ADVERTISEMENT

ಬಿಟ್ಟೂಬಿಡದೆ ಸುರಿದ ಮುಸಲಧಾರೆ

ಮಳೆಯ ಆರ್ಭಟಕ್ಕೆ ಹಳ್ಳ-ಕೊಳ್ಳಗಳಲ್ಲಿ ಭೋರ್ಗರೆತ; ಕೋಡಿ ಬಿದ್ದ ಕೆರೆಗಳು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 6:39 IST
Last Updated 19 ಆಗಸ್ಟ್ 2025, 6:39 IST
ಯಾದಗಿರಿ ತಾಲ್ಲೂಕಿನ ಬಂದಳ್ಳಿ ಕೆರೆಯಲ್ಲಿ ಸನ್ನತಿ ಬ್ರಿಡ್ಜ್ ಕಂ ಬ್ಯಾರೇಜ್‌ನಿಂದ ಕೆರೆ ತುಂಬಿಸುವ ಯೋಜನೆಯ ಕೊಳವೆಯಿಂದ ಚಿಮ್ಮುತ್ತಿರುವ ನೀರು
ಯಾದಗಿರಿ ತಾಲ್ಲೂಕಿನ ಬಂದಳ್ಳಿ ಕೆರೆಯಲ್ಲಿ ಸನ್ನತಿ ಬ್ರಿಡ್ಜ್ ಕಂ ಬ್ಯಾರೇಜ್‌ನಿಂದ ಕೆರೆ ತುಂಬಿಸುವ ಯೋಜನೆಯ ಕೊಳವೆಯಿಂದ ಚಿಮ್ಮುತ್ತಿರುವ ನೀರು   

ಯಾದಗಿರಿ: ಜಿಲ್ಲೆಯಲ್ಲಿ ಸೋಮವಾರವೂ ಮುಸಲಧಾರೆ ಮುಂದುವರಿದಿದ್ದು, ದಿನವಿಡೀ ಜಿಟಿಜಿಟಿ ಮಳೆಯಾಗಿ  ಜನರನ್ನು ಹೊರಗೆ ಬಾರದಂತೆ ಮನೆಯಲ್ಲಿಯೇ ದಿಗ್ಬಂಧನ ಮಾಡಿದಂತಿತ್ತು.

ಹಗಲು–ರಾತ್ರಿಯ ವ್ಯತ್ಯಾಸವಿಲ್ಲದೇ ಹುಯ್ದ ಮಳೆಯಿಂದಾಗಿ ಇಡೀ ಯಾದಗಿರಿ ಮುಸುಕುಹೊದ್ದು ಮಲಗಿದಂತೆ ತೋರಿತು. ರೈತರು ಕೃಷಿ ಚಟುವಟಿಕೆಗಳಿಗೆ ವಿರಾಮ ಕೊಟ್ಟು ಊರ ಮುಂದಿನ ಕಟ್ಟೆಯಲ್ಲಿ ಹರಟೆ ಹೊಡೆಯುತ್ತಿದ್ದರು. ಕೆಲವೆಡೆ ಮಹಿಳೆಯರು ಪ್ಲಾಸ್ಟಿಕ್‌ ಕವರ್ ಹೊದ್ದುಕೊಂಡು ಮಳೆಯ ನಡುವೆಯೂ ಗದ್ದೆಯಲ್ಲಿ ಕಳೆ ಕೀಳುವಲ್ಲಿ ನಿರತವಾಗಿದ್ದರು.

ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ನಗರ, ಗ್ರಾಮಾಂತರ ಪ್ರದೇಶವೆನ್ನದೆ ಎಲ್ಲೆಲ್ಲೂ ನೀರು ತುಂಬಿದೆ. ಕೆರೆಕಟ್ಟೆಗಳು ಕೋಡಿ ಬಿದ್ದಿವೆ. ಮಳೆ ನೀರಿನ ಮಜ್ಜನಕ್ಕೆ ನೆಲ, ಬೆಟ್ಟ ಗುಡ್ಡಗಳು ತೋಯ್ದು ತೊಪ್ಪೆಯಾದವು. ಕೆರೆ ಕಟ್ಟೆಗಳು, ಜಲಾಶಯಗಳು, ಝರಿಗಳು ಮೈದುಂಬಿ ಹರಿದವು. ಕೆಲವೆಡೆ ಅಪಾಯದ ಮಟ್ಟ ಮೀರಿದ್ದು, ಅಲ್ಲಲ್ಲಿ ಸೇತುವೆಗಳು ಮುಳುಗಡೆಯಾಗಿ ಸಂಪರ್ಕವೂ ಕಡಿತಗೊಂಡವು.

ADVERTISEMENT

ಹತ್ತಿಕುಣಿ ಜಲಾಶಯ ಭರ್ತಿಯಾಗಿದೆ. ಐದು ಕ್ರಸ್ಟ್‌ಗೇಟ್‌ಗಳ ಮೂಲಕ ನೀರು ಹಳ್ಳಕ್ಕೆ ಹರಿಸಲಾಗುತ್ತಿದೆ. ಹಾಲ್ನೊರೆಯಂತೆ ಹರಿಯುತ್ತಿರುವ ನೀರಿನ ದೃಶ್ಯ ಕಣ್ತುಂಬಿಕೊಳ್ಳಲು ಯುವಕರು ಧಾವಿಸುತ್ತಿದ್ದಾರೆ. ಸೆಲ್ಫಿ ತೆಗೆದುಕೊಂಡು, ವಿಡಿಯೊ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹರಿಯುವ ನೀರಲ್ಲಿನ ಮೀನು ಹಿಡಿಯಲು ಮತ್ಸ್ಯ ಪ್ರಿಯರು ಹಳ್ಳದ ಉದ್ದಕ್ಕೂ ಬೀಡುಬಿಟ್ಟು ಬಲೆ ಬೀಸುತ್ತಿದ್ದಾರೆ. ರಭಸವಾಗಿ ಹರಿಯುವ ಹಳ್ಳದ ನೀರಿನ ನಡುವೆ ಜೀವದ ಹಂಗು ತೊರೆದು ಮೀನು ಹಿಡಿಯುವುದು ಕಂಡುಬಂತು.

