ADVERTISEMENT

ಹುಣಸಗಿ | ಗ್ರಾ.ಪಂ.ಗೆ ಬೀಗ ಹಾಕಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 6:18 IST
Last Updated 18 ಜುಲೈ 2025, 6:18 IST
ಹುಣಸಗಿ ತಾಲ್ಲೂಕಿನ ವಜ್ಜಲ ಗ್ರಾಮ ಪಂಚಾಯಿತಿಯಲ್ಲಿ ಪ್ರತಿಭಟನಾ ನಿರತರ ಸಮಸ್ಯೆಯನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಸಣ್ಣನಾಯಕ ಹಾಗೂ ಅಧಿಕಾರಿಗಳು ಆಲಿಸಿದರು 
ಹುಣಸಗಿ ತಾಲ್ಲೂಕಿನ ವಜ್ಜಲ ಗ್ರಾಮ ಪಂಚಾಯಿತಿಯಲ್ಲಿ ಪ್ರತಿಭಟನಾ ನಿರತರ ಸಮಸ್ಯೆಯನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಸಣ್ಣನಾಯಕ ಹಾಗೂ ಅಧಿಕಾರಿಗಳು ಆಲಿಸಿದರು    

ಹುಣಸಗಿ: ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿ ಹಲವಾರು ದಿನಗಳಿಂದ ಕಲುಷಿತ ನೀರು ಸರಬರಾಜು ಆಗುತ್ತಿದೆ. ಆದರೂ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿ ಗ್ರಾಮದ ಯುವಕರು ಗ್ರಾ.ಪಂ.ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಈ ಕುರಿತಂತೆ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಿದ್ದನಗೌಡ ಗುರಡ್ಡಿ ಮಾತನಾಡಿ, ಗ್ರಾಮಕ್ಕೆ ಸರಬರಾಜು ಆಗುತ್ತಿರುವ ನೀರಿಗೆ ಹಳ್ಳದ ಕಲುಷಿತ ನೀರು ಸೇರ್ಪಡೆಯಾಗುತ್ತಿದೆ. ಇದರಿಂದಾಗಿ ಮಲೀನ ನೀರು ಗ್ರಾಮಕ್ಕೆ ಸರಬರಾಜು ಆಗುತ್ತಿದೆ. ಅಲ್ಲದೇ ಅಲ್ಲಲ್ಲಿ ಚರಂಡಿಯಲ್ಲಿ ಮುಖ್ಯ ಪೈಪ್ ಒಡೆದಿದ್ದು, ಆ ನೀರು ನಳಕ್ಕೆ ಬರುತ್ತಿದೆ ಎಂದು ಆರೋಪಿಸಿ ಬಕೆಟ್ ನೀರಿನೊಂದಿಗೆ ಗ್ರಾಪಂಗೆ ಆಗಮಿಸಿದ್ದರು.

ADVERTISEMENT

‘ಗ್ರಾಮದ ಕೊಂಡಮ್ಮ ದೇವಸ್ಥಾನದ ಕಾಲೊನಿಯಲ್ಲಿ ಕಳೆದ ಎರಡು ವಾರಗಳಿಂದ ನೀರು ಸರಬರಾಜು ಆಗುತ್ತಿಲ್ಲ. ಇದರಿಂದಾಗಿ ಸಾಕಷ್ಟು ತೊಂದರೆಯಾಗಿದೆ’ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದರು.

ಜಿಲ್ಲಾಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ಪ್ರತಿಭಟನೆ ಮುಂದುವರಿಸುವದಾಗಿ ಹೇಳಿದರು. ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸುವುದಾಗಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ ಚೌದ್ರಿ ಮನವಿ ಮಾಡಿದರು. ಆದರೂ ಪ್ರತಿಭಟನೆ ಮುಂದುವರಿದಿತ್ತು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸಣ್ಣನಾಯಕ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಎಇಇ ಎಚ್.ಡಿ.ಪಾಟೀಲ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿದರು.

ಹಳ್ಳದ ನೀರು ಸೇರದಂತೆ ತಡೆಗೋಡೆ ನಿರ್ಮಿಸುವುದು, ಹಾಗೂ ನೀರು ಕೆಡದಂತೆ ರಕ್ಷಣಾ ಕವಚ ಹಾಕುವುದು, ಕೊಂಡಮ್ಮ ದೇವಸ್ಥಾನದ ಕಾಲೊನಿಗೆ ನೀರು ಸರಬರಾಜು ಮಾಡಲು ಕೊಳವೆ ಬಾವಿಗೆ ಮೋಟರ್ ಅಳವಡಿಸುವ ಕುರಿತಂತೆ ಲಿಖಿತ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಹುಣಸಗಿ ಪಿಎಸ್ಐ ಭಾಗಣ್ಣ ಸಿಬ್ಬಂದಿಯೊಂದಿಗೆ ಸ್ಥಳಕ್ಕಾಗಮಿಸಿದ್ದರು. ಪ್ರತಿಭಟನೆಯಲ್ಲಿ ಪ್ರಭುಗೌಡ ಶ್ರೀಗಿರಿ, ದೊಡ್ಡಪ್ಪ ಕಕ್ಕೇರಿ, ಬಾಪುಗೌಡ ಗುರಡ್ಡಿ, ಬಾಬಣ್ಣ ಸುರಪುರ, ಸಾಬಣ್ಣ ದೊರಿ, ಬಸನಗೌಡ ಚಿಂಚೋಳಿ, ಮೌನೇಶ ಅಂಚೆಸುಗೂರು, ತಿಪ್ಪಣ್ಣ ಮರಾಠಿ, ಅನೀಲ ಮಡಿವಾಳರ, ಬೀರಪ್ಪ ಮೂಲಿಮನಿ ಸೇರಿದಂತೆ ಇತರರು ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.