ADVERTISEMENT

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ: ಶೇ 92.42 ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 16:40 IST
Last Updated 15 ಡಿಸೆಂಬರ್ 2020, 16:40 IST
ಯಾದಗಿರಿಯ ಬಿಇಒ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಶಾಲಾ ಶಿಕ್ಷಕರು, ಶಿಕ್ಷಕಿಯರು
ಯಾದಗಿರಿಯ ಬಿಇಒ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಶಾಲಾ ಶಿಕ್ಷಕರು, ಶಿಕ್ಷಕಿಯರು   

ಯಾದಗಿರಿ: ಕರ್ನಾಟಕ ರಾಜ್ಯ ಯಾದಗಿರಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ 92.42ರಷ್ಟು ಮತದಾನವಾಗಿದೆ.

ನಗರದ ಬಿಇಒ ಕಚೇರಿ ಆವರಣದಲ್ಲಿ ಮಂಗಳವಾರ ಬೆಳಿಗ್ಗೆ 7.30ರಿಂದ ಸಂಜೆ 4 ಗಂಟೆ ವರೆಗೆ ಮತದಾನ ಪ‍್ರಕ್ರಿಯೆ ನಡೆಯಿತು. ಉತ್ಸಾಹದಿಂದ ಶಾಲಾ ಶಿಕ್ಷಕರು, ಶಿಕ್ಷಕಿಯರು ಪಾಲ್ಗೊಂಡಿದ್ದರು.

ಯಾದಗಿರಿ ತಾಲ್ಲೂಕಿನಲ್ಲಿ ಮೂರು ವಲಯಗಳಿವೆ. ಯಾದಗಿರಿ, ಯರಗೋಳ, ಸೈದಾಪುರ ವಲಯ ವ್ಯಾಪ್ತಿಯ ಶಿಕ್ಷಕರು ಮತದಾನ ಮಾಡಿದರು.

ADVERTISEMENT

16 ಸ್ಥಾನಕ್ಕೆ ನಡೆದ ಚುನಾವಣೆ: ಶಿಕ್ಷಕರ ಸಂಘದಲ್ಲಿ 803 ಮತದಾರರಿದ್ದು, 742 ಶಿಕ್ಷಕರು ಮತದಾನ ಮಾಡಿದ್ದಾರೆ. ಇದರಲ್ಲಿ 388 ಪುರುಷ ಮತದಾರರು, 354 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 16 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 32 ಜನ ಸ್ಪರ್ಧಿಸಿದ್ದಾರೆ. 25ಜನ ಪುರುಷರು, 7 ಮಹಿಳಾ ಶಿಕ್ಷಕರು ಸ್ಪರ್ಧಿಸಿದ್ದಾರೆ. 11 ಜನ ಪುರುಷ ಶಿಕ್ಷಕರು, 5 ಜನ ಮಹಿಳಾ ಶಿಕ್ಷಕಿಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಸಲಾಗಿದೆ.

30 ಪುರುಷ ಶಿಕ್ಷಕರು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ 5 ಜನ ನಾಮಪತ್ರ ಹಿಂಪಡೆದು 25 ಜನ ಸ್ಪರ್ಧಿಸಿದ್ದಾರೆ. ಮಹಿಳಾ ಸ್ಥಾನಗಳಿಗೆ 7 ಜನ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಯಾರೂ ನಾಮಪತ್ರ ಹಿಂಪಡೆದಿಲ್ಲ.

ಬೈಕ್‌, ಕಾರು, ಅಲ್ಲದೆ ಖಾಸಗಿ ವಾಹನಗಳಲ್ಲಿ ಬಂದ ಶಿಕ್ಷಕರು ಕೋವಿಡ್‌ ನಿಯಮ ಪಾಲಿಸಿ ಅಂತರ ಪಾಲಿಸಿಕೊಂಡು ಸರದಿಯಲ್ಲಿ ನಿಂತು ಶಿಕ್ಷಕರು ಮತದಾನ ಮಾಡಿದರು.

ಮತದಾರ ಶಿಕ್ಷಕರನ್ನು ಮನವೊಲಿಸುವ ಕಾರ್ಯವನ್ನು ಸ್ಪರ್ಧಾಗಳು ಮಾಡಿದರು. ಶಾಮಿಯಾನ, ಕುರ್ಚಿ, ಮೇಜು ಹಾಕಿಕೊಂಡು ಹೊರಗಡೆ ಕುಳಿತು ಶಿಕ್ಷಕರಿಗೆ ಚುನಾವಣೆ ಬಗ್ಗೆ ಮಾಹಿತಿ ನೀಡಿದರು.

ಮತದಾನ ಮುಗಿದರೂ ಮತ ಎಣಿಕೆ ಪ್ರಕ್ರಿಯೆ ಮಂಗಳವಾರ ತಡರಾತ್ರಿಯವರೆಗೂ ನಡೆಯಿತು.

ಚುನಾವಣಾ ಅಧಿಕಾರಿಯಾಗಿ ಮೈಬೂಬ್‌ ಐತಾಕಿ, ಸಹಾಯಕ ಚುನಾವಣಾ ಅಧಿಕಾರಿಯಾಗಿ ಹಣಮಂತ, ಸತ್ಯನಾರಾಯಣ, ರವೀಂದ್ರ, ಹಣಮಂತ ಕಲಾಲ್‌, ಚಾಂದ್‌ ಸಾಬ್‌ ಚೌಕಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.