ADVERTISEMENT

ಸೈದಾಪುರ |ಆಯುಧ ಪೂಜೆಗೆ ಅತಿವೃಷ್ಟಿಯ ಹೊಡೆತ: ಬೆಲೆ ಕಡಿಮೆ, ವ್ಯಾಪಾರ ಕುಂಠಿತ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 8:30 IST
Last Updated 1 ಅಕ್ಟೋಬರ್ 2025, 8:30 IST
ಸೈದಾಪುರ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಬಾಳೆಗೊನೆ, ಹೂ, ಕುಂಬಳಕಾಯಿ ಖರೀದಿಸಿದ ಗ್ರಾಹಕರು
ಸೈದಾಪುರ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಬಾಳೆಗೊನೆ, ಹೂ, ಕುಂಬಳಕಾಯಿ ಖರೀದಿಸಿದ ಗ್ರಾಹಕರು   

ಸೈದಾಪುರ: ಈ ವರ್ಷದ ಆಯುಧ ಪೂಜೆಗೆ ಅವಿವೃಷ್ಟಿ, ಪ್ರವಾಹದ ಕಾರ್ಮೋಡ ಕವಿದಿದ್ದು ವ್ಯಾಪಾರ ಕುಂಠಿತಗೊಂಡಿತ್ತು.

ಬಾಳೆಗೊನೆ, ಕುಂಬಳಕಾಯಿ ಸೇರಿ ವಿವಿಧ ರೀತಿಯ ಹೂ- ಹಣ್ಣುಗಳನ್ನು ವ್ಯಾಪಾರಸ್ಥರು ಪಕ್ಕದ ರಾಯಚೂರು, ಕಲಬುರಗಿ ಜಿಲ್ಲೆಯಿಂದ ಸೋಮವಾರ ರಾತ್ರಿಯೇ ತಂದಿದ್ದರು. 

ರಸ್ತೆ ಸಂಪರ್ಕ ಕಡಿತ ವ್ಯಾಪಾರಕ್ಕೆ ಹೊಡೆತ: ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಭೀಮಾ ನದಿಯ ಪ್ರವಾಹದಿಂದ ಸಮೀಪದ ಗೂಡೂರು ಹಾಗೂ ಆನೂರು(ಕೆ) ಗ್ರಾಮದ ಹತ್ತಿರದ ಬ್ರಿಡ್ಜ್‌ ಕಂ ಬ್ಯಾರೇಜ್‌ಗಳು ಸಂಪೂರ್ಣ ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿದಿತ್ತು. ಇದರಿಂದ ನದಿ ಆಚೆಗಿನ  ಬೆಂಡೆಬೆಂಬಳಿ, ಕಂದಳ್ಳಿ, ಬಿಳ್ಹಾರ, ಜೋಳದಡಗಿ ಸೇರಿ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.

ADVERTISEMENT

ವ್ಯಾಪಾರಸ್ಥರು ಅಗತ್ಯ ವಸ್ತುಗಳನ್ನು ಖರೀದಿಸಿ ಪೂಜೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಈ ಬಾರಿ ಅತಿವೃಷ್ಟಿ ಮತ್ತು ಪ್ರವಾಹದಿಂದ ರೈತರು ಮತ್ತು ಜನಸಾಮಾನ್ಯರಲ್ಲಿ ಹಬ್ಬದ ವಾತಾವರಣ ಕಳೆಗುಂದಿದೆ.

ರೈತರು ತಮ್ಮ ಹೊಲದಲ್ಲಿನ ಬೆಳೆ ಕಳೆದುಕೊಂಡಿರುವುದು ಒಂದೆಡೆಯಾದರೆ ಇನ್ನೂ ಕೆಲವರು ಮನೆಗಳನ್ನು ಮತ್ತು ಜೀವನೋಪಾಯಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಕಳೆದುಕೊಂಡು ಕಾಳಜಿ ಕೇಂದ್ರದಲ್ಲಿ ಕಾಲ ಕಳೆಯುವಂತಾಗಿದೆ. ಇದರಿಂದ ಹಬ್ಬ ಆಚರಣೆ ಮಾಡುವ ಖುಷಿಯೇ ಕಳೆದು ಹೋದಂತಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ವ್ಯಾಪಾರ ವಹಿವಾಟು ಕುಂಠಿತ: ಬಟ್ಟೆ, ಆಭರಣ, ಪೂಜಾ ಸಾಮಗ್ರಿ, ಕಿರಾಣಿ, ವಾಹನ ಮಾರಾಟ ಮಳಿಗೆಗಳು ಸೇರಿದಂತೆ ಅಂಗಡಿಗಳಲ್ಲಿ ವಹಿವಾಟು ಎಂದಿನಂತೆ ಸಾಮಾನ್ಯವಾಗಿದೆ ಎಂದು ಹಣ್ಣಿನ ವ್ಯಾಪಾರಿ ಹನುಮಂತರಾಯ ನಾಯಕ ನಿರಾಸೆ ವ್ಯಕ್ತಪಡಿಸಿದರು.

