ADVERTISEMENT

ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗಾಗಿ ಪ್ರಸ್ತಾವನೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 6:37 IST
Last Updated 28 ಮಾರ್ಚ್ 2023, 6:37 IST
ಶರಣಬಸಪ್ಪದರ್ಶನಾಪುರ
ಶರಣಬಸಪ್ಪದರ್ಶನಾಪುರ   

ಶಹಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ನೂತನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ಕೆಕೆಆರ್‌ಡಿಬಿ 2ನೇ ಸಭೆಯಲ್ಲಿ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದ್ದು, ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಿದೆ. ಸರ್ಕಾರ ಒಪ್ಪಿದರೆ, ಶೈಕ್ಷಣಿಕ ಸಾಲಿನಿಂದಲೇ ಕಾಲೇಜು ಪ್ರಾರಂಭಿಸಬಹುದಾಗಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.

ತಾಲ್ಲೂಕಿನ ಭೀಮರಾಯನಗುಡಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ ಅವರು, ಮಾ. 17ರಂದು ನಡೆದ ಕೆಕೆಆರ್‌ಡಿಬಿ 2ನೇ ಸಭೆಯಲ್ಲಿ ಪ್ರದೇಶಾಭಿವೃದ್ಧಿ ಮಂಡಳಿಯ ₹ 1500 ಕೋಟಿ ಅನುದಾನದಲ್ಲಿನ ಮ್ಯಾಕ್ರೋ ಮೆಗಾ ಯೋಜನೆ ಅಡಿಯಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಿಗಾಗಿ ₹ 10.75 ಕೋಟಿ ಅನುದಾನ ನಿಗಧಿಪಡಿಸಲಾಗಿದೆ. ಅದರಲ್ಲಿ ಸುರಪುರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ನಿರ್ಮಾಣ ಹಾಗೂ ಮೂಲ ಸೌಕರ್ಯಗಳಿಗಾಗಿ ₹ 5.75 ಕೋಟಿ ಮಂಜೂರು ನೀಡಿ ಆದೇಶಿಸಲಾಗಿದೆ. ಉಳಿದ ₹ 5ಕೋಟಿ ಅನುದಾನದಲ್ಲಿ ಜಿಲ್ಲೆಯಲ್ಲಿ ಹೊಸ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ಅನುದಾನ ಕಾಯ್ದಿರಿಸಲಾಗಿದೆ ಎಂದರು.

ನಗರದ ಸರ್ಕಾರದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 88 ಎಕರೆಯಷ್ಟು ಶಾಲಾ ಕಾಲೇಜುಗಳ ಸಮುಚ್ಛಯವಿದೆ. ಅಲ್ಲಿಯೇ ನೂತನ ಎಂಜನಿಯರಿಂಗ್ ಕಾಲೇಜು ಸ್ಥಾಪನೆಗೆ ಸೂಕ್ತ ಸ್ಥಳಾವಕಾಶ ಒದಗಿಸಲಾಗುವುದು ಎಂದು ಸಭೆಯಲ್ಲಿ ಪ್ರತಿಪಾದಿಸಲಾಗಿತ್ತು. ಅದರಂತೆ ಸರ್ವ ಸದಸ್ಯರು ಒಮ್ಮತ ತೀರ್ಮಾನದಂತೆ ಶಹಾಪುರದಲ್ಲಿ ನೂತನ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿ ₹ 5ಕೋಟಿ ಅನುದಾನ ನೀಡಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ADVERTISEMENT

ಪ್ರಯುಕ್ತ ಸದರಿ ಪ್ರಸ್ಥಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು, ಸರ್ಕಾರ ಅನುಮತಿ ನೀಡಿದರೆ 2023-24ನೇ ಶೈಕ್ಷಣಿಕ ಸಾಲಿನಿಂದಲೇ ನೂತನ ಎಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಬಹುದಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.