ADVERTISEMENT

ಶಿಥಿಲಗೊಂಡ ಕಟ್ಟಡ; ಇದ್ದೂ ಇಲ್ಲದಂತಾದ ಬಸ್ ತಂಗುದಾಣ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 7:18 IST
Last Updated 27 ಫೆಬ್ರುವರಿ 2026, 7:18 IST
ಚಿತ್ರಶೀರ್ಷಿಕೆ:26ಎಸ್‍ಡಿಪಿಆರ್1: ಸೈದಾಪುರ ಸಮೀಪದ ಗ್ರಾಮ ಸೈದಾಪುರದಲ್ಲಿರುವ ಬಸ್ ತಂಗುದಾಣದಲ್ಲಿ ಹುಲ್ಲು, ಗಿಡಗಂಟಿ ಬೆಳೆದು ಸಂಪೂರ್ಣವಾಗಿ ಶಿಥಿಲಾವಸ್ಥೆಗೊಂಡು ಪ್ರಯಾಣಿಕರ ಉಪಯೋಗಕ್ಕೆ ಬಾರದಂತಾಗಿರುವುದು.
ಚಿತ್ರಶೀರ್ಷಿಕೆ:26ಎಸ್‍ಡಿಪಿಆರ್1: ಸೈದಾಪುರ ಸಮೀಪದ ಗ್ರಾಮ ಸೈದಾಪುರದಲ್ಲಿರುವ ಬಸ್ ತಂಗುದಾಣದಲ್ಲಿ ಹುಲ್ಲು, ಗಿಡಗಂಟಿ ಬೆಳೆದು ಸಂಪೂರ್ಣವಾಗಿ ಶಿಥಿಲಾವಸ್ಥೆಗೊಂಡು ಪ್ರಯಾಣಿಕರ ಉಪಯೋಗಕ್ಕೆ ಬಾರದಂತಾಗಿರುವುದು.   

ಸೈದಾಪುರ: ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದ ಬಸ್ ತಂಗುದಾಣವು ನಿರ್ವಹಣೆಯಿಲ್ಲದೆ, ಮುಳ್ಳು ಕಂಟಿಗಳು ಬೆಳೆದು ಹುಳುಹುಪ್ಪಡಿಗಳ ಆವಾಸ ಸ್ಥಾನವಾಗಿದೆ. ಕಟ್ಟಡವು ಸಂಪೂರ್ಣ ಶಿಥಿಲಗೊಂಡಿದೆ.

ಸಮೀಪದ ಸೈದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಹತ್ತಿರದ ಬಸ್‍ ನಿಲ್ದಾಣವು ಸೂಕ್ತನಿರ್ವಹಣೆಯಿಲ್ಲದೆ ಜಾಲಿಗಿಡಗಳ ಮಧ್ಯೆ ಸಿಲುಕಿದ್ದು, ಪ್ರಯಾಣಿಕರು ಮತ್ತು ಸಾರ್ವಜನಿಕರ ಅನುಕೂಲಕ್ಕೆ ಇಲ್ಲದಂತಾಗಿದೆ.

‘ಸರ್ಕಾರವು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ತಂಗುದಾಣ ನಿರ್ಮಿಸಿದ್ದು, ಕಾಲ ಕಾಲಕ್ಕೆ ನಿರ್ವಹಣೆಯಿಲ್ಲದೆ ಕಟ್ಟಡಗಳು ಹಾಳಾಗಿ ಹೋಗುತ್ತಿವೆ. ಪಟ್ಟಣದ ಕೇಂದ್ರ ಬಸ್‍ನಿಲ್ದಾಣದಿಂದ ರಾಯಚೂರು ಜಿಲ್ಲಾ ಕೇಂದ್ರಕ್ಕೆ ನಿತ್ಯ ಹತ್ತಾರು ಬಸ್‍ಗಳು ಸಂಚರಿಸುತ್ತವೆ. ಆದರೆ ಮುಳ್ಳುಕಂಟಿಗಳಲ್ಲಿ ಮುಚ್ಚಿರುವ ನಿಲ್ದಾಣದಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಚಾಲಕರು ಬಸ್‌ಗಳನ್ನೂ ನಿಲ್ಲಿಸುವುದಿಲ್ಲ. ಹೀಗಾಗಿ ಗ್ರಾಮಸ್ಥರು, ಒಂದು ಕಿ.ಮೀ ಹಿಂದೆ ರಾಚನಳ್ಳಿ ಕ್ರಾಸ್‍ಹತ್ತಿರ ಇಲ್ಲವೇ ಕೇಂದ್ರ ಬಸ್‍ನಿಲ್ದಾಣದಲ್ಲಿ ಇಳಿದು ಖಾಸಗಿ ವಾಹನಗಳ ಮೂಲಕ ಗ್ರಾಮಕ್ಕೆ ವಾಪಾಸಾಗಬೇಕಿದೆ. ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣಿಸುವ ಹಿರಿಯರು, ಅಂಗವಿಕಲರು, ಮಕ್ಕಳು, ಮಹಿಳೆಯರು ಪಟ್ಟಣದ ಬಸ್‍ನಿಲ್ದಾಣಕ್ಕೆ ಬಂದು ಹತ್ತಿಕೊಂಡು ಹೋಗಿ ಬರಬೇಕಾಗಿದೆ. ಇದರಿಂದ ಸಮಯಕ್ಕೆ ಸರಿಯಾಗಿ ದೂರದ ನಗರ ಪ್ರದೇಶಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ ಎಂಬುದು ಗ್ರಾಮಸ್ಥರು ಆಕ್ರೋಶವಾಗಿದೆ.

