
ಕೆಂಭಾವಿ: ‘ರಾಮ ಎಂಬ ಎರಡಕ್ಷರದ ಭಗವಂತನ ನಾಮದಲ್ಲಿ ಅದ್ಭುತ ಶಕ್ತಿ ಅಡಗಿದ್ದು ಅದನ್ನು ನಿತ್ಯ ನಾವೆಲ್ಲರೂ ಜಪಿಸುವುದರಿಂದ ಹಲವು ಬಯಕೆಗಳು ಈಡೇರುತ್ತವೆ’ ಎಂದು ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಮಠದ ರಘುವಿಜಯತೀರ್ಥ ಸ್ವಾಮೀಜಿ ಹೇಳಿದರು.
ಪಟ್ಟಣದ ಉತ್ತರಾದಿ ಮಠದ ಯತಿಚತುಷ್ಠಯರ ವೃಂದಾವನಕ್ಕೆ ಶನಿವಾರ ಮಹಾಮಂಗಳಾರತಿ ನೆರವೇರಿಸಿ ಮಾತನಾಡಿದರು.
‘ರ.ಅ.ಮ ಈ ಮೂರು ಅಕ್ಷರಗಳಲ್ಲಿ ಸಾವಿರಾರು ಭಕ್ತಿಭಾವಗಳ ಸಂಗಮವಾಗಿದೆ. ಆದರ್ಶ ಪುರುಷ ಶ್ರೀರಾಮನ ಗುಣಗಳನ್ನು ತಿಳಿಯಲು ಈ ರಾಮನಾಮ ನಮಗೆ ದೊಡ್ಡ ಶಕ್ತಿಯಾಗಿದೆ. ಕೇವಲ ಎರಡಕ್ಷರದ ರಾಮ ನಾಮ ನಮ್ಮ ಕಷ್ಟಗಳನ್ನು ದೂರ ಮಾಡಿ ನಮ್ಮಲ್ಲಿರುವ ದುರ್ಗುಣಗಳನ್ನು ನಿವಾರಣೆ ಮಾಡಿ ನಮಗೆ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಲು ಇದು ಬಹಳ ಸಹಕಾರಿಯಾಗಿದೆ’ ಎಂದು ಹೇಳಿದರು.
ನಂತರ ವಾಮನರಾವ ದೇಶಪಾಂಡೆ ಅವರ ಮನೆಯಲ್ಲಿ ವೈಕುಂಠ ರಾಮಚಂದ್ರ ದೇವರ ಪೂಜೆ ನೆರವೇರಿತು. ಇದಕ್ಕೂ ಮೊದಲು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನೂರಾರು ಭಕ್ತರು ಶ್ರೀಗಳ ಪಾದಪೂಜೆ ನೆರವೇರಿಸಿ ಫಲಮಂತ್ರಾಕ್ಷತೆ ಸ್ವೀಕರಿಸಿದರು.
ನಂತರ ಚಿತ್ರಕಲಾವಿದ ಹಳ್ಳೇರಾವ ಕುಲಕರ್ಣಿ ಅವರು ಬಿಡಿಸಿದ ಹನುಮ ಭೀಮ ಮಧ್ವರ ಕಲಾಕೃತಿಯಲ್ಲಿ ಬರೆದ 1008 ಶ್ಲೋಕದ ಸುಮಧ್ವ ವಿಜಯದ ಭಾವಚಿತ್ರವನ್ನು ಶ್ರೀಗಳು ಬಿಡುಗಡೆಗೊಳಿಸಿ ಪ್ರಶಂಸೆ ವ್ಯಕ್ತಪಡಿಸಿ ಆಶಿರ್ವದಿಸಿದರು.
ಶುಕ್ರವಾರ ಸಂಜೆ ಹುಬ್ಬಳ್ಳಿ ನಗರದಿಂದ ಆಗಮಿಸಿದ ಶ್ರೀಗಳನ್ನು ಪೂರ್ಣಕುಂಬ, ವೇದಘೋಷದೊಂದಿಗೆ ಬರಮಾಡಿಕೊಳ್ಳಲಾಯಿತು. ಶನಿವಾರ ಸಂಜೆ ಮೈಸೂರ ನಗರಕ್ಕೆ ಶ್ರೀಗಳು ತೆರಳಿದರು.
ತಿರುಮಲಾಚಾರ್ಯ ಜೋಷಿ, ಅರ್ಚಕ ರಾಘವೇಂದ್ರಾಚಾರ್ಯ ಜೋಷಿ, ಬಾಳಕೃಷ್ಣರಾವ ಕುಲಕರ್ಣಿ, ಶ್ರೀನಿವಾಸರಾವ ಪದಕಿ, ಮೋಹನರಾವ ಕುಲಕರ್ಣಿ, ಹಣಮಂತರಾವ ಕುಲಕರ್ಣಿ, ನರಸಿಂಹರಾವ ಕುಲಕರ್ಣಿ, ಭೀಮಸೇನರಾವ ಶಿರವಾಳ, ಪವನ ದೇಶಪಾಂಡೆ, ಹಳ್ಳೇರಾವ ಕುಲಕರ್ಣಿ, ಶೇಷಗಿರಿರಾವ ಕುಲಕರ್ಣಿ, ವೆಂಕಟೇಶ ನಾಡಿಗೇರ, ಪ್ರಮೋದ ತಿಕೋಟ, ಪ್ರಕಾಶ ಸರಡಗಿ ಸೇರಿದಂತೆ ಹಲವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.