ADVERTISEMENT

ಅಪರಾಧ ಪ್ರಕರಣ ತಡೆಗೆ ಆದ್ಯತೆ; ಜಿಲ್ಲಾಧಿಕಾರಿ

ಜಿಲ್ಲಾಮಟ್ಟದ ಅಧಿಕಾರಿ, ಸಂಘ–ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಸಭೆಯಲ್ಲಿ ಡಿಸಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 7:51 IST
Last Updated 13 ಅಕ್ಟೋಬರ್ 2021, 7:51 IST
ಮಹಿಳಾ ದೌರ್ಜನ್ಯ ತಡೆ ಬಗ್ಗೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಸಂಘ–ಸಂಸ್ಥೆಯ ಪದಾಧಿಕಾರಿಗಳ ಸಭೆ ನಡೆಯಿತು. ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌, ಎಸ್‌ಪಿ. ಬಿ.ವೇದಮೂರ್ತಿ, ಎಡಿಸಿ ಶಂಕರಗೌಡ ಸೋಮನಾಳ ಇದ್ದರು
ಮಹಿಳಾ ದೌರ್ಜನ್ಯ ತಡೆ ಬಗ್ಗೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಸಂಘ–ಸಂಸ್ಥೆಯ ಪದಾಧಿಕಾರಿಗಳ ಸಭೆ ನಡೆಯಿತು. ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌, ಎಸ್‌ಪಿ. ಬಿ.ವೇದಮೂರ್ತಿ, ಎಡಿಸಿ ಶಂಕರಗೌಡ ಸೋಮನಾಳ ಇದ್ದರು   

ಯಾದಗಿರಿ: ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಅಪಹರಣ, ಇನ್ನಿತರ ಅಪರಾಧ ಕೃತ್ಯದಲ್ಲಿ ಭಾಗಿಯಾದವರಿಗೆ ಬಿಸಿ ಮುಟ್ಟಿಸಿ ಅಪರಾಧ ಪ್ರಕರಣಗಳ ತಡೆಗೆ ಮೊದಲ ಆದ್ಯತೆ ನೀಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.ಅವರು ಸೂಚಿಸಿದರು.

ಜಿಲ್ಲೆಯಲ್ಲಿ ಅತ್ಯಾಚಾರ, ದೌರ್ಜನ್ಯ, ಬಾಲ್ಯ ವಿವಾಹ ಮತ್ತಿತರ ವಿಷಯಗಳ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಸಂಘ–ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಮಂಗಳವಾರಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಸೇರಿದಂತೆ ಮಹಿಳಾ ದೌರ್ಜನ್ಯಗಳು ಅಧಿಕವಾಗುತ್ತಿರುವುದು ಕಳವಳಕಾರಿ. ಇಂಥ ಘಟನೆಗಳು ಸಾಮಾಜಿಕವಾಗಿಯೂ ವ್ಯಾಪಕ ಪರಿಣಾಮ ಬೀರುತ್ತಿವೆ. ಈ ನಿಟ್ಟಿನಲ್ಲಿ ಇವುಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ADVERTISEMENT

ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಗಮನಹರಿಸಬೇಕು. ಸಂಶಯಾಸ್ಪದ ವ್ಯಕ್ತಿಗಳ ವಿರುದ್ಧ ತೀವ್ರ ನಿಗಾ ಇಡಬೇಕು. ಪೊಲೀಸ್ ಇನ್‌ಪೆಕ್ಟರ್‌ಗಳು ತಮ್ಮ ಹಂತದಲ್ಲಿಯೇ ಈ ಬಗ್ಗೆ ಮೇಲ್ವಿಚಾರಣೆ ವಹಿಸಿ, ಸೂಕ್ಷ್ಮವಾಗಿ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ವೇಳೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಮಾತನಾಡಿ, ಜಿಲ್ಲೆಯಲ್ಲಿ ಮಹಿಳೆ ಮೇಲೆ ಪದೇ ಪದೇ ನಡೆಯುವ ದೌರ್ಜನ್ಯ ಹಾಗೂ ಕೌಟುಂಬಿಕ ಹಿಂಸೆ, ಎಲ್ಲಾ ಇಲಾಖೆಗಳಿಗೆ ಸಂವೇದನೆ ತರಬೇತಿ ಮತ್ತು ಸಾಮಾಜಿಕ ನ್ಯಾಯದ ತಿಳಿವಳಿಕೆ ಬಗ್ಗೆ, ಲೈಂಗಿಕ ದೌರ್ಜನ್ಯ ತಡೆ ಸಮಿತಿ ರಚನೆ ಕುರಿತು, ಪೊಲೀಸ್ ಇಲಾಖೆಯು ಜನಸ್ನೇಹಿಯಾಗಿಸಲು ಕ್ರಮ ವಹಿಸುವುದು, ಹಣಕಾಸು ಲೇವಾದೇವಿದಾರರಿಂದ ಬಡ ಕೂಲಿ ಕಾರ್ಮಿಕರಿಗೆ ಅಗ್ಗದ ಬಡ್ಡಿದರದಲ್ಲಿ ಸಾಲವನ್ನು ನೀಡಿ ಹಿಂಸಿಸುತ್ತಿರುವ ಕುರಿತು, ನರೇಗಾ ಮತ್ತು ಇತರ ಆರ್ಥಿಕ ಸ್ವಾವಲಂಬನೆ ಕಾಯ್ದೆ ಜಾರಿಗೊಳಿಸುವ ಕುರಿತು ಮತ್ತು ಜಿಲ್ಲೆಯಲ್ಲಿ ಅಸ್ಪೃಶ್ಯತೆ ಪಿಡುಗನ್ನು ನಿವಾರಿಸುವ ಕುರಿತಂತೆ ಸಭೆಯಲ್ಲಿ ಮನವಿ ಮಾಡಿದರು.

ಇದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಸ್ಪಂದಿಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನಿನ ಪ್ರಕಾರ ಶಿಕ್ಷೆಗೊಳಪಡಿಸಲಾಗುವುದು ಎಂದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪ್ರಭಾಕರ ಕವಿತಾಳ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಮಚಂದ್ರ ಗೋಳಾ, ಮಕ್ಕಳ ರಕ್ಷಣಾಧಿಕಾರಿ ಮಲ್ಲಣ್ಣ ದೇಸಾಯಿ ಸೇರಿದಂತೆ ಸಂಘ–ಸಂಸ್ಥೆಯ ಪದಾಧಿಕಾರಿಗಳು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.