ಯಾದಗಿರಿ: ಸರ್ಕಾರ ಪ್ರವಾಸೋದ್ಯಮ ಪಟ್ಟಿಯಲ್ಲಿ ಐತಿಹಾಸಿಕ ಯಾದಗಿರಿ ಬೆಟ್ಟವನ್ನು ಸೇರಿಸಿದೆ. ಆದರೆ, ಅಲ್ಲಿರುವ ವಸ್ತುಗಳನ್ನು ಸಂರಕ್ಷಣೆ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಸ್ಯಾಂಸನ್ ಮಾಳಿಕೇರಿ ಆರೋಪಿಸಿದರು.
ನಗರದ ಹೃದಯ ಭಾಗದಲ್ಲಿ ಇರುವ ಕೋಟೆ ರಾಜ್ಯದ ಅತಿದೊಡ್ಡ ಬೆಟ್ಟದ ಕೋಟೆಗಳಲ್ಲಿ ಒಂದಾಗಿದೆ. ಆದರೆ, ಈ ಕೋಟೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಲವಾರು ಪ್ರವಾಸಿ ತಾಣಗಳು ಅಭಿವೃದ್ಧಿಯಿಂದ ಮರೀಚಿಕೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
ಯಾದಗಿರಿ ಬೆಟ್ಟದಲ್ಲಿ ಸುಮಾರು ಏಳು ತೋಪುಗಳು ಕೋಟೆಯ ಮೇಲೆ ಇದ್ದವು. ಅದರಲ್ಲಿ ನಾಲ್ಕು ತೋಪುಗಳು ಈಗ ಕಣ್ಮರೆಯಾಗಿವೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ವೈಫಲ್ಯ ಕಂಡುಬರುತ್ತಿದೆ ಎಂದು ದೂರಿದರು.
ನಗರಕ್ಕೆ ದೊಡ್ಡ ರಾಜಕಾರಣಿಗಳು ಬಂದಾಗ ಯಾದಗಿರಿ ಐತಿಹಾಸಿಕ ಬೆಟ್ಟವನ್ನು ಜಿಲ್ಲಾಡಳಿತದ ಮೇಲಧಿಕಾರಿಗಳು ವೀಕ್ಷಣೆಗೆ ಕರೆದುಕೊಂಡು ಹೋಗುತ್ತಾರೆ. ಆದರೆ, ಅಲ್ಲಿ ಇದ್ದ ತೋಪುಗಳು ಇನ್ನಿತರ ವಸ್ತುಗಳು ರಕ್ಷಣೆ ಮಾಡುತ್ತಿಲ್ಲ. ಇದಕ್ಕೆ ನೇರ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಆ ಬೆಟ್ಟದಲ್ಲಿ ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥೆ ಮಾಡಬೇಕು. ಕಾಯಂ ಆಗಿ ಒಬ್ಬ ಪೊಲೀಸ್ ಅಧಿಕಾರಿ ನೇಮಿಸಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.