ಯಾದಗಿರಿ: ಸುರಪುರ ಶಾಸಕ ರಾಜೂಗೌಡ ಅವರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿ ಗುರುವಾರ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದರು.
‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ನಗರಾಭಿವೃದ್ಧಿ ಸಚಿವಬಿ.ಎ. ಬಸವರಾಜ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ನಿಷ್ಠೆಯಿಂದ ಮಂಡಳಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತೇನೆ. ಮಂಡಳಿಯು ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಗಳನ್ನು ನಿರ್ವಹಿಸುತ್ತಿರುವ ಮಹತ್ತರ ಸಂಸ್ಥೆಯಾಗಿದ್ದು, ಗುರುತರವಾದ ಜವಾಬ್ದಾರಿಯನ್ನು ಹೊಂದಿದೆ. ಈ ಹೊಣೆಯನ್ನುಸಮರ್ಪಕವಾಗಿ ನಿರ್ವಹಿಸಿ ನಗರ, ಪಟ್ಟಣ ಪ್ರದೇಶಗಳಲ್ಲಿ ನೀರು ಸರಬರಾಜು ಮತ್ತು ಒಳ ಚರಂಡಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಯವರು ವಿವಿಧ ಮಂಡಳಿಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಆದರೆ, ರಾಜೂಗೌಡ ಸೇರಿದಂತೆ ಹಲವು ಶಾಸಕರು ನಮ್ಮ ಬದಲಾಗಿಪಕ್ಷದ ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದರು. ಇನ್ನು ಕೆಲವರು ಮುಖ್ಯಮಂತ್ರಿಯವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದರು. ಇದೀಗ ಸುರಪುರ ಶಾಸಕ ರಾಜೂಗೌಡ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸ್ವೀಕರಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಶಹಾಪುರ ಮಾಜಿ ಶಾಸಕ ಗುರುಪಾಟೀಲ ಶಿರವಾಳ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದಗುರು ಕಾಮಾ,ದೇವೇಂದ್ರನಾಥ ನಾದ, ವೆಂಕಟರೆಡ್ಡಿ ಅಬ್ಬೆತುಮಕೂರು ಇದ್ದರು.
ವರ್ಷ ಕಳೆದರೂ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲ. ಈಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಮೂಲಕ ಪರೋಕ್ಷವಾಗಿ ಸಚಿವ ಸ್ಥಾನದ ಆಸೆಯನ್ನು ಬಿಟ್ಟಂತಾಗಿದೆ ಎಂದು ಜಿಲ್ಲೆಯ ರಾಜಕೀಯ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.