ADVERTISEMENT

ವಿದ್ಯಾರ್ಥಿಗಳ ಪರದಾಟ: ಶೆಟ್ಟಿಹಳ್ಳಿ, ರಾಚನಳ್ಳಿ, ಕಡೇಚೂರು ಸೇರಿದಂತೆ ವಿವಿಧ ಗ್ರಾಮಗಳಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಪಟ್ಟಣಕ್ಕೆ ಬರುತ್ತಾರೆ. ಆದರೆ ಶಾಲೆ ಎದುರು ಬಸ್‌ಗಳು ನಿಲುಗಡೆಯಾಗುವುದಿಲ್ಲ. ಇದರಿಂದ ಸುಮಾರು 1 ಕಿ.ಮೀ ದೂರ ನಡೆದುಕೊಂಡು ಹೋಗಬೇಕಿದೆ. ಕೆಲವೊಮ್ಮ ಬೆಳಗ್ಗಿನ ಪ್ರಾರ್ಥನೆ, ವಿಶೇಷ ತರಗತಿಗಳು ಮುಗಿದು ಹೋಗಿರುತ್ತವೆ. ಈ ಸಮಸ್ಯೆ ಕುರಿತು ಮಕ್ಕಳ ಗ್ರಾಮಸಭೆಯಲ್ಲಿ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. 10ನೇ ತರಗತಿಯ ಮಕ್ಕಳ ಪರೀಕ್ಷೆಯ ಹಿತದೃಷ್ಟಿಯಿಂದ ಕೋರಿಕೆ ನಿಲುಗಡೆ ಮಾಡಿಕೊಡಬೇಕು ಎಂದು ಪಾಲಕರ ಅಭಿಪ್ರಾಯವಾಗಿದೆ.

ಕಾರ್ಮಿಕರಿಗೂ ಸಂಕಷ್ಟ: ಕಡೇಚೂರು-ಬಾಡಿಯಾಳ ಕೈಗಾರಿಕೆ ಪ್ರದೇಶದ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಗ್ರಾಮದ ಕಾರ್ಮಿಕರಿಗೆ ಬಸ್‌ ನಿಲ್ದಾಣ ಮತ್ತು ಬಸ್ ನಿಲುಗಡೆಯಾಗದೆ ಹೋಗುವುದು ತೀವ್ರ ಸಮಸ್ಯೆಯಾಗಿದೆ. ಕಾರಣ ಕಂಪನಿಗಳಿಂದ ಗ್ರಾಮಕ್ಕೆ ಬರುವಷ್ಟರಲ್ಲಿ ಸಂಜೆಯಾಗುತ್ತದೆ. ಇದರಿಂದ ಕೇಂದ್ರ ಬಸ್‌ ನಿಲ್ದಾಣದಿಂದ ನಿಲ್ದಾಣದಿಂದ ವಾಪಸು ಮನೆಗೆ ಮರಳಿ ಬರುವಷ್ಟರಲ್ಲಿ ಕತ್ತಲು ಆವರಿಸಿರುತ್ತದೆ,

ಬಜೆಟ್ ಅಧಿವೇಶನದ ಬಳಿಕ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಶಿಥಿಲಗೊಂಡಿರುವ ಬಸ್‍ ತಂಗುದಾಣವನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಅನುಕೂಲಕ್ಕೆ ಮಾಡಿಕೊಡಲಾಗುವುದು.
– ಮಂಜುನಾಥ ಜಿ.ಬಿ., ಡಿ.ಸಿ. ಕೆಕೆಆರ್‌ಟಿಸಿ ಯಾದಗಿರಿ
ಶಿಥಿಲಗೊಂಡ ತಂಗುದಾಣವನ್ನು ಸ್ವಚ್ಛ ಹಾಗೂ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕು. ರಾಯಚೂರು-ಯಾದಗಿರಿ ಮಾರ್ಗವಾಗಿ ಸಂಚರಿಸುವ ಬಸ್‍ಗಳನ್ನು ನಿಲುಗಡೆ ಮಾಡಬೇಕು.
– ಆಂಜನೇಯ ಮಡಿವಾಳ, ಸೈದಾಪುರ ನಿವಾಸಿ
ಬಸ್‌ ತಂಗುದಾಣ ಸೂಕ್ತ ನಿರ್ವಹಣೆ ಕಟ್ಟಡ ಹಾಳಾಗಿದೆ. ಸುತ್ತಲು ಹುಲ್ಲು–ಕಂಟಿಗಳಲ್ಲಿ ಮುಚ್ಚಿಕೊಂಡಿದೆ. ಸಂಬಂಧಿಸಿದ ಅಧಿಕಾರಗಿಳು ಕಟ್ಟಡ ದುರಸ್ತಿಗೊಳಿಸಿ ಸ್ವಚ್ಛಗೊಳಿಸಿದರೆ ಅನುಕೂಲವಾಗುತ್ತದೆ
– ರವಿಕುಮಾರ ಕಡೇಚೂರು, ಸೈದಾಪುರ ಗ್ರಾಮಸ್ಥ