ADVERTISEMENT

ದರೋಡೆ ತಂಡದ ಆರೋಪಿ ಕಾಲಿಗೆ ಗುಂಡೇಟು: ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 4:15 IST
Last Updated 13 ಮಾರ್ಚ್ 2023, 4:15 IST

ಯಾದಗಿರಿ: ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೀವ್ ಗಾಂಧಿನಗರದ ನಂದ ಕಿಶೋರ್ ಜವಾಹರ್ ಮನೆಯಲ್ಲಿ ಕಳೆದ 19 ದಿನಗಳ ಹಿಂದೆ ನಡೆದಿದ್ದ ದರೋಡೆ ಪ್ರಕರಣದ ಪ್ರಮುಖ ಆರೋಪಿ ರಫಿ ಅಬ್ದುಲ್ಲ‌ ಕಾಲಿಗೆ ಸೋಮವಾರ ಬೆಳಿಗ್ಗೆ ಪೊಲೀಸರು ಗುಂಡೇಟು ನೀಡಿದ್ದಾರೆ.

ಸಿಪಿಐ ಸುನಿಲ್ ಮೂಲಿಮನಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಲು ಕಾರ್ಯಾಚರಣೆ ಮಾಡುತ್ತಿರುವಾಗ ಯಾದಗಿರಿ ನಗರ ಹೊರವಲಯದ ವರ್ಕನಳ್ಳಿ ಸಮೀಪ ಆರೋಪಿ ರಫಿ ಅಬ್ದುಲ್ಲ ಸಿಪಿಐ ಮೂಲಿಮನಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪಿಸ್ತೂಲಿನಿಂದ ಗುಂಡು ಹಾರಿಸಲು ಯತ್ನಿಸಿದಾಗ ಆತ್ಮ ರಕ್ಷಣೆಗಾಗಿ ರಫಿ ಮೇಲೆ ಸಿಪಿಐ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‌

ಕಾಲಿಗೆ ಗುಂಡು ತಗಲಿ ಗಾಯವಾಗಿದ್ದರಿಂದ ರಫಿಯನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.‌ ಸಿಪಿಐ ಸುನಿಲ್ ಮೂಲಿಮನಿ, ಸಿಪಿಸಿ ಹರಿನಾಥ ರೆಡ್ಡಿ, ಅಬ್ದುಲ್ ಬಾಸಿತ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ADVERTISEMENT

ಘಟನೆ ವಿವರ: ದೀಪಕ್ ನಂದಕಿಶೋರ್ ಜವಹಾರ್ ಮನೆಯಲ್ಲಿ ಫೆ. 24 ರಂದು ರಾತ್ರಿ 9.30 ರ ಸುಮಾರಿಗೆ ದರೋಡೆ ನಡೆದಿತ್ತು.‌ ಈ ಕುರಿತು ‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.‌

ನಾಲ್ಕು ಜನ ಕಳ್ಳರು ಮನೆಗೆ ನುಗ್ಗಿ ಚಾಕು, ಕಬ್ಬಿಣದ ಸ್ಕ್ಯಾನರ್ ತೋರಿಸಿ ದೂರುದಾರ ಮತ್ತು ಅವರ ಮನೆಯವರಿಗೆ ಹೆದರಿಕೆ ಹಾಕಿ ಭಯಹುಟ್ಟಿಸಿದ್ದರು. ಬೆಡ್ ರೂಮಿನ ಅಲಮಾರಿನಲ್ಲಿದ್ದ ನಾಲ್ಕು ತೊಲೆಯ ಚಿನ್ನಾಭರಣ, ಬೋಳಮಾರ ಸರ,‌ ಬೆಳ್ಳಿಯ ಕಾಲುಚೈನ್, ನಗದು ಹಣ ₹5,000, ಐದು ಮೊಬೈಲ್ ಫೋನ್‌ಗಳು ಹೀಗೆ ₹19.15 ಲಕ್ಷ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದರು. ತನಿಖೆಗಾಗಿ ಎಸ್ಪಿ‌ ತಂಡ ರಚಿಸಿದ್ದರು‌.‌

ಈಗಾಗಲೇ ಮಹ್ಮದ್‌ ಸಾಜಿದ್ ಅಬ್ದುಲ್ ವಾಹಿದ್,‌ ಸೈಯದ್ ಮುಸ್ಲಿಯಾರ್ ಸೈಯದ್ ಗೌಸ್ ಕುರುಡಿ, ಮೆಹಬೂಬ್ ಮಹ್ಮದ್ ಹುಸೇನ್ ಪಟೇಲ್, ಶಹಾಬಾಜ್ ಹೈಯಾಸ್ ಮಹ್ಮದ್‌ ಉಸ್ಮಾನ್ ಶೇಖ್ ಆರೋಪಿಗಳನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.