ADVERTISEMENT

ಸಚಿವ ಚವ್ಹಾಣ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 3:22 IST
Last Updated 4 ಏಪ್ರಿಲ್ 2021, 3:22 IST
ಸುರಪುರದಲ್ಲಿ ಶನಿವಾರ ಸವಿತಾ ಸಮಾಜ ಸಂಘದವರು ಪಶು ಸಂಗೋಪನಾ ಸಚಿವರ ವಿರುದ್ಧ ಪ್ರತಿಭಟಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು
ಸುರಪುರದಲ್ಲಿ ಶನಿವಾರ ಸವಿತಾ ಸಮಾಜ ಸಂಘದವರು ಪಶು ಸಂಗೋಪನಾ ಸಚಿವರ ವಿರುದ್ಧ ಪ್ರತಿಭಟಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು   

ಸುರಪುರ: ‘ಸಾಂಪ್ರದಾಯಿಕವಾಗಿ ಬಂದಂತಹ ಕ್ಷೌರಿಕ ವೃತ್ತಿಗೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ವ್ಯಂಗ್ಯವಾಗಿ ಮಾತಾಡಿರುವುದು ಖಂಡನೀಯ’ ಎಂದು ಸವಿತಾ ಸಮಾಜ ಸಂಘದವರು ಶನಿವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲ ಚಿನ್ನಾಕಾರ್ ಮಾತನಾಡಿ, ‘ಯಾವುದೇ ಒಂದು ಸಮುದಾಯದ ಬಗ್ಗೆ ಮಾತನಾಡುವಾಗ ನಿರ್ಲಕ್ಷ್ಯ ವಹಿಸಿ ಮಾತನಾಡಿದರೆ ಅದು ಪಕ್ಷ ಮತ್ತು ಸರ್ಕಾರಕ್ಕೆ ಧಕ್ಕೆ ಉಂಟು ಮಾಡುತ್ತದೆ’ ಎಂದು ತಿಳಿಸಿದರು.

‘ನಾವು ಕೂಡ ಅದೇ ರೀತಿ ಪಕ್ಷ ಮತ್ತು ಸರ್ಕಾರವನ್ನು ನಿರ್ಲಕ್ಷಿಸಬೇಕಾಗುತ್ತದೆ. ನಮ್ಮ ವೃತ್ತಿ ಎಲ್ಲ ಮಾಧ್ಯಮಗಳಗಿಂತಲೂ ಅತಿ ದೊಡ್ಡ ಮಾಧ್ಯಮವಾಗಿದೆ. ಏಕೆಂದರೆ ಪ್ರತಿದಿನ ಪ್ರತಿಯೊಬ್ಬ ಗ್ರಾಹಕನಿಗೆ ನಾವು ಸಕಾರಾತ್ಮಕವಾಗಿ ಸಂದೇಶ ರವಾನಿಸುವುದರಿಂದ ಅದು ರಾಜಕಾರಣ ಮತ್ತು ಪಕ್ಷಕ್ಕೆ ಅನುಕೂಲವಾಗಿರುತ್ತದೆ’ ಎಂದರು.

ADVERTISEMENT

‘ಪಶು ಸಂಗೋಪನಾ ಸಚಿವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು. ಇದರಿಂದ ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಆಗುವ ನಷ್ಟವನ್ನು ತಡೆಗಟ್ಟಿದಂತಾಗುತ್ತದೆ. ಸಚಿವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಮುಖ್ಯಮಂತ್ರಿಗೆ ಬರೆದ ಮನವಿ ಯನ್ನು ತಹಶೀಲ್ದಾರ್ ಸೋಫಿಯಾ ಸುಲ್ತಾನ್ ಅವರಿಗೆ ಸಲ್ಲಿಸಲಾಯಿತು.

ಸವಿತಾ ಸಮಾಜದ ಮುಖಂಡರಾದ ರಾಘವೇಂದ್ರ ಮುಂದಿನಮನಿ, ಚಂದ್ರಾಮ ಮುಂದಿನಮನಿ, ಮಂಜುನಾಥ ಅನವಾರ, ಬಾಲರಾಜ ಚಿನ್ನಾಕಾರ, ಸೂರ್ಯಕಾಂತ ಚಿನ್ನಾಕಾರ, ರಾಘವೇಂದ್ರ, ಲಕ್ಷ್ಮೀಕಾಂತ, ನರಸಪ್ಪ ಮುಂದಿನಮನಿ, ದೇವಿಂದ್ರ ಅಜ್ಜಕೊಲ್ಲಿ, ಗೋಪಾಲ ಬಿಳಾರ, ಭೀಮಣ್ಣ ಗೋನಾಲ, ರಾಮು ದೇವಿಕೇರಿ, ಪರಶುರಾಮ ಚಿನ್ನಾಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.