್ದಾರೆ.

ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳ ಬಳಕೆ ಹಾಗೂ ಬೀಜೋಪಚಾರ, ರಸಗೊಬ್ಬರಗಳ ಸಮರ್ಪಕ ಪರ್ಯಾಯ ಬಳಕೆ (ನ್ಯಾನೊ ಯೂರಿಯಾ, ನ್ಯಾನೊ ಡಿಎಪಿ, ಸಂಯುಕ್ತ ಗೊಬ್ಬರಗಳು), ಸುರಕ್ಷಿತ ಕೀಟನಾಶಗಳ ಬಳಕೆ, ಬೆಳೆ ಸಮೀಕ್ಷೆ, ಬೆಳೆ ವಿಮೆ ಅಭಿಯಾನ, ಕಟಾವಾದಾಗ ಭತ್ತದ ಹೊಲದಲ್ಲಿ ಹುಲ್ಲಿನ ಕಸವನ್ನು ಸುಡದಿರುವ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿವೆ.

ADVERTISEMENT

ಮುಂಗಾರು ಹಂಗಾಮಿನಲ್ಲಿ ಭತ್ತ, ಸಜ್ಜೆ, ತೊಗರಿ, ಹೆಸರು, ಹತ್ತಿ, ಉದ್ದು ಹೆಚ್ಚು ಬಿತ್ತನೆ ಮಾಡಲಾಗುತ್ತಿದೆ. ಕಳೆದ ವಾರದಿಂದಲೂ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಬಿತ್ತನೆಗೆ ಅನುಕೂಲವಾಗಿದೆ. ಆದರೆ, ಬಿತ್ತನೆಗೆ ಸೂಕ್ತ ಕಾಲವಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 4.16 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದು, ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ, ಇನ್ನಿತರ ಕೃಷಿ ಸಂಬಂಧಿತ ಪರಕರ ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇರುವುದರಿಂದ ರೈತರು ಬಿತ್ತನೆಗೆ ಜಮೀನು ಹದ ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಸಂಬಂಧಿತ ಜಾಗೃತಿ ಕಾರ್ಯಕ್ರಮ ನಡೆಯುತ್ತಿವೆ
ರತೇಂದ್ರನಾಥ ಸೂಗೂರು ಜಂಟಿ ಕೃಷಿ ನಿರ್ದೇಶಕ

ತೆಲಂಗಾಣ ಗಡಿಯಲ್ಲಿ ಜಾಗೃತಿ ಪಕ್ಕದ ತೆಲಂಗಾಣ ರಾಜ್ಯದ ಗಡಿಯನ್ನು ಜಿಲ್ಲೆಯ ಯಾದಗಿರಿ ಹಾಗೂ ಗುರುಮಠಕಲ್‌ ತಾಲ್ಲೂಕುಗಳು ಹಂಚಿಕೊಂಡಿವೆ. ಇದರಿಂದ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಮುಂಗಾರು ಹಂಗಾಮಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಗಡಿಯಲ್ಲಿ ಅನಧಿಕೃತವಾಗಿ ಹತ್ತಿ ಬೀಜವನ್ನು ಸಾಗಾಣಿಕೆ ಮಾಡುವವರ ಮೇಲೆ ನಿಗಾ ಇಡಲು ತೆಲಂಗಾಣ ಗಡಿ ಭಾಗದ ಕುಂಟಿಮರಿ ಚೆಕ್‌ಪೋಸ್ಟ್ ಪೊಲೀಸ್ ಸಿಬ್ಬಂದಿಗೆ ಮನವಿ ಮಾಡಲಾಗಿದೆ. ಅಧಿಕೃತ ಮಾರಾಟಗಾರರಿಂದಲೇ ಹತ್ತಿ ಬೀಜ ಖರೀದಿಸಿ. ಗುಣಮಟ್ಟದ ಹತ್ತಿ ಬೀಜಗಳನ್ನೇ ಬಿತ್ತನೆ ಮಾಡಿ ಅನಧಿಕೃತವಾಗಿ ಬೀಜ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಬೀಜ ಖರೀದಿಸಿ ರಸೀದಿ ಕಡ್ಡಾಯವಾಗಿ ಪಡೆಯಿರಿ ಎಂದು ತಿಳಿವಳಿಕೆ ಮೂಡಿಸುವ ಕೆಲಸ ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.