ADVERTISEMENT

ಎಂಜಿನಿಯರ್ ನೇಮಕಾತಿಯಲ್ಲಿ ಮೀಸಲಾತಿ ಕಡೆಗಣನೆ

ಲೋಕೋಪಯೋಗಿ ಇಲಾಖೆ ತಾರತಮ್ಯ ನೀತಿ ವಿರುದ್ಧ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 9:45 IST
Last Updated 2 ಏಪ್ರಿಲ್ 2019, 9:45 IST
ರಾಜ್‌ಕುಮಾರ್ ಗನೇರ್
ರಾಜ್‌ಕುಮಾರ್ ಗನೇರ್   

ಯಾದಗಿರಿ: ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಹುದ್ದೆ ಆಯ್ಕೆಯಲ್ಲಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ ನೀಡಬೇಕಿರುವ ಮೀಸಲಾತಿಯನ್ನು ಕಡೆಗಣಿಸಲಾಗಿದೆ. ಇದರಿಂದ ನೂರಾರು ನಿರುದ್ಯೋಗಿ ಎಂಜಿನಿಯರಿಂಗ್ ಪದವೀಧರಿಗೆ ಅನ್ಯಾಯ ಆಗಿದೆ’ ಎಂದು ಆರ್.ವಿ. ಕನ್ಸಲ್ಟಿಂಗ್‌ ಮುಖ್ಯಸ್ಥ ರಾಜ್‌ಕುಮಾರ್ ಗನೇರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಲೋಕೊಪಯೋಗಿ ಸಚಿವ ಎಚ್.ಡಿ.ರೇವಣ್ಣ ಎಂಜಿನಿಯರ್‌ ಹುದ್ದೆಗಳನ್ನು ಭರ್ತಿ ಮಾಡಲು ಮಾರ್ಚ್ 7 ರಂದು ಅಧಿಸೂಚನೆ ಹೊರಡಿಸಿದ್ದಾರೆ. ಆದರೆ, ಅಧಿಸೂಚನೆಯಲ್ಲಿ ನಿಯಮದಂತೆ ಶೇ 8ರಷ್ಟು ಮೀಸಲಾತಿಯನ್ನು ಪರಿಗಣಿಸಿಲ್ಲ. ಈಗಾಗಲೇ ಮಾರ್ಚ್10ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿರುವುದರಿಂದ ಪದವೀಧರ ಯುವಕರು ಆತಂಕಪಡುವಂತಾಗಿದೆ. ಈ ಕುರಿತು ಮುಖ್ಯಮಂತ್ರಿ, ಸಚಿವರಿಗೆ, ಅಧಿಕಾರಿಗಳ ಮಟ್ಟದಲ್ಲೂ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆ ನಡೆಸುತ್ತಿರುವ ಎಂಜಿನಿಯರ್ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ಶೇ 8ರಷ್ಟು ಮೀಸಲಾತಿಯಡಿ ಮರಳಿ ನೇಮಕಾತಿ ಅರ್ಜಿ ಆಹ್ವಾನಿಸಬೇಕು. ನಿರ್ಲಕ್ಷಿಸಿದರೆ ಏ.8ರಂದು ಮಾಜಿ ಸಚಿವ ವೈಜನಾಥ ಪಾಟೀಲ್ ನೇತೃತ್ವದಲ್ಲಿ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

ಕೋಲಿ ಸಮಾಜದ ಮುಖಂಡ ಸಿ.ಎಂ.ಪಟ್ಟೇದಾರ ಮಾತನಾಡಿ,‘ಎರಡು ದಶಕಗಳ ಕಾಲ ಮಾಜಿ ಸಚಿವ ವೈಜನಾಥ ಪಾಟೀಲ್ ಹಾಗೂ ಇತರ ನಾಯಕರ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಂವಿಧಾನದ 371 (ಜೆ) ತಿದ್ದುಪಡಿಯಾಯಿತು. ಆದರೆ, ರಾಜ್ಯ ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ಅದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ಪರಿಣಾಮ ನಮ್ಮ ಯುವಕರು ಅವಕಾಶಗಳಿಂದ ವಂಚಿತರಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಾಸಬಾಳ ಮಠದ ವೀರೇಶ್ವರ ಸ್ವಾಮೀಜಿ ಮಾತನಾಡಿ,‘ರಾಜ್ಯ ಸರ್ಕಾರ ಅಖಂಡ ಕರ್ನಾಟಕದ ಸಮಗ್ರ ಅಭಿವೃದ್ಧಿ ದೃಷ್ಟಿಕೋನದಿಂದ ಕೆಲಸ ಮಾಡಿದಾಗ ಮಾತ್ರ ಬದಲಾವಣೆ ಕಾಣಲು ಸಾಧ್ಯ. ಈ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬೀರೇಶ ಚಿರತೆನೋರ್, ಸಾಬಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.