ADVERTISEMENT

ಬಾಕಿ ಕೂಲಿ ಹಣ ಪಾವತಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 13:35 IST
Last Updated 15 ಜುಲೈ 2021, 13:35 IST
ಯರಗೊಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಗ್ರಾಮದ ಕೃಷಿ ಕಾರ್ಮಿಕ ಸಂಘಟನೆಯಿಂದ ಮನವಿ ಸಲ್ಲಿಸಲಾಯಿತು
ಯರಗೊಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಗ್ರಾಮದ ಕೃಷಿ ಕಾರ್ಮಿಕ ಸಂಘಟನೆಯಿಂದ ಮನವಿ ಸಲ್ಲಿಸಲಾಯಿತು   

ಯರಗೋಳ: ‘ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿರುವ ಕಾರ್ಮಿಕರಿಗೆ ಕೂಲಿ ಹಣ ಪಾವತಿಸಬೇಕು. ಜೊತೆಗೆ ಕಾರ್ಯ ಆದೇಶ ಪ್ರತಿಯಲ್ಲಿ ಕಾರ್ಮಿಕರ ಹೆಸರುಗಳು ನಮೂದಿಸಿ ಕೆಲಸಗಳನ್ನು ನೀಡಬೇಕು‘ ಎಂದು ರೈತ ಕೃಷಿಕಾರ್ಮಿಕರ ಸಂಘಟನೆ ಗ್ರಾಮ ಘಟಕವು ಗುರುವಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿತು.

ಗ್ರ‍ಾಮದ ಗದ್ದೆ, ಅಡ್ಡಮಡ್ಡಿ ತಾಂಡಾ, ಮಲ್ಕಪನಹಳ್ಳಿ ರಸ್ತೆ ನಿರ್ಮಾಣ ಕೆಲಸಕ್ಕೆ ಕಾರ್ಮಿಕರಿಂದ ಕೆಲಸಗಳನ್ನು ತೆಗೆದುಕೊಳ್ಳಲಾಗಿತ್ತು. ತಿಂಗಳು ಕಳೆದರೂ ಅವರಿಗೆ ಕೂಲಿ ಹಣ ಪಾವತಿ ಮಾಡಿಲ್ಲ. ಬಾಕಿ ಇರುವ ಒಟ್ಟು 250 ಕಾರ್ಮಿಕರ ಕೂಲಿ ಹಣ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ಕಾರ್ಯ ಆದೇಶ ಪ್ರತಿಯಲ್ಲಿ ಕಾರ್ಮಿಕರ ಹೆಸರುಗಳು ಸೇರಿಸದೇ ಕೆಲಸ ಪಡೆಯುವುದು ತಪ್ಪು ಕ್ರಮ. ಕಾರ್ಮಿಕರ ಕೆಲಸದ ಅವಧಿ, ಕೂಲಿಯಿಂದ ಕಾರ್ಮಿಕರನ್ನು ವಂಚನೆ ಮಾಡುವ ಹುನ್ನಾರವಾಗಿದೆ ಎಂದು ದೂರಿದರು.

ADVERTISEMENT

ಕಾರ್ಮಿಕರ ಹೆಸರುಗಳು ಕಾರ್ಯ ಆದೇಶ ಪ್ರತಿಯಲ್ಲಿ ಅಧಿಕೃತವಾಗಿ ನಮೂದಿಸಿ, ಸಹಿ ಪಡೆದು, ಕೆಲಸ ನೀಡಬೇಕು. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿ 20 ದಿನಗಳು ಕಳೆದರೂ ಕೆಲಸ ಕೊಡದಿರುವುದು ಖಂಡನೀಯ. ಕೂಡಲೇ ಕಾರ್ಮಿಕರಿಗೆ ಕೆಲಸಗಳು ಕೊಡಬೇಕು. ಇಲ್ಲದಿದ್ದರೆ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.

1 ವಾರದಲ್ಲಿ ಕೆಲಸ ಕೊಡದೆ ಹೋದರೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು. ಬೇಡಿಕೆಗಳನ್ನು ಈಡೇರಿಸಲು 4 ದಿನಗಳು ಗಡವು ನೀಡಲಾಗುವುದು ಎಂದು ಎಚ್ಚರಿಸಿದರು.

ರೈತ ಕೃಷಿ ಕಾರ್ಮಿಕ ಸಂಘಟನೆ ಗ್ರಾಮ ಘಟಕದ ಅಧ್ಯಕ್ಷೆ ಪದ್ಮಾವತಿ, ಕಾರ್ಯದರ್ಶಿ ಭೀಮರಡ್ಡಿ, ಉಪಾಧ್ಯಕ್ಷರಾದ ಶಿವುಕಾಂತಮ್ಮ, ಸರೋಜಮ್ಮ ಹಾಗೂ ಬಸವರಾಜ, ಮಲ್ಲಪ್ಪ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.