ADVERTISEMENT

ಡಿಎಪಿ ಕಡಿಮೆ ಮಾಡಿ, ಕಾಂಪ್ಲೆಕ್ಸ್‌ ಬಳಸಿ; ಜೆಡಿ ಅಭೀದ್ ಸಲಹೆ

ಅತಿಯಾದ ರಸಗೊಬ್ಬರ ಬಳಕೆಯಿಂದ ಭೂಮಿ ಬರಡಾಗುವ ಸಾಧ್ಯತೆ ಹೆಚ್ಚು: ಜೆಡಿ ಅಭೀದ್

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 16:39 IST
Last Updated 30 ಆಗಸ್ಟ್ 2021, 16:39 IST
ಅಭೀದ್ ಎಸ್.ಎಸ್.
ಅಭೀದ್ ಎಸ್.ಎಸ್.   

ಯಾದಗಿರಿ: ‘ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ಬಳಕೆ ಕಡಿಮೆ ಮಾಡಿ ಕಾಂಪ್ಲೆಕ್ಸ್‌ ಬಳಸಿ. ಅಲ್ಲದೇ ಅತಿಯಾದ ರಸಗೊಬ್ಬರಗಳ ಬಳಕೆಯಿಂದ ಭೂಮಿ ಬರಡಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ರೈತರು ಮಿತವಾಗಿ ರಸಗೊಬ್ಬರಗಳ ಬಳಕೆ ಮಾಡಬೇಕು’ ಎಂದು ಜಂಟಿ ಕೃಷಿ ನಿರ್ದೇಶಕ ಅಭೀದ್ ಎಸ್.ಎಸ್. ಸಲಹೆ ನೀಡಿದರು.

‘ರೈತರು ಬೇಡಿಕೆಗಿಂತ ಹೆಚ್ಚು ರಸಗೊಬ್ಬರ ಹಾಕುವುದರಿಂದ ಡಿಎಪಿ ಕೊರತೆಯಾಗುತ್ತಿದೆ. ರಸಗೊಬ್ಬರ ಹೆಚ್ಚು ಬಳಕೆ ಮಾಡದಂತೆ 5,000 ರೈತರಿಗೆ ಈ ಬಗ್ಗೆ ತರಬೇತಿ ನೀಡಲಾಗಿದೆ’ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ಭಾಗದಲ್ಲಿ ರಸಗೊಬ್ಬರ ಬಳಕೆ ಮಾಡಲಾಗುತ್ತಿದೆ. ಇದರಿಂದ ಭೂಮಿ ಬರಡಾಗಿ ಯಾವುದೇ ಬೆಳೆ ಬೆಳೆಯದಂತೆ ಆಗುತ್ತದೆ. ಹೀಗಾಗಿ ರೈತರು ರಸಗೊಬ್ಬರಗಳ ಬಳಕೆಯನ್ನು ಕಡಿಮೆಗೊಳಿಸಿ, ಸಾವಯುವ ಗೊಬ್ಬರಗಳ ಬಳಕೆಗೆ ಮುಂದಾಗಬೇಕು. ವಿಜ್ಞಾನಿಗಳ ಪ್ರಕಾರ ರಸಗೊಬ್ಬರ ಹೆಚ್ಚಾದ ಬಳಕೆಯಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತದೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ 836 ಎಂ.ಎಂ ವಾಡಿಕೆ ಮಳೆಯಿದ್ದು, ಜನವರಿಯಿಂದ ಆಗಸ್ಟ್ 28ರ ವರೆಗೆ 292.0 ಮಿ.ಮೀ.ನಷ್ಟು ಮಳೆಯಾಗಿದೆ. ಇಲ್ಲಿಯವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ’ ಎಂದು ಮಾಹಿತಿ ನೀಡಿದರು.

ಶೇ 92.74 ರಷ್ಟು ಬಿತ್ತನೆ ಕಾರ್ಯ ಪೂರ್ಣ:

‘ಜಿಲ್ಲೆಯಲ್ಲಿ 2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 3,92,799 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 3,64,282 ಹೆಕ್ಟೇರ್‌ನಷ್ಟು ಶೇ 92.74 ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಈ ಬಾರಿ ಜಿಲ್ಲೆಯ ರೈತರು ಭತ್ತ, ಸಜ್ಜೆ, ತೊಗರಿ, ಹೆಸರು, ಶೇಂಗಾ, ಹತ್ತಿ ಬೆಳೆಗಳನ್ನು ಬೆಳೆದಿದ್ದು, ಇದರಲ್ಲಿ ಹೆಚ್ಚಿನ ರೈತರು ಹತ್ತಿ ಬೆಳೆ ಬೆಳೆದಿದ್ದಾರೆ’ ಎಂದು ತಿಳಿಸಿದರು.

