ADVERTISEMENT

ಕೆಸರು ಗದ್ದೆಯಂತಾದ ರಸ್ತೆಗಳು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 16:08 IST
Last Updated 23 ಆಗಸ್ಟ್ 2020, 16:08 IST
ನಾಯ್ಕಲ್ ಗ್ರಾಮದ ಈಳಿಗೇರ್ ಓಣಿಯ ರಸ್ತೆ ಕೆಸರುಗದ್ದೆಯಂತಾಗಿದೆ
ನಾಯ್ಕಲ್ ಗ್ರಾಮದ ಈಳಿಗೇರ್ ಓಣಿಯ ರಸ್ತೆ ಕೆಸರುಗದ್ದೆಯಂತಾಗಿದೆ   

ಯಾದಗಿರಿ: ಇಲ್ಲಿಗೆ ಸಮೀಪದ ನಾಯ್ಕಲ್ ಗ್ರಾಮದಲ್ಲಿ ಮಳೆಯಿಂದ ಗ್ರಾಮದ ಹಲವು ಬಡಾವಣೆಗಳ ರಸ್ತೆಗಳು ಕೆಸರುಮಯವಾಗಿ ರಾಡಿಯಿಂದ ಕೂಡಿವೆ. ಇದರಿಂದ ಜನಸಂಚಾರಕ್ಕೆ ಪರದಾಡುವಂತೆ ಆಗಿದೆ.

ನಾಯ್ಕಲ್ ಗ್ರಾಮ ಶಹಾಪುರ ತಾಲ್ಲೂಕಿನಿಂದ ಬೇರ್ಪಡೆಯಾಗಿ ಇದೀಗ ವಡಗೇರಾ ತಾಲ್ಲೂಕಿಗೆ ಸೇರಿದೆ. ಇಂಥ ಅವವ್ಯಸ್ಥೆ ತಾಂಡಾವವಾಡುತ್ತಿದ್ದರೂ ಇಲ್ಲಿಯವರೆಗೂ ಯಾವುದೇ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ. ನಾಯ್ಕಲ್ ಗ್ರಾಮ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕೇಂದ್ರ ಸ್ಥಾನ. ಸ್ವತಂತ್ರ ಗ್ರಾಮ ಪಂಚಾಯಿತಿ ಹೊಂದಿದೆ.ಯಾದಗಿರಿ-ಶಹಾಪುರ-ಸುರಪುರ ರಾಜ್ಯ ಹೆದ್ದಾರಿಯ ಹಾದು ಹೋಗುವ ಅತಿ ದೊಡ್ಡ ಪ್ರಮುಖ ಗ್ರಾಮ. ಆದರೆ, ಇಂಥ ಗ್ರಾಮದಲ್ಲಿ ಸ್ವಚ್ಛತೆ ಮರಿಚೀಕೆಯಾಗಿದೆ.

ಜಿಲ್ಲಾ ಕೇಂದ್ರ ಯಾದಗಿರಿಯಿಂದ ಕೇವಲ 8 ಕಿ.ಮೀ ಅಂತರದ ಗ್ರಾಮ. ಗ್ರಾಮದ ಅಗಸಿಯಿಂದ ವಡ್ಡರ್ ಓಣಿ ರಸ್ತೆ, ಈಳಿಗೇರ್ ಓಣಿ ರಸ್ತೆ, ಅಂಬೇಡ್ಕರ್ ನಗರದ ಶಾಲೆ ಹಿಂಭಾಗ ರಸ್ತೆ, ಗ್ರಾಪಂ ಪಕ್ಕದಲ್ಲೇ ಕೊಳಚೆ ನೀರು ಸಂಗ್ರಹವಾಗುತ್ತದೆ. ಅಗಸಿಯಿಂದ ಗುರುಸುಣಿಗಿ ರಸ್ತೆ, ಹನುಮಾನ ದೇವಸ್ಥಾನ ಮುಂಭಾಗದ ಅಗಸಿ ರಸ್ತೆ, ಕೋಲಿ ಸಮುದಾಯದ ಬಡಾವಣೆ, ಆಶ್ರಯ ಕಾಲೊನಿ ರಸ್ತೆ, ಗ್ರಾಮ ಪಂಚಾಯಿತಿ ಎದುರು ಬಡಾವಣೆ, ಗ್ರಾಮ ಪಂಚಾಯಿತಿ ಹಿಂಭಾಗ ಹೀಗೆ ಹಲವು ಬಡಾವಣೆಗಳ ರಸ್ತೆಗಳು ಅಕ್ಷರಶಃ ಕೆಸರು ಗದ್ದೆಗಳಾಗಿ ಮಾರ್ಪಟ್ಟಿವೆ.

ADVERTISEMENT

ಚರಂಡಿಗಳ ನೀರು ಮತ್ತು ಮಳೆ ನೀರು ಎರಡು ಸೇರಿ ದುರ್ನಾತದಿಂದ ಕೂಡಿ ಮೂಗು ಮುಚ್ಚಿಕೊಂಡು ಜನತೆ ಮೈಗೆ ರಾಡಿ ಎರಚಿಕೊಂಡು ಓಡಾಟ ಮಾಡುವುದು ತಪ್ಪುತ್ತಿಲ್ಲ ಎಂದು ಬಡಾವಣೆಗಳ ನಿವಾಸಿಗಳು ದೂರಿದ್ದಾರೆ.

ಜಿಲ್ಲಾ ಕೇಂದ್ರದಿಂದ ಕೂಗಳತೆಯ ಅಂತರದ ಗ್ರಾಮದ ಸ್ಥಿತಿ ಹೀಗಾದರೆ, ಬೇರೆಡೆ ಗ್ರಾಮಗಳ ಪರಿಸ್ಥಿತಿ ಹೇಗಿರಬೇಕು ಎಂದು ಗ್ರಾಮಸ್ಥ ಶಿವಶರಣಪ್ಪ ಪ್ರಶ್ನಿಸಿದ್ದಾರೆ.

***

ಗ್ರಾಮದ ಹಲವು ಬಡಾವಣೆಗಳ ರಸ್ತೆಗಳು ಹದಗೆಟ್ಟಿವೆ. ಕೂಡಲೇ ಜಿಲ್ಲಾಡಳಿತ ಇದರ ಬಗ್ಗೆ ರಸ್ತೆಗಳ ಅಭಿವೃದ್ಧಿಗೆ ಮುಂದಾಗಬೇಕು.
-ಮೈನೋದ್ಧೀನ್ ಜೇಮಶೇರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಯ್ಕಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.