ADVERTISEMENT

ಒಣಗುತ್ತಿರುವ ಬೆಳೆಗಳಿಗೆ ನೀರು ಹರಿಸಲು ಆಗ್ರಹ

ಎಸ್‌ಯುಸಿಐ (ಸಿ), ಆರ್‌ಕೆಎಸ್‌ ವತಿಯಿಂದ ಜಂಟಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 16:44 IST
Last Updated 18 ನವೆಂಬರ್ 2020, 16:44 IST
ಯಾದಗಿರಿಯ ಜಿಲ್ಲಾಧಿಕಾರಿ ಕಚೇರಿ ಬಳಿ ಎಸ್‌ಯುಸಿಐ (ಸಿ) ಮತ್ತು ಆರ್‌ಕೆಎಸ್‌ನಿಂದ ಜಂಟಿಯಾಗಿ ಬುಧವಾರ ಪ್ರತಿಭಟನೆ ನಡೆಸಲಾಯಿತು
ಯಾದಗಿರಿಯ ಜಿಲ್ಲಾಧಿಕಾರಿ ಕಚೇರಿ ಬಳಿ ಎಸ್‌ಯುಸಿಐ (ಸಿ) ಮತ್ತು ಆರ್‌ಕೆಎಸ್‌ನಿಂದ ಜಂಟಿಯಾಗಿ ಬುಧವಾರ ಪ್ರತಿಭಟನೆ ನಡೆಸಲಾಯಿತು   

ಯಾದಗಿರಿ: ಭೀಮಾ ನದಿಯ ತೀರದಲ್ಲಿರುವ ಸುಮಾರು 25 ಗ್ರಾಮ ಮತ್ತು ತಾಂಡಾಗಳ ಬೆಳೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಎಸ್‌ಯುಸಿಐ (ಸಿ) ಮತ್ತು ಆರ್‌ಕೆಎಸ್‌ನಿಂದ ಜಂಟಿಯಾಗಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಭೀಮಾ ನದಿಯ ಸನ್ನತಿ ಯೋಜನೆಯ ಕೊಲ್ಲುರು ಕಾಲುವೆಯಿಂದ ಅಚ್ಚೋಲಾ, ಅರಕೇರ ಬಿ, ಹೆಡಗಿಮದ್ರಾ, ಬೊಮ್ಮಶಟ್ಟಿಹಳ್ಳಿ, ಠಾಣಗುಂದಿ, ವಿಶ್ವಾಸಪುರ, ಬಸವಂತಪುರ, ವಡ್ನಳ್ಳಿ, ಕಂಚಗಾರಹಳ್ಳಿ, ಮತ್ತಿತರ ರೈತರು ಬಿತ್ತಿರುವ ಶೇಂಗಾ, ಸಜ್ಜೆ, ಜೋಳ ಬೆಳೆಗಳು ಒಣಗಲು ಆರಂಭಿಸಿದ್ದು, ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಭೀಮಾ ನದಿಯ ಈ ಕಾಲುವೆಯಿಂದ ನೀರು ಹರಿಸಲಾಗುವುದು. ಬಿತ್ತನೆ ಮಾಡಿ ಎಂದು ವಿವಿಧ ಗ್ರಾಮಗಳ ರೈತರಿಗೆ ಹಲವು ದಿನಗಳ ಹಿಂದೆ ಅಧಿಕಾರಿಗಳು ಹೇಳಿದ್ದರು. ಆದರೆ, ಈಗ ನೀರು ಹರಿಸಲು ಆಗುವುದಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಈ ಹಿಂದೆ ಭರವಸೆ ನೀಡಿದ ಖಾನಾಪುರ ಕ್ಯಾಂಪ್‌ನ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.

ADVERTISEMENT

ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ಕೆಬಿಜೆಎನ್‍ಎಲ್ ಅಧಿಕಾರಿಗಳು ‘ಬೆಳೆಗಳಿಗೆ ನೀರು ಬಿಡುವ ಸಂಬಂಧ ಸಭೆ ಮಾಡಲಾಗಿದೆ. ಬುಧವಾರದಿಂದಲೇ ರೈತರ ಬೆಳೆಗಳಿಗೆ ನೀರು ಹರಿಸಲು ಆರಂಭಿಸಲಾಗಿದೆ ಎಂದರು. ಬೆಳೆಗಳು ಕೊಯ್ಲಿಗೆ ಬರುವವರೆಗೂ ಯಾವುದೇ ತೊಂದರೆ ಆಗದಂತೆ ನೀರು ಹರಿಸುವುದಾಗಿ ಭರವಸೆ ನೀಡಿದರು.

ಕಾನೂನು ತೊಡಕುಗಳಿಂದ ಅರ್ಧಕ್ಕೆ ನಿಂತಿರುವ ಕಾಲುವೆ ಕೆಲಸಗಳನ್ನು ಶೀಘ್ರದಲ್ಲಿಯೇ ಪುನರಾರಂಭಿಸಲಾಗುವುದು. ಬ್ಯಾರೇಜ್‍ಗಳು ಹಾಗೂ ಕಾಲುವೆ ಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾ ಗುವುದು ಎಂದರು. ಇದಕ್ಕೆ ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ತರಿಸಿಕೊಳ್ಳಲಾಗುವುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಮಾತನಾಡಿ, ‘ಹತ್ತಿಕುಣಿ ಮತ್ತು ಸೌದಾಗರ ಜಲಾಶಯಗಳ ವ್ಯಾಪ್ತಿಯ ರೈತರ ಜಮೀನಿಗೆ ನೀರು ಹರಿಸುವ ಕುರಿತು ವಿವರಣೆ ಕೊಡಲು ಅಧಿಕಾರಿಗಳು ಬರಬೇಕಿತ್ತು. ಅವರಿಗೆ ಈ ಕುರಿತು ವಿವರಣೆ ಕೇಳಿ ಪತ್ರ ಬರೆಯಲಾಗುವುದು. ಎರಡು ಜಲಾಶಯಗಳ ವ್ಯಾಪ್ತಿಯ ಹತ್ತಾರು ಗ್ರಾಮಗಳ ರೈತರು ಕೃಷಿ ಜಮೀನಿಗೂ ನೀರು ಹರಿಸಲು ಸೂಚಿಸಲಾಗುವುದು ಎಂದು ತಿಳಿಸಿದರು. ಉಳಿದ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಬರೆಯುವುದಾಗಿ ಭರವಸೆ ನೀಡಿದರು.

ಆರ್‌ಕೆಎಸ್ ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್, ಸಹ ಕಾರ್ಯದರ್ಶಿ ಜಮಾಲ್‌ಸಾಬ್, ಎಸ್‍ಯುಸಿಐ(ಸಿ) ಜಿಲ್ಲಾ ಸಮಿತಿ ಸದಸ್ಯರಾದ ರಾಮಲಿಂಗಪ್ಪ ಬಿ.ಎನ್., ಸೈದಪ್ಪ ಎಚ್.ಪಿ., ಸಿಂಧು ಬಿ, ಚೇತನಾ ಕೆ.ಎಸ್., ಆಜಂನೇಯ, ವಿಶ್ವರಾಧ್ಯ, ಮೋನಪ್ಪ, ಮರೆಪ್ಪ, ಮಲ್ಲಣ್ಣ, ರವಿ, ಸಾಬಂಣ, ಹಣಮಂತ, ಸಾಬಣ್ಣ, ಭೀಮರಾಯ, ಸ.ಭೀಮ, ಸುರೇಶ, ಸಿದ್ದಪ್ಪ, ದೇವಪ್ಪ ಸೇರಿದಂತೆ ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.