ಕಳೆದ ವರ್ಷಕ್ಕಿಂತ ಈ ವರ್ಷ ಹೂ-ಹಣ್ಣು, ಬಾಳೆಗೊನೆ, ಕುಂಬಳಕಾಯಿ ದರದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿರುವುದು ಕಂಡು ಬಂದಿತು.

ಸೈದಾಪುರ ಸಮೀಪದ ಗೂಡೂರು-ಜೋಳದಡಗಿ ಗ್ರಾಮದ ಹತ್ತಿರದ ಬ್ರಿಜ್ ಕಂ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿಯುತ್ತಿರುವುದು

ಬಾಳೆಗೊನೆ ಜೋಡಿಗೆ ₹50, ಕುಂಬಳಕಾಯಿ ₹50–100, ಕೆ.ಜಿ ಚೆಂಡು ಹೂವಿಗೆ ₹120–150, ಸೇವಂತಿ ₹30, ಕನಕಾಂಬರ ₹30, ಗುಲಾಬಿ ₹45, ಕೆ.ಜಿ, ಸುಗಂಧಿ ₹200 ಇದ್ದರೆ ಡಜನ್‌ ಬಾಳೆಹಣ್ಣು ₹40, ಸೇಬು ಒಂದಕ್ಕೆ ₹15-25, ಸೀತಫಲ ಒಂದಕ್ಕೆ ₹25, ಮೊಸಂಬಿ ₹15–20, ದಾಳಿಂಬೆ ₹15–20, ದ್ರಾಕ್ಷಿ ಕೆಜಿಗೆ ₹120–150, ಡ್ರ್ಯಾಗನ್ ಫ್ರೂಟ್ ₹150, ಖರ್ಜೂರ ₹150, ನಿಂಬೆಹಣ್ಣು 5ಕ್ಕೆ ₹20, ತೆಂಗಿನಕಾಯಿ ಒಂದಕ್ಕೆ ₹20–₹30, ಪೇರಲ ₹100–₹120 ಇದೆ.

ಮಾರುಕಟ್ಟೆಗೆ ಆಗಮಿಸಿದ ಗ್ರಾಹಕರು ಮತ್ತು ವಾಹನಗಳಿಂದ ಬಸವೇಶ್ವರ ವೃತ್ತ, ಕನಕ ವೃತ್ತ, ಬಸ್ ನಿಲ್ದಾಣದ ಹತ್ತಿರ ಸಂಜೆಯಾಗುತ್ತಿದ್ದಂತೆ ಜನದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಉಂಟಾಯಿತು.

ಮಹೇಶ ಬೈರನಳ್ಳಿ ಸೈದಾಪುರ ಹೂವಿನ ವ್ಯಾಪಾರಿ
ನೈಸರ್ಗಿಕ ವಿಕೋಪದಿಂದ ಕಳೆದ ವರ್ಷಕ್ಕಿಂತ ವರ್ಷ ವ್ಯಾಪಾರ ಕಡಿಮೆಯಾಗಿದೆ
ಮಹೇಶ ಬೈರನಳ್ಳಿ, ಹೂವಿನ ವ್ಯಾಪಾರಿ
ಮರೆಪ್ಪ ಗಡದ ಸೈದಾಪುರ ಗ್ರಾಹಕ
ಅತಿ ಮಳೆ ನೆರೆಯಿಂದ ಹಬ್ಬದ ಆಚರಣೆಗೆ ಕಳೆ ಇಲ್ಲದಂತಾಗಿದೆ. ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕು
ಮರೆಪ್ಪ ಗಡದ ,ಗ್ರಾಹಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.