
ಸುರಪುರ: ‘ದೂರದರ್ಶನ, ಮೋಬೈಲ್ ಹಾವಳಿಗಳಿಂದ ಒಂದು ಕಾಲದ ಜನರ ಮನರಂಜನೆಯಾಗಿದ್ದ ನಾಟಕಗಳು ಸೊರಗುತ್ತಿವೆ. ಈಗಲೂ ಅಲ್ಲಲ್ಲಿ ನಡೆಯುತ್ತಿರುವ ಹವ್ಯಾಸಿ ನಾಟಗಳನ್ನು ಪ್ರೋತ್ಸಾಹಿಸಬೇಕಾದ ಅಗತ್ಯವಿದೆ’ ಎಂದು ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಭೀಮನಗೌಡ ಲಕ್ಷ್ಮೀ ಹೇಳಿದರು.
ತಾಲ್ಲೂಕಿನ ವಾರಿಸಿದ್ದಾಪುರ ಗ್ರಾಮದಲ್ಲಿ ಮರೆಮ್ಮದೇವಿ ಜಾತ್ರೆ ಮತ್ತು ಕಾರ್ತಿಕೋತ್ಸವದ ಅಂಗವಾಗಿ ನಾಲ್ವಡಿ ರಾಜಾ ವೆಂಕಟಪ್ಪನಾಯಕ ನಾಟ್ಯ ಹವ್ಯಾಸಿ ಕಲಾವಿದರ ಸಾಂಸ್ಕೃತಿಕ ಸಂಘ ಆಯೋಜಿಸಿದ್ದ ಮಲ್ಲೇಶಿ ಕೋನ್ಹಾಳ ರಚಿತ ‘ನಾಡಿನ ಹುಲಿ ಕಾಡಿನ ಬಲಿ’ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರು ಮಾತನಾಡಿ, ‘ತಾಲ್ಲೂಕಿನಲ್ಲಿ ನಾಟಕ ಸಾಹಿತಿಗಳ, ರಂಗಕರ್ಮಿಗಳ ಸಂಖ್ಯೆ ಅಧಿಕವಾಗಿದೆ. ಪ್ರತಿ ವರ್ಷ ನಾಟಕಗಳ ಪ್ರದರ್ಶನ ಇರುತ್ತವೆ. ಸುರಪುರ ನಗರದಲ್ಲಿ ನಾಟಕಗಳನ್ನು ಪ್ರದರ್ಶಿಸಲು ರಂಗಮಂದಿರ ನಿರ್ಮಿಸಬೇಕು’ ಎಂದರು.
ಮುಖಂಡ ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ ಮಾತನಾಡಿ, ‘ಸಿನಿಮಾ ಮತ್ತು ನಾಟಕಗಳಿಗೆ ವ್ಯತ್ಯಾಸವಿದೆ. ನಾಟಕಗಳಲ್ಲಿ ಯಾವುದೇ ಎಡಿಟಿಂಗ್ ಇರುವುದಿಲ್ಲ. ಕಲಾವಿದ ನೇರವಾಗಿ ಪ್ರೇಕ್ಷಕರ ಎದುರಿಗೆ ಅಭಿನಯಿಸಬೇಕಾಗುತ್ತದೆ. ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಿರಬೇಕು’ ಎಂದರು.
ರಮೇಶ ದೊರೆ ಆಲ್ದಾಳ, ಹುಲಗಪ್ಪ ಶಖಾಪುರ, ಶರಣು ದಾಳಿ, ಶಿವಕುಮಾರ ಗುಮ್ಮಾ, ರಾಘವೇಂದ್ರ ಎಲಿಗಾರ, ಬಸವರಾಜ ದೋರನಹಳ್ಳಿ, ರಂಗನಾಥ ಜಾಲಹಳ್ಳಿ, ಶರಣಪ್ಪ ತಳವಾರ ಇತರರು ಉಪಸ್ಥಿತರಿದ್ದರು.
ನಿಂಗಪ್ಪನಾಯಕ ಬಿಜಾಸಪುರ ನಿರೂಪಿಸಿದರು. ರವಿಕುಮಾರನಾಯಕ ಭೈರಿಮಡ್ಡಿ ವಂದಿಸಿದರು.
ಕಲಾವಿದರಾದ ಮಲ್ಲೇಶ ಕೋನ್ಹಾಳ, ರವಿಕಿರಣ ಸಿದ್ದಾಪುರ, ಭೀಮಣ್ಣ ಸಿದ್ದಾಪುರ, ಯಂಕಪ್ಪ ಜಾಲಹಳ್ಳಿ, ರಾಮು ಮೂಲಿಮನಿ, ಮಾನಯ್ಯ ರಾಗೇರಿ, ಭೀಮು ವಾರಿ, ಹಣಮಂತ ಭೈರಿಮಡ್ಡಿ, ಶಂಕರ ಹವಾಲ್ದಾರ, ಮೀನಾಕ್ಷಿ ಮುಧೋಳ, ತ್ರಿವೇಣಿ ತುಮಕೂರ, ರಂಜಿತಾ ದುಧನಿ, ಜಾನು ಬೆಂಗಳೂರು ಅನನ್ಯವಾಗಿ ಅಭಿನಯಿಸಿ ಪ್ರೇಕ್ಷಕರ ಮನಸೂರೆಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.