ADVERTISEMENT

ಶಹಾಪುರ: ‘ಬರ ಅಧ್ಯಯನ ಹೆಸರಲ್ಲಿ ಕಾಲಹರಣ’

ಪ್ರಾಂತ ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಟಿ.ಯಶವಂತ ಟೀಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2023, 8:31 IST
Last Updated 16 ಅಕ್ಟೋಬರ್ 2023, 8:31 IST
ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮದಲ್ಲಿ ಶರಬಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಮುಕ್ತಾಯವಾದ ಮೂರು ದಿನದ ರಾಜ್ಯಮಟ್ಟದ ಅಧ್ಯಯನ ಶಿಬಿರದಲ್ಲಿ ಟಿ.ಯಶವಂತ ಮಾತನಾಡಿದರು
ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮದಲ್ಲಿ ಶರಬಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಮುಕ್ತಾಯವಾದ ಮೂರು ದಿನದ ರಾಜ್ಯಮಟ್ಟದ ಅಧ್ಯಯನ ಶಿಬಿರದಲ್ಲಿ ಟಿ.ಯಶವಂತ ಮಾತನಾಡಿದರು   

ಶಹಾಪುರ: ‘ಈಸಲ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ಸರ್ಕಾರಗಳು ಬರ ಅಧ್ಯಯನ ಹೆಸರಿನಲ್ಲಿ ಕಾಲಹರಣ ಮಾಡುತ್ತಿರುವುದು ನಾಚಿಗೇಡಿನ ಸಂಗತಿ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಟಿ.ಯಶವಂತ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ರಸ್ತಾಪುರ ಗ್ರಾಮದಲ್ಲಿ ಶರಬಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಪನ್ನಗೊಂಡ ಮೂರು ದಿನಗಳ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಮಟ್ಟದ ಅಧ್ಯಯನ ಶಿಬಿರದಲ್ಲಿ ಅವರು ಮಾತನಾಡಿದರು.

‘ಸರ್ಕಾರವು ಬರ ಕಾಮಗಾರಿಗಳನ್ನು ಯುದ್ದೋಪಾದಿಯಲ್ಲಿ ಕೈಗೊಳ್ಳಲು ನರೇಗಾ ಕೆಲಸ, ಪಡಿತರ ವಿತರಣೆ ಹೆಚ್ಚಳ, ಮೇವು, ಕುಡಿಯುವ ನೀರು ಒದಗಿಸಲು ಗಮನಹರಿಸಬೇಕು. ಬಗರಹುಕುಂ ಹಾಗೂ ಅರಣ್ಯ ಸಾಗುವಳಿ ರೈತರನ್ನು ಒಕ್ಕಲೆಬ್ಬಿಸಬಾರದು’ ಎಂದು ಒತ್ತಾಯಿಸಿದರು.

ADVERTISEMENT

ಅಲ್ಲದೇ, ‘ವಿದ್ಯುತ್‌ ಖಸಗೀಕರಣ ಸರಿಯಲ್ಲ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ಎಂಟು ಗಂಟೆ ಕಾಲ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಘಟಕದ ಉಪಾಧ್ಯಕ್ಷ ಯು.ಬಸವರಾಜ ಸಮಾರೋಪ ನುಡಿಗಳನ್ನಾಡಿದರು.

‘ರೈತಾಪಿ ವರ್ಗದ ಬೇಸಾಯ ಕಡೆಗಣಿಸಿ ಖಾಸಗಿ ಕಂಪನಿಗಳ ಬೇಸಾಯ ಪದ್ಧತಿ ಜಾರಿ ತರುವ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆಸಿದೆ. ಕೃಷಿ ಭೂಮಿ ರೈತರ ಕೈಯಲ್ಲಿ ಉಳಿದರೆ ಮಾತ್ರವೇ ದೇಶದ ಜನರಿಗೆ ಆಹಾರ ಭದ್ರತೆ ದೊರೆಯಲಿದೆ. ಇಲ್ಲದಿದ್ದರೆ, ದೇಶವು ಹಸಿವಿನ ಸಮಸ್ಯೆ ಎದುರಿಸಲಿದೆ’ ಎಂದು ಎಚ್ಚರಿಸಿದರು.

ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನಪ್ಪ ಆನೇಗುಂದಿ, ಎಸ್.ಎಂ. ಸಾಗರ, ಕೃಷಿ ಕೂಲಿಕಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಾವಲಸಾಬ್ ನದಾಫ್, ಜೈಲಾಲ್‌ ತೋಟದಮನೆ, ಭೀಮರಾಯ ಪೂಜಾರಿ, ಮಲ್ಲಣ್ಣಗೌಡ, ನವೀನಕುಮಾರ, ಶಾಂತರಾಮ ನಾಯಕ, ಸಾಯಿಬಣ್ಣ ಗುಡುಬಾ, ಭರತರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.