ADVERTISEMENT

ಯರಗೋಳ: ಸಂಭ್ರಮವಿಲ್ಲದ ರಕ್ಷಾ ಬಂಧನ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 16:14 IST
Last Updated 2 ಆಗಸ್ಟ್ 2020, 16:14 IST
ಯರಗೋಳ ಗ್ರಾಮದ ಅಂಗಡಿಯಲ್ಲಿ ರಾಖಿ ಖರೀದಿಸಿದ ಯುವತಿ
ಯರಗೋಳ ಗ್ರಾಮದ ಅಂಗಡಿಯಲ್ಲಿ ರಾಖಿ ಖರೀದಿಸಿದ ಯುವತಿ   

ಯರಗೋಳ: ಹತ್ತಿಕುಣಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ರಕ್ಷಾ ಬಂಧನ ಹಬ್ಬಕ್ಕೆ ಕೊರೊನಾ ಭೀತಿ ಕಾಡಿದೆ. ಅಂಗಡಿಗಳಲ್ಲಿ ಗ್ರಾಹಕರ ಕೊರತೆ ಎದ್ದು ಕಾಣಿಸಿತು. ಪ್ರತಿವರ್ಷ ಬಣ್ಣ ಬಣ್ಣದ ರಾಖಿ ಖರೀದಿಸಲು ಅಂಗಡಿಗಳಲ್ಲಿ ಯುವತಿಯರ ದಂಡು ಕಾಣಿಸುತ್ತಿತ್ತು. ಈ ವರ್ಷ ಕೊರೊನಾ ಸೋಂಕಿನ ಪರಿಣಾಮ ವ್ಯಾಪಾರವಿಲ್ಲದೆ ಅಂಗಡಿಗಳು ಭಣಗುಡುತ್ತಿವೆ.

ಕೊರೊನಾ ಭೀತಿಯಿಂದ ಶಾಲಾ, ಕಾಲೇಜುಗಳು ಇನ್ನೂ ಆರಂಭವಾಗಿಲ್ಲ. ಪರಿಣಾಮ ರಕ್ಷಾ ಬಂಧನ ಸಂಭ್ರಮ ಕಳೆದುಕೊಂಡಿದೆ.

ರಕ್ಷಾ ಬಂಧನ ಹೆಣ್ಣು ಮಕ್ಕಳ ವಿಶೇಷ ಹಬ್ಬವಾಗಿದ್ದು, ಸಹೋದರರಿಗೆ ರಾಖಿ ಕಟ್ಟುವ ಮೂಲಕ ಬಾಂಧವ್ಯ ಭದ್ರಗೊಳಿಸುತ್ತಾರೆ.

ADVERTISEMENT

ಮದುವೆಯಾದ ಹೆಣ್ಣು ಮಕ್ಕಳು ತವರು ಮನೆಗೆ ಆಗಮಿಸಿ ಸಹೋದರರಿಗೆ ರಾಖಿ ಕಟ್ಟಿ ಉಡುಗೊರೆಯ ರೂಪದಲ್ಲಿ ಹಣ, ಸೀರೆ, ಬಳೆ ಪಡೆಯುವ ಸಂಪ್ರದಾಯ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಇದೆ.

ಯರಗೋಳದಲ್ಲಿ 10ಕ್ಕೂಹೆಚ್ಚು ಅಂಗಡಿಗಳಲ್ಲಿ ರಾಖಿ ಮಾರಾಟ ಮಾಡಲಾಗುತ್ತಿದೆ. ವ್ಯಾಪಾರಿ ಹುಸೇನ್ ಪಾಶ ಮಾತನಾಡಿ, ‘ಕೊರೊನಾ ವೈರಸ್ ಪರಿಣಾಮ ಅಂಗಡಿಯಲ್ಲಿ ರಾಖಿ ಮಾರಾಟ ನಿಲ್ಲಿಸಿದ್ದೇವೆ. ಶಾಲಾ, ಕಾಲೇಜು ವಿದ್ಯಾರ್ಥಿನಿಯರೇ ನಮ್ಮ ಗ್ರಾಹಕರು, ಅವರಿದ್ದರೆ ನಮಗೆ ವ್ಯಾಪಾರ’ ಎಂದು ಹೇಳಿದರು.

‘ಕೊರೊನಾ ಭೀತಿಯಿಂದಾಗಿ ತವರು ಮನೆಗೆ ಆಗಮಿಸಿ ಸಹೋದರನಿಗೆ ರಾಖಿ ಕಟ್ಟಲು ಆಗುತ್ತಿಲ್ಲ’ ಎಂದು ರಾಯಚೂರಿನಲ್ಲಿ ನೆಲೆಸಿರುವ ಯರಗೋಳ ಗ್ರಾಮದ ಅಂಬಿಕಾ ಎಸ್.ಪೂಜಾರಿ ತಿಳಿಸಿದರು.

ತವರು ಮನೆಗೆ ಆಗಮಿಸಿರುವೆ. ಪ್ರತಿವರ್ಷದಂತೆ ಈ ವರ್ಷ ರಕ್ಷಾ ಬಂಧನ ಸಂಭ್ರಮ ಇಲ್ಲ ಎಂದು ಪೂಜಾ ವಿ ತಾರಾಪುರ ತಿಳಿಸಿದರು.

***

ತವರು ಮನೆಗೆ ಆಗಮಿಸಿದ್ದೇನೆ. ಪ್ರತಿವರ್ಷದಂತೆ ಈ ವರ್ಷ ರಕ್ಷಾ ಬಂಧನ ಸಂಭ್ರಮ ಇಲ್ಲ. ಈ ವರ್ಷ ಬರೀ ಭಯ ಆವರಿಸಿದೆ.
-ಪೂಜಾ ವಿ, ತಾರಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.