
ಯಾದಗಿರಿ: ಜಿಲ್ಲೆಯ ಕೆಂಭಾವಿಯಲ್ಲಿ ನ. 4ರಂದು ಪಥಸಂಚಲನಕ್ಕೆ ಅನುಮತಿ ಕೋರಿ ಮೂರು ಸಂಘಟನೆಗಳು ಮನವಿ ಸಲ್ಲಿಸಿದ್ದ ಸಂಬಂಧ ಸುರಪುರ ಡಿವೈಎಸ್‌ಪಿ ನೇತೃತ್ವದಲ್ಲಿ ಶನಿವಾರ ನಡೆದ ಶಾಂತಿ ಸಭೆಯಲ್ಲಿ ಒಮ್ಮತ ಮೂಡದೆ ಇರುವುದು ಗೊತ್ತಾಗಿದೆ.
ಡಿವೈಎಸ್‌ಪಿ ಜಾವೇದ್ ಇನಾಮದಾರ್, ಗ್ರೇಡ್–2 ತಹಶೀಲ್ದಾರ್ ಮಲ್ಲಯ್ಯ ಹಾಗೂ ಪುರಸಭೆ ಮುಖ್ಯಾಧಿಕಾರಿ ಮಹ್ಮದ್ ಯೂಸುಫ್ ನೇತೃತ್ವದಲ್ಲಿ ಸಭೆ ಜರುಗಿತು. ಆರ್‌ಎಸ್‌ಎಸ್, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸ್ವಾಭಿಮಾನಿ ಪ್ರೊ. ಜಿ.ಕೃಷ್ಣಪ್ಪ ಬಣ) ಹಾಗೂ ರಾಜ್ಯ ದಲಿತ ಸಂಘರ್ಷ ಸಮಿತಿ ಮುಖಂಡರನ್ನು ಪ್ರತ್ಯೇಕವಾಗಿ ಕರೆಯಿಸಿ ಚರ್ಚಿಸಿದರು.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಇನಾಮದಾರ್, ‘ಇಬ್ಬರಿಗೆ ಒಂದೇ ದಿನ ಅನುಮತಿ ಕೊಡಲು ಆಗುವುದಿಲ್ಲ. ಮೇಲಧಿಕಾರಿಗಳು ಪ್ರತ್ಯೇಕ ದಿನಗಳನ್ನು ಗುರುತಿಸಿ ಅನುಮತಿ ಕೊಡುತ್ತಾರೆ. ಕಾನೂನು ಉಲ್ಲಂಘಿಸುವಂತಿಲ್ಲ ಎಂದು ತಿಳಿಸಲಾಗಿದೆ’ ಎಂದರು.
‘ಆರ್‌ಎಸ್‌ಎಸ್‌ಗೆ ಅವಕಾಶ ಕೊಟ್ಟರೆ ನಮಗೂ ಕೊಡಬೇಕು. ಅವರು ಹಿಂಪಡೆದರೆ ನಾವೂ ಹಿಂಪಡೆಯುತ್ತೇವೆ. ಅನುಮತಿ ಕೊಡದಿದ್ದರೂ ಮಾಡುತ್ತೇವೆ’ ಎಂದು ದಲಿತ ಸಂಘರ್ಷ ಸಮಿತಿಯ ಶಹಾಪುರ ತಾಲ್ಲೂಕು ಸಂಚಾಲಕ ಮರೆಪ್ಪ ಸಲಾದಪುರ ತಿಳಿಸಿದರು.
‘ಒಂದೇ ದಿನ ಅನುಮತಿ ಕೇಳುವುದು ತಪ್ಪು. ಮೊದಲು ಯಾರು ಅನುಮತಿ ಕೇಳಿದ್ದಾರೆ ಅವರಿಗೆ ಕೊಟ್ಟು ಉಳಿದವರ ಮನವೊಲಿಸಿ ಬೇರೆ ದಿನ ನೀಡಿ. ಪಟ್ಟು ಹಿಡಿದರೆ ಅದೇ ದಿನ ಬೇರೆ ಸಮಯ ನಿಗದಿ ಮಾಡುವಂತೆ ಎಸ್‌ಪಿಗೆ ಹೇಳಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಒಳ್ಳೆಯ ಉದ್ದೇಶಕ್ಕೆ ಮಾಡುವುದನ್ನು ಜಟಿಲವಾಗಿಸಿ ಸಂಘರ್ಷಕ್ಕೆ ಒಯ್ಯುವುದು ತಪ್ಪಾಗುತ್ತದೆ. ಆರ್‌ಎಸ್‌ಎಸ್ ನಿಷೇಧ ಎಐಸಿಸಿ ಅಧ್ಯಕ್ಷರ ವೈಯಕ್ತಿಕ ಹೇಳಿಕೆ. ನೋಂದಣಿಯಾಗದ ಸಂಘವನ್ನು ನಿಷೇಧಿಸುವುದು ಹೇಗೆ? ಅದೆಲ್ಲ ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.