ADVERTISEMENT

ಮಾಲಗತ್ತಿ: ತಾತ್ಕಾಲಿಕ ದುರಸ್ತಿ, ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 7:13 IST
Last Updated 16 ಅಕ್ಟೋಬರ್ 2025, 7:13 IST
<div class="paragraphs"><p>ಸುರಪುರದಲ್ಲಿ ತಾಲ್ಲೂಕಿನ ಮಾಲಗತ್ತಿ ರಸ್ತೆಯ ಕಿರು ಸೇತುವೆ ಕೊಚ್ಚಿಹೋಗಿರುವುದು</p></div>

ಸುರಪುರದಲ್ಲಿ ತಾಲ್ಲೂಕಿನ ಮಾಲಗತ್ತಿ ರಸ್ತೆಯ ಕಿರು ಸೇತುವೆ ಕೊಚ್ಚಿಹೋಗಿರುವುದು

   

ಸುರಪುರ: ಕಳೆದ ತಿಂಗಳು ಸುರಿದ ನಿರಂತರ ಮಳೆಗೆ ತಾಲ್ಲೂಕಿನ ರಸ್ತೆಗಳು ಹದಗೆಟ್ಟಿವೆ. ಹಳ್ಳಗಳಲ್ಲಿ ಪ್ರವಾಹ ಹೆಚ್ಚಾಗಿ ಕಿರು ಸೇತುವೆಗಳು ಕೊಚ್ಚಿಹೋಗಿವೆ.

ರಸ್ತೆಗಳ ಡಾಂಬರು ಸಹ ಕಿತ್ತುಹೋಗಿವೆ. ಅಲ್ಲಲ್ಲಿ ಗುಂಡಿಗಳು ಬಿದ್ದು ಅಪಾಯಕಾರಿಯಾಗಿವೆ. ಹಲವೆಡೆ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರು ದೂರದ ಬಳಸು ರಸ್ತೆಗಳಲ್ಲಿ ತಿರುಗಾಡುವಂತಾಗಿದೆ.

ADVERTISEMENT

ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಜಿಲ್ಲಾ ಮುಖ್ಯರಸ್ತೆಯಲ್ಲಿ 7 ಕಿ.ಮೀ ರಸ್ತೆ ಹದಗೆಟ್ಟಿದೆ. 2 ಕಿರು ಸೇತುವೆಗಳು ಕೊಚ್ಚಿಹೋಗಿವೆ. ರಾಜ್ಯ ಹೆದ್ದಾರಿಯ 5 ಕಿ.ಮೀ. ಹಾನಿಗೊಳಗಾಗಿದೆ. ಪಂಚಾಯತರಾಜ್ ಇಲಾಖೆಯ ವ್ಯಾಪ್ತಿಗೆ ಬರುವ ಗ್ರಾಮೀಣ ರಸ್ತೆಯ 6.5 ಕಿ.ಮೀ ಹಾನಿಯಾಗಿದೆ. ಕಕ್ಕೇರಾ– ಹನುಮನಾಳ ರಸ್ತೆ ವಾಹನ ಸಂಚರಿಸಲು ಯೋಗ್ಯವಾಗಿಲ್ಲ. ಮಾಲಗತ್ತಿ ರಸ್ತೆಯ ಕಿರು ಸೇತುಗೆ ಕೊಚ್ಚಿಹೋಗಿದ್ದು, ತಾತ್ಕಾಲಿಕ ದುರಸ್ತಿ ಕೈಗೊಳ್ಳಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಅಡ್ಡೊಡಗಿ–ಸುಗೂರ, ಬೇವಿನಾಳ–ಅಡ್ಡೊಡಗಿ ಅಂಬಾನಗರ– ಸೊನ್ನಾಪುರ ತಾಂಡಾ ರಸ್ತೆಗಳಲ್ಲಿ ಅಲ್ಲಲ್ಲಿ ಕಿತ್ತು ಹೋಗಿದೆ. ಕರ್ನಾಳ–ಚೌಡೇಶ್ವರಿಹಾಳ, ನಗನೂರ, ಗೌಡಗೇರಾ ರಸ್ತೆಗಳು ಹದಗೆಟ್ಟಿದೆ. ಸುಗಮ ಸಂಚಾರಕ್ಕೆ ಸಂಚಕಾರ ಉಂಟು ಮಾಡಿವೆ. ನಗರಕ್ಕೆ ಬರಲು ಗ್ರಾಮೀಣರು ಪರದಾಡುವಂತಾಗಿದೆ. ಆಸ್ಪತ್ರೆ, ಶಾಲಾ– ಕಾಲೇಜು, ವ್ಯವಹಾರಿಕ ಕೆಲಸಗಳಿಗೆ ನಗರ, ಪಟ್ಟಣಕ್ಕೆ ತೆರಳಲು ತೊಂದರೆ ಉಂಟಾಗಿದೆ ಎನ್ನುವುದು ಪ್ರಯಾಣಿಕರ ಬೇಸರ.