ಬೆಳೆ ಸಮೀಕ್ಷೆಯಲ್ಲಿ ಜಿಲ್ಲೆಗೆ 3ನೇ ಸ್ಥಾನ:

‘ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆಯಲ್ಲಿ 4,19,869 ಪ್ಲಾಟುಗಳಲ್ಲಿ 34,158ರಷ್ಟು ಕಾರ್ಯವನ್ನು ಈಗಾಗಲೇ ಪೂರ್ಣಗೊಂಡಿದ್ದು, ಶೇ 8.14ನಷ್ಟು ಪ್ರಗತಿ ಸಾಧಿಸಿರುವ ಕಾರಣ ರಾಜ್ಯದಲ್ಲಿ ಜಿಲ್ಲೆಗೆ 3ನೇ ಸ್ಥಾನ ಲಭಿಸಿದೆ’ ಎಂದು ಮಾಹಿತಿ ನೀಡಿದರು.

‘ಡಿಎಪಿ 24,559 ಮೆ.ಟನ್ ಬೇಡಿಕೆಯಲ್ಲಿ ಜಿಲ್ಲೆಗೆ 22,907 ಮೆ.ಟನ್ ಪೂರೈಕೆಯಾಗಿದ್ದು, 1,651.2 ಮೆ.ಟನ್ ಕೊರತೆಯಾಗಿದೆ. ಯೂರಿಯಾ ಗೊಬ್ಬರವು ಶೇ 139ರಷ್ಟು ಜಿಲ್ಲೆಗೆ ಸರಬರಾಜು ಮಾಡಿದ್ದು, ಬೇಡಿಕೆಗಿಂತ ಹೆಚ್ಚಿನ ಗೊಬ್ಬರ ಪೂರೈಸಲಾಗಿದೆ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿಕೃಷಿ ಇಲಾಖೆಯ ಉಪನಿರ್ದೇಶಕ ಡಾ.ಬಾಲರಾಜ ರಂಗರಾವ, ಡಾ.ರಾಜಕುಮಾರ ಇದ್ದರು.

2,202 ಹೆಕ್ಟೇರ್ ಪ್ರವಾಹದಿಂದ ಹಾನಿ

ಜಿಲ್ಲೆಯಲ್ಲಿ ಈಚೆಗೆ ಸಂಭವಿಸಿದ ಪ್ರವಾಹದಿಂದ 2202 ಹೆಕ್ಟೇರ್‌ ‍ಪ್ರದೇಶದಲ್ಲಿ ಹಾನಿಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಅಭೀದ್ ಎಸ್.ಎಸ್. ಮಾಹಿತಿ ನೀಡಿದರು.

ಶಹಾಪುರ ತಾಲ್ಲೂಕಿನಲ್ಲಿ 536.20 ಹೆಕ್ಟೇರ್‌, ವಡಗೇರಾ ತಾಲ್ಲೂಕಿನಲ್ಲಿ 1067.93 ಹೆಕ್ಟೇರ್‌, ಸುರಪುರ ತಾಲ್ಲೂಕಿನಲ್ಲಿ 567.15 ಹೆಕ್ಟೇರ್‌, ಹುಣಸಗಿ ತಾಲ್ಲೂಕಿನಲ್ಲಿ 31 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದರು.

ಕೃಷಿ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ಮಾಡಲಾಗಿದ್ದು, ವಿಎ ಲಾಗಿನ್‌ನಲ್ಲಿ ಇದೆ. ಪರಿಹಾರ ಹಣ ಇನ್ನೂ ಬಂದಿಲ್ಲ ಎಂದರು.

ಅತಿವೃಷ್ಟಿಯಿಂದ 98 ಹೆಕ್ಟೇರ್‌ ಹಾನಿ:

ಜಿಲ್ಲೆಯಲ್ಲಿ ಈಚೆಗೆ ಅತಿವೃಷ್ಟಿಯಿಂದ 98 ಹೆಕ್ಟೇರ್‌ ಹಾನಿಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಅಭೀದ್ ಎಸ್.ಎಸ್. ಮಾಹಿತಿ ನೀಡಿದರು.

ಯಾದಗಿರಿ ತಾಲ್ಲೂಕಿನಲ್ಲಿ ಹೆಸರು 65.20 ಹೆಕ್ಟೇರ್‌, ಕೆಂಪು ಬೆಳೆ 8 ಹೆಕ್ಟೇರ್‌, ಹತ್ತಿ 16 ಹೆಕ್ಟೇರ್‌, ಭತ್ತ 8.80 ಹೆಕ್ಟೇರ್‌ ಸೇರಿದಂತೆ 98 ಹೆಕ್ಟೇರ್‌ ಬೆಳೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.