ADVERTISEMENT

ಕೃಷಿ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಆಗ್ರಹ

ರೈತ-ಕೃಷಿಕಾರ್ಮಿಕರ ಸಂಘಟನೆ ಮುಖಂಡರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 4:35 IST
Last Updated 18 ಜುಲೈ 2021, 4:35 IST
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಬಳಿ ರೈತ-ಕೃಷಿಕಾರ್ಮಿಕರ ಸಂಘಟನೆ (ಆರ್‌ಕೆಎಸ್) ಜಿಲ್ಲಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ಮಾಡಿದರು
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಬಳಿ ರೈತ-ಕೃಷಿಕಾರ್ಮಿಕರ ಸಂಘಟನೆ (ಆರ್‌ಕೆಎಸ್) ಜಿಲ್ಲಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ಮಾಡಿದರು   

ಯಾದಗಿರಿ: ಕೃಷಿ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ಮತ್ತು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ರೈತ-ಕೃಷಿಕಾರ್ಮಿಕರ ಸಂಘಟನೆ (ಆರ್‌ಕೆಎಸ್) ಜಿಲ್ಲಾ ಸಮಿತಿ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಎಪಿಎಂಸಿ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ಸರಕು ಸೇವಾ ಕಾಯ್ದೆ, ಗುತ್ತಿಗೆ ಕೃಷಿ ಕಾಯ್ದೆ ಹಾಗೂ ವಿದ್ಯುತ್ ಬಿಲ್ ಹಿಂಪಡೆಯಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ವೇಳೆ ಆರ್‌ಕೆಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿ, ‘ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆ ತಿದ್ದುಪಡಿಗಳು ರೈತ ವಿರೋಧಿಯಾಗಿವೆ. ಈ ಕಾನೂನುಗಳನ್ನು ವಿರೋಧಿಸಿ ಲಕ್ಷಾಂತರ ರೈತರು ದೆಹಲಿಯ ವಿವಿಧ ಗಡಿಗಳಲ್ಲಿ ಕಳೆದ 7 ತಿಂಗಳಿಂದ ತಮ್ಮ ಹೋರಾಟ ಮುಂದುವರಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರವು ಈ ಹೋರಾಟವನ್ನು ದಾರಿ ತಪ್ಪಿಸಲು ಮತ್ತು ಹತ್ತಿಕ್ಕಲು ರೈತರ ಮೇಲೆ ವಿವಿಧ ರೀತಿಯ ದೌರ್ಜನ್ಯಗಳನ್ನು ಮತ್ತು ದಬ್ಬಾಳಿಕೆಗಳನ್ನು ನಡೆಸಿತು. ಈ ಎಲ್ಲಾ ಆಕ್ರಮಣಗಳನ್ನು ರೈತರು ವಿಫಲಗೊಳಿಸಿದ್ದಾರೆ. ರೈತರು ಧೃತಿಗೆಡದೇ ಹೋರಾಟ ಮುಂದುವರಿಸಿದ್ದಾರೆ’ ಎಂದರು.

ADVERTISEMENT

‘ಇಲ್ಲಿಯವರೆಗೂ ಸುಮಾರು 600ಕ್ಕೂ ಹೆಚ್ಚು ರೈತರು ಹೋರಾಟದ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ತಮ್ಮವರನ್ನು ಕಳೆದುಕೊಂಡ ರೈತರು ದುಃಖದಿಂದ ಕುಗ್ಗಿಹೋಗಿಲ್ಲ. ಬದಲಿಗೆ ಚಳಿವಳಿಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾ ಮಡಿದವರಿಂದ ಪ್ರೇರಣೆ ಪಡೆದು ಮುನ್ನಡೆಯುತ್ತಿದ್ದಾರೆ. ಭಾರತ ರೈತ ಚಳವಳಿಯ ಇತಿಹಾಸದಲ್ಲೇ ಚರಿತ್ರೆ ಸೃಷ್ಟಿಸಿದೆ. ಆದರೆ, ಸರ್ಕಾರ ಬಂಡವಾಳಶಾಹಿಪರ ಧೋರಣೆ ಅತ್ಯಂತ ಖಂಡನೀಯ’ ಎಂದರು.

‘ಎಐಕೆಕೆಎಂಎಸ್ ಅಖಿತ ಭಾರತ ಸಮಿತಿ ಕರೆ ನೀಡಿದ್ದ ಜುಲೈ 11 ರಿಂದ 17ರ ವರೆಗೆ ‘ಅಖಿಲ ಭಾರತ ಪ್ರತಿರೋಧ ಸಪ್ತಾಹ’ ಅಂಗವಾಗಿ ಎಲ್ಲೆಡೆಯೂ ಲಕ್ಷಾಂತರ ರೈತರ ಸಹಿ ಸಂಗ್ರಹಿಸಿ ರಾಷ್ಟ್ರಪತಿಗಳಿಗೆ ಪ್ರತಿಭಟನೆ ಮೂಲಕ ಪತ್ರ ಸಲ್ಲಿಸಲಾಯಿತು. ಸರ್ಕಾರ ಈಗಲಾದರೂ ಎಚ್ಚೆತ್ತು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ಇಲ್ಲವಾದರೆ ಹೋರಾಟ ಇನ್ನೂ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ’ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಆರ್‌ಕೆಎಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಸಿದ್ದಪ್ಪ, ಸಹ ಕಾರ್ಯದರ್ಶಿ ಜಮಾಲ್ ಸಾಬ್, ಜಿಲ್ಲಾ ಘಟಕದ ಉಪಾಧ್ಯಕ್ಷ ಸಿದ್ದಣ್ಣ ಗೂಗಲ್, ಗುರುನಾಥರಡ್ಡಿ ವನಕಿಹಾಳ, ಬಸವರಾಜ, ಭೀಮರಡ್ಡಿ, ಪದ್ಮಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.