ADVERTISEMENT

ಗುಳೆ ಕುಟುಂಬದ ಕುಡಿಯ ಸಾಧನೆ

ಅಶೋಕ ಸಾಲವಾಡಗಿ
Published 19 ಜೂನ್ 2022, 3:22 IST
Last Updated 19 ಜೂನ್ 2022, 3:22 IST
ಮಲ್ಲಿಕಾರ್ಜುನ
ಮಲ್ಲಿಕಾರ್ಜುನ   

ಸುರಪುರ: ಹೊಟ್ಟೆ ಹೊರೆಯಲು ಬೆಂಗಳೂರಿಗೆ ಗುಳೆ ಹೋಗಿದ್ದ ಕುಟುಂಬದ ಮಲ್ಲಿಕಾರ್ಜುನ ಕುರಿ ಪಿಯುಸಿ ಕಲಾ ವಿಭಾಗದಲ್ಲಿ570 ತಾಲ್ಲೂಕಿಗೆ ಪ್ರಥಮ (ಜಿಲ್ಲೆಗೆ 9ನೇ ಸ್ಥಾನ) ಪಡೆಯುವುದರ ಮೂಲಕ ಅನನ್ಯ ಸಾಧನೆ ಮಾಡಿದ್ದಾರೆ.

ತಾಲ್ಲೂಕಿನ ಭೈರಿಮಡ್ಡಿ ಗ್ರಾಮದ ಈಶ್ವರಪ್ಪ ಕುರಿ ಕುಟುಂಬ ದಶಕಗಳಿಂದ ದೂರದ ನಗರಗಳಿಗೆ ಗುಳೆ ಹೋಗಿ ಕೂಲಿ ಕೆಲಸ ಮಾಡಿ ಬದುಕು ಸಾಗಿಸುತ್ತಿತ್ತು. ಹೀಗಾಗಿ ಮಕ್ಕಳಿಗೆ ಶಿಕ್ಷಣ ಸಿಗಲಿಲ್ಲ.

ಕೊನೆಯ ಮಗನಿಗೆ ಶಾಲೆಗೆ ಹೋಗಬೇಕೆನ್ನುವ ತವಕ. ತಂದೆಗೆ ಕಾಡಿ ಬೇಡಿ ಬೆಂಗಳೂರಿನಲ್ಲೆ ಪ್ರಾಥಮಿಕ ಶಿಕ್ಷಣ ಪಡೆದ. ಈತನ ಕಲಿಯಬೇಕೆನ್ನುವ ತುಡಿತ ಗುರುತಿಸಿದ ಸಮಾಜ ಬಾಂಧವರು ಕಲಬುರಗಿ ಹತ್ತಿರದ ಫರತಾಬಾದ್‍ದಲ್ಲಿನ ಯಾದವ ಸಮಾಜದ ಪ್ರೌಢಶಾಲೆಗೆ ಶಾಲೆಗೆ ಸೇರಿಸಿದರು.

ADVERTISEMENT

ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದು ರಂಗಂಪೇಟೆಯ ಸರ್ಕಾರಿ ಪಿಯು ಕಾಲೇಜು ಸೇರಿದ ಮಲ್ಲಿಕಾರ್ಜುನ ಹಾಸ್ಟೆಲ ಊಟ ತಿಂದು ಕಠಿಣ ಪರಿಶ್ರಮ ಪಟ್ಟು ಈಗ ಜಿಲ್ಲೆಗೆ ಟಾಪರ್ ಆಗಿದ್ದಾರೆ.

ಕನ್ನಡದಲ್ಲಿ 98, ಇತಿಹಾಸದಲ್ಲಿ 97, ವಾಣಿಜ್ಯಶಾಸ್ತ್ರದಲ್ಲಿ 98, ಸಮಾಜಶಾಸ್ತ್ರದಲ್ಲಿ 100, ರಾಜ್ಯಶಾಸ್ತ್ರದಲ್ಲಿ 96, ಒಟ್ಟು 570 ಅಂಕ ಪಡೆದಿದ್ದಾನೆ.

ತಂದೆಗೆ ವಯಸ್ಸಾಗಿದ್ದು ಈಗ ದುಡಿಯಲು ಗುಳೆ ಹೋಗುತ್ತಿಲ್ಲ. ಕುರಿ ಸಾಕಾಣಿಕೆ ಮಾಡುತ್ತಾ ಗ್ರಾಮದಲ್ಲೇ ಇದ್ದಾರೆ. ಮಗನ ಸಾಧನೆ ಕಂಡು ಖುಷಿಯಾಗಿರುವ ಅವರು ಧಾರವಾಡದಲ್ಲಿ ಬಿ.ಎ. ಓದಿಸಲು ಸಿದ್ಧತೆ ನಡೆಸಿದ್ದಾರೆ.

‘ನನ್ನ ಫಲಿತಾಂಶದ ಹಿಂದೆ ತಂದೆ ತಾಯಿಯ ಆಶೀರ್ವಾದ, ಅವರ ಕಷ್ಟದ ಬದುಕು ಇದೆ. ಉಪನ್ಯಾಸಕರ ಸಲಹೆ, ಉತ್ತಮ ಬೋಧನೆ ನೆರವಾಗಿದೆ. ಉನ್ನತ ಅಧಿಕಾರಿಯಾಗಿ ಸೇವೆ ಮತ್ತು ನಮ್ಮ ಕುಟುಂಬವನ್ನು ನೆಮ್ಮದಿಯಾಗಿ ಸಾಕುವ ಆಸೆ ಇದೆ ಎನ್ನುತ್ತಾರೆ’ ಮಲ್ಲಿಕಾರ್ಜುನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.