ADVERTISEMENT

ಶಹಾಪುರ: 4 ಹತ್ತಿ ಖರೀದಿ ಕೇಂದ್ರ ಸ್ಥಾಪನೆಗೆ ಬಿಜೆಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 16:31 IST
Last Updated 29 ಅಕ್ಟೋಬರ್ 2020, 16:31 IST
ಶಹಾಪುರ ನಗರದ ಎಪಿಎಂಸಿ ಕಾರ್ಯದರ್ಶಿಗೆ ಬುಧವಾರ ಹತ್ತಿ ಖರೀದಿ ಕೇಂದ್ರ ಸ್ಥಾಪಿಸುವಂತೆ ಒತ್ತಾಯಿಸಿ ಬಿಜೆಪಿ ಪಕ್ಷದ ಮುಖಂಡರು ಮನವಿ ಸಲ್ಲಿಸಿದರು
ಶಹಾಪುರ ನಗರದ ಎಪಿಎಂಸಿ ಕಾರ್ಯದರ್ಶಿಗೆ ಬುಧವಾರ ಹತ್ತಿ ಖರೀದಿ ಕೇಂದ್ರ ಸ್ಥಾಪಿಸುವಂತೆ ಒತ್ತಾಯಿಸಿ ಬಿಜೆಪಿ ಪಕ್ಷದ ಮುಖಂಡರು ಮನವಿ ಸಲ್ಲಿಸಿದರು   

ಶಹಾಪುರ: ಭಾರತೀಯ ಹತ್ತಿ ನಿಗಮದ ಆಶ್ರಯದಲ್ಲಿ ತಾಲ್ಲೂಕಿನಲ್ಲಿ ನಾಲ್ಕು ಕಡೆ ಹತ್ತಿ ಖರೀದಿ ಕೇಂದ್ರವನ್ನು ಸ್ಥಾಪಿಸುವುದರ ಜತೆಗೆ ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಹತ್ತಿ ಖರೀದಿಸಬೇಕು ಎಂದು ಒತ್ತಾಯಿಸಿ ಬುಧವಾರ ಬಿಜೆಪಿಯ ತಾಲ್ಲೂಕು ಘಟಕದ ಮುಖಂಡರು ಎಪಿಎಂಸಿ ಕಾರ್ಯದರ್ಶಿಗೆ ಮನವಿ ಮಾಡಿದರು.

ಪ್ರಸಕ್ತ ಬಾರಿ ಅತಿವೃಷ್ಟಿಯಿಂದ ರೈತರು ತುಂಬಾ ನಷ್ಟ ಅನುಭವಿಸಿದ್ದಾರೆ. ಹೆಚ್ಚು ಮಳೆಯಾಗಿದ್ದರಿಂದ ಹತ್ತಿ ಬೆಳೆಯು ಸಂಕಷ್ಟಕ್ಕೆ ಸಿಲುಕಿ ಇಳುವರಿ ಕಡಿಮೆಯಾಗಿದೆ. ಸದ್ಯ ಹತ್ತಿ ಧಾರಣೆಯು ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹4,200 ಇದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಅಡಿಯಲ್ಲಿ ಹತ್ತಿ ಖರೀದಿ ಕೇಂದ್ರ ಸ್ಥಾಪಿಸಿ ಪ್ರತಿ ಕ್ವಿಂಟಲ್‌ಗೆ ₹7 ಸಾವಿರ ನಿಗದಿಗೊಳಿಸಿದರೆ ರೈತರಿಗೆ ತುಸು ಆಸರೆಯಾಗಲಿದೆ ಎಂದು ಬಿಜೆಪಿಯ ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಒತ್ತಾಯಿಸಿದರು.

ತಾಲ್ಲೂಕಿನಲ್ಲಿ ಎಂಟಕ್ಕೂ ಹೆಚ್ಚು ಹತ್ತಿ ಕಾರ್ಖಾನೆಗಳಿವೆ. ಧಾರಣೆ ಮಾತ್ರ ಕುಸಿತವಾಗಿದೆ. ಹೆಚ್ಚಿನ ಬೆಲೆಯಲ್ಲಿ ಹತ್ತಿ ಖರೀದಿಸಲು ನಾಲ್ಕು ಕಡೆ ಖರೀದಿ ಕೇಂದ್ರ ಸ್ಥಾಪಿಸಿದರೆ ತ್ವರಿತವಾಗಿ ಹತ್ತಿ ಮಾರಾಟ ಮಾಡಲು ಅನುಕೂಲವಾಗುತ್ತದೆ ಎಂದು ಬಿಜೆಪಿ ಮುಖಂಡರು ಆಗ್ರಹಿಸಿದರು.

ADVERTISEMENT

ಈಚೆಗೆ ಸುರಿದ ಭಾರಿ ಮಳೆಯಿಂದ ಹತ್ತಿ ಬಳೆದ ರೈತರು ನಷ್ಟ ಅನುಭವಿಸಿದ್ದಾರೆ. ಸರ್ಕಾರ ಅವರಿಗೆ ಪರಿಹಾರ ನೀಡಬೇಕು ಎಂದರು.

ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ ಅಂಗಡಿ, ಶಾಂತಗೌಡ ದಿಗ್ಗಿ, ತಿಮ್ಮಯ್ಯ ಸೈದಾಪುರ, ಬಸವರಾಜ ಇಜೇರಿ, ಬಸವರಾಜ ಹೇರುಂಡಿ, ಸಂಗಣ್ಣ, ಸಿದ್ದರಾಜ ಮುಡಬೂಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.