‘ಪ್ರತಿ ವರ್ಷ ಮಳೆ ಬಂದಾಗ ಗುಂಡಿಗಳು ಬಿದ್ದು ಹಾಳಾಗುವುದು ಸಾಮಾನ್ಯವಾಗಿದೆ. ಆದರೆ, ಅಧಿಕಾರಿಗಳು ತಾತ್ಕಾಲಿಕ ದುರಸ್ತಿ ಮಾಡಿ ಕೈತೊಳೆದುಕೊಳ್ಳುತ್ತಾರೆ. ಕಾಯಂ ರಸ್ತೆ ನಿರ್ಮಾಣಕ್ಕೆ ಸ್ಥಳೀಯ ಶಾಸಕರು ಪ್ರಯತ್ನಿಸಬೇಕು’ ಎನ್ನುತ್ತಾರೆ ವಾಹನ ಚಾಲಕರು.

ಸಂಬಂಧಿಸಿದ ಇಲಾಖೆ ರಸ್ತೆಗಳು ನಿರ್ವಹಣೆಗೆ ಇಂತಿಷ್ಟು ಹಣ ಎಂದು ಕೊಡುತ್ತವೆ. ಹೆಚ್ಚಿನ ದುರಸ್ತಿಗೆ ಅಧಿಕಾರಿಗಳು ಪ್ರಸ್ತಾವ ಸಲ್ಲಿಸಬೇಕು. ಟೆಂಡರ್ ವಿಳಂಬ, ನಿಧಾನಗತಿಯ ಕಾಮಗಾರಿ ಇತರ ಕಾರಣಗಳಿಂದ ಸಮಸ್ಯೆ ಹಾಗೆ ಉಳಿಯುತ್ತದೆ. ನಗರಸಭೆ ವ್ಯಾಪ್ತಿಯಲ್ಲೂ ಮಳೆಯಿಂದ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಅಧಿಕಾರಿಗಳು ಮುರುಮ್ ಹಾಕಿ ತಾತ್ಕಾಲಿಕ ದುರಸ್ತಿ ಮಾಡುತ್ತಾರೆ. ಬಡಾವಣೆ ಒಳಗಿನ ಕಿರು ರಸ್ತೆಗಳ ಪರಿಸ್ಥಿತಿ ಹದಗೆಟ್ಟಿದೆ.

ಲೊಕೋಪಯೋಗಿ ಮತ್ತು ಪಂಚಾಯತ್‌ರಾಜ್‌ ಇಲಾಖೆಗಳು ಹುಣಸಗಿ ತಾಲ್ಲೂಕಿನಲ್ಲಿ ಆರಂಭವಾಗಿಲ್ಲ. ಹೀಗಾಗಿ, ಎರಡೂ ತಾಲ್ಲೂಕುಗಳ ರಸ್ತೆಗಳ ನಿರ್ವಹಣೆ ಸಮಸ್ಯೆ ಆಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ರಸ್ತೆಗಳ ನಿರ್ವಹಣೆಗೆ ವಾರ್ಷಿಕ  ₹ 3 ಕೋಟಿ ಮೀಸಲಿದೆ. ಹೆಚ್ಚುವರಿಯಾಗಿ ₹ 3.50 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಎಸ್.ಜಿ. ಪಾಟೀಲ, ಎಇಇ ಪಿಡಬ್ಲ್ಯುಡಿ
ನಿರಂತರ ಮಳೆ ಮತ್ತು ಹಳ್ಳಗಳಲ್ಲಿ ಪ್ರವಾಹ ಉಂಟಾದ್ದರಿಂದ ರಸ್ತೆಗಳು ಹದಗೆಟ್ಟಿವೆ. ದುರಸ್ತಿಗೆ  ₹ 3.60 ಕೋಟಿ ಪ್ರಸ್ತಾವವೆ ಸಲ್ಲಿಕೆ ಮಾಡಲಾಗಿದೆ
ಎಚ್.ಡಿ. ಪಾಟೀಲ, ಪಂಚಾಯತ್‌ರಾಜ್ ಇಲಾಖೆಯ ಎಇಇ
ಮಳೆಯಿಂದ ಹಾನಿಗೆ ಒಳಗಾಗಿ ನಗರದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಬಡಾವಣೆಯ ಒಳಭಾಗದ ರಸ್ತೆ ಕಿತ್ತುಹೋಗಿದ್ದು ತಾತ್ಕಾಲಿಕ ದುರಸ್ತಿ ಮಾಡಲಾಗಿದೆ
ಶಾಂತಪ್ಪ ಹೊಸೂರು, ನಗರಸಭೆ ಎಇಇ 
ನಗರ ಸೇರಿದಂತೆ ಗ್ರಾಮೀಣ ಭಾಗದ ಹಳೆಯ ರಸ್ತೆಗಳನ್ನು ಹೊಸದಾಗಿ ನಿರ್ಮಿಸಬೇಕು. ಇದಕ್ಕೆ ಶಾಸಕರು ಯೋಜನೆಯನ್ನು ರೂಪಿಸಿ ಅನುದಾನ ಒದಗಿಸಬೇಕು
ವೆಂಕಟೇಶ ಭಕ್ರಿ, ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಗ್ರಾಮೀಣ ಭಾಗದ ರಸ್ತೆಗಳಲ್ಲಿ ವಾಹನ ಓಡಿಸುವುದೆ ತೊಂದರೆಯಾಗಿದೆ. ಪ್ರಯಾಣಿಕರನ್ನು ಸಾಮಗ್ರಿಗಳನ್ನು ಸಾಗಿಸುವುದು ಕಷ್ಟವಾಗುತ್ತಿದೆ
ಇಫ್ತಿಕಾರ್ ಹುಸೇನ್, ವಾಹನ ಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.