ಹಸಿರಿನ ಬೆಟ್ಟಗಳು, ಕಲ್ಲು ಬಂಡೆಗಳ ನಡುವೆ ಸೌದಗಾರ ಜಲಾಶಯ ಆವರಿಸಿಕೊಂಡಿದೆ. ಜಲರಾಶಿ ತುಂಬಿದ್ದರಿಂದ ಜಲಾಶಯ ನಡುವೆ ದೀಪದಂತೆ ಇರುವ ಕಲ್ಲು ಬಂಡೆಗಳು, ಗಿಡಗಳು ಹಡಗಿನಂತೆ ಭಾಸವಾಗುತ್ತಿವೆ. ಹಕ್ಕಿಗಳ ಚಿಲಿಪಿಲಿಯೂ ನಿಸರ್ಗ ಪ್ರಿಯರನ್ನು ಕೆರೆಯ ಸುತ್ತಲಿನ ಪರಿಸರ ಆಕರ್ಷಿಸುತ್ತಿದೆ.

ನಳನಳಿಸಿದ ಹಸಿರು: ವರ್ಷಧಾರೆಗೆ ಬೆಟ್ಟ ಗುಡ್ಡಗಳಲ್ಲಿನ ಹಸಿರು ನಳನಳಿಸಿತು. ಮೋಡ ಮುಸುಕಿದ ವಾತಾವರಣ, ಸೋನೆ ಮಳೆ ಹನಿಗಳ ಸಿಂಚನ, ಗುಡ್ಡಗಳಲ್ಲಿನ ಝರಿಗಳ ಸದ್ದು, ಇಡೀ ದಿನ ತಂಪಾದ ಗಾಳಿ ಮಲೆನಾಡಿನಂತೆ ಭಾಸವಾಗುತ್ತಿತ್ತು.

ಜನ ಜೀವನ ಅಸ್ತವ್ಯಸ್ತ: ಸತತ ಮಳೆಯಿಂದಾಗಿ ನಗರದ ರಸ್ತೆಗಳ ಅವ್ಯವಸ್ಥೆಯೂ ಅನಾವರಣಗೊಂಡಿತು. ಗುಂಡಿ ಬಿದ್ದ ರಸ್ತೆಗಳು ವಾಹನ ಸವಾರರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾ ಸಾಗಿದರು. ಚರಂಡಿ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆ ಬದಿಯಲ್ಲಿ ನಿಂತುಕೊಂಡಿತು. ಬೀದಿ ಬದಿಯಲ್ಲಿನ ವ್ಯಾಪಾರವೂ ಥಂಡಾ ಹೊಡೆಯಿತು. ಜನಜೀವನ ಅಸ್ತವ್ಯಸ್ತಗೊಂಡಿತು.

ಯಾದಗಿರಿಯ ಹತ್ತಿಕುಣಿ ಜಲಾಶಯದಿಂದ ಸೋಮವಾರ ಹರಿ ಬಿಡಲಾದ ನೀರಿನಲ್ಲಿ ಮೀನು ಹಿಡಿಯುವಲ್ಲಿ ನಿರತವಾದ ಮತ್ಸ್ಯ ಪ್ರಿಯರು

- ಮೀನುಗಾರರಲ್ಲಿ ಹರ್ಷ ತಂದ ವರ್ಷಧಾರೆ

ಮಳೆಯಿಂದಾಗಿ ಕೆರೆಗಳು ಭರ್ತಿಯಾಗಿದ್ದರಿಂದ ಮೀನುಗಾರರು ಖುಷಿಯಾಗಿದ್ದಾರೆ. ಕೋಡಿ ಬಿದ್ದ ನೀರಿನಿಂದ ಮೀನುಗಳು ಹಳ್ಳಕ್ಕೆ ಹರಿದು ಹೋಗದಂತೆ ತಡೆಯಲು ಕೋಡಿ ಉದ್ದಕ್ಕೂ ಬಲೆ ಹಾಕಿದ್ದಾರೆ. ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಇನ್ನಷ್ಟು ಹೆಚ್ಚಿನ ದಿನಗಳು ಮೀನುಗಾರಿಕೆ ಮಾಡಿ ಗರಿಷ್ಠ ಆದಾಯದ ನಿರೀಕ್ಷೆಯಲ್ಲಿದ್ದಾರೆ. ‘ಮಳೆ ಹೆಚ್ಚಾಗಿ ಕೆರೆಗಳು ಭರ್ತಿಯಾದಷ್ಟು ಮೀನುಗಾರಿಕೆಯನ್ನು ಸಮೃದ್ಧಿಯಿಂದ ಮಾಡಬಹುದು’ ಎನ್ನುತ್ತಾರೆ ಮೀನುಗಾರ ಶರಣಪ್ಪ ಯಡ್ಡಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.