ADVERTISEMENT

ಸಲ್ಲಾಂ ಸಾವು: ಕ್ರಮಕ್ಕೆ ಆಗ್ರಹ

ಜೋಗಪ್ಪ ಸಮುದಾಯದ ವ್ಯಕ್ತಿ ಹಲ್ಲೆ, ಸಾವು ಪ್ರಕರಣ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 15:30 IST
Last Updated 31 ಅಕ್ಟೋಬರ್ 2019, 15:30 IST

ಯಾದಗಿರಿ: ‘ಜಿಲ್ಲೆಯ ಸುರಪುರ ತಾಲ್ಲೂಕಿನ ಕಬಾಡಗೇರಾ ಜೋಗಪ್ಪ ಸಮುದಾಯದ (ಟ್ರಾನ್ಸ್‌ಜೆಂಡರ್‌) ಸಲ್ಲಾಂ ಸಾವಿನ ತನಿಖೆ ನ್ಯಾಯ ಒದಗಿಸಿಕೊಡಬೇಕು. ಅವರ ಸಾವಿಗೆ ಕಾರಣರಾದವರಿಗೆ ಶಿಕ್ಷೆ ನೀಡಬೇಕು’ ಎಂದು ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾಂತರ ವೇದಿಕೆ ಮೌನೇಶ್ವರ ವೈ.ಕೆ.,ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಕೆಂಭಾವಿ ರಸ್ತೆಯ ಮಾಲಗತ್ತಿ ಹತ್ತಿರ ಅಕ್ಟೋಬರ್ 16ರಂದು ರಾತ್ರಿ ಸಲ್ಲಾಂ ಮೇಲೆ ದುಷ್ಕರ್ಮಿಗಳು ತೀವ್ರ ಹಲ್ಲೆಗೊಳಿಸಿದ್ದರು. 17 ರಂದು ಸಾರ್ವಜನಿಕರ ಸಹಾಯದಿಂದ ಸಲ್ಲಾಂ ಅವರನ್ನು ಸುರಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಸರಿಯಾದ ಚಿಕಿತ್ಸೆ ಸಿಗದ ಕಾರಣ ಕಲಬುರ್ಗಿ ಜಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ 7 ದಿನಗಳ ಕಾಲ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಅಕ್ಟೋಬರ್ 24ರಂದು ಸಾವನ್ನಪ್ಪಿದ್ದರು. ಹೀಗಾಗಿ ಅವರ ಸಾವಿಗೆ ಕಾರಣವಾದವರಿಗೆ ಕಠಿಣ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.

‘ಜಿಲ್ಲೆಯಲ್ಲಿ 632 ಲೈಂಗಿಕ ಅಲ್ಪಸಂಖ್ಯಾತರು ಇದ್ದು, ಮುಂದಿನ ದಿನಗಳಲ್ಲಿ ಸಮುದಾಯದವರಿಗೆ ಯಾವುದೇ ತೊಂದರೆ ಆಗದಂತೆ ಕಾನೂನು ಚೌಕಟ್ಟಿನಲ್ಲಿ ಸೂಕ್ತ ಭದ್ರತೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಇದು ರಾಜ್ಯದಲ್ಲಿ ಮೊದಲ ಘಟನೆಯಾಗಿದೆ.ಮುಂದೆ ಇಂಥ ಘಟನೆ ಮರುಕಳಿಸಬಾರದು. ನಮ್ಮ ಸಮುದಾಯಕ್ಕೆ ಸರ್ಕಾರ, ಸಾರ್ವಜನಿಕರ ಬೆಂಬಲ ಇಲ್ಲ. ಹೀಗಾಗಿ ಪೊಲೀಸರು ನಮಗೆ ನ್ಯಾಯ ಒದಗಿಸಿ ಕೊಡಬೇಕು’ ಎಂದು ಆಗ್ರಹಿಸಿದರು.

ಕಲಬುರ್ಗಿಯ ಸ್ನೇಹಾ ಸೊಸೈಟಿ ಅಧ್ಯಕ್ಷ ಮನೀಷಾ ಚವ್ಹಾಣ ಮಾತನಾಡಿ, ‘ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಇಲ್ಲದಿದ್ದರಿಂದ ಕಲಬುರ್ಗಿ, ಯಾದಗಿರಿ, ಅಕ್ಕಪಕ್ಕದ ಜಿಲ್ಲೆಯವರೊಂದಿಗೆ ಸೇರಿ ಹೋರಾಟ ಮಾಡಲಾಗುವುದು’ ಎಂದು ತಿಳಿಸಿದರು.

ಯಾದಗಿಯ ಆಶಾ ಸಾಮಾಜಿಕ ಸೇವಾ ಸಂಸ್ಥೆ ಕಾರ್ಯದರ್ಶಿ ತಾಯಪ್ಪ ಮಾತನಾಡಿ, ’ನಮ್ಮ ಸಮುದಾಯಕ್ಕೆ ಸೂಕ್ತ ಭದ್ರತೆ ಒದಗಿಸಿ ಇನ್ನುಮುಂದೆ ಇಂಥ ಘಟನೆಗಳು ಸಂಭವಿಸದಂತೆ ಮಾಡಬೇಕು’ ಎಂದು ಒತ್ತಾಯಿಸಿದರು.

ಈ ವೇಳೆ ಲೈಂಗಿಕ ಅಲ್ಪ ಸಂಖ್ಯಾತರ ಹಕ್ಕುಗಳು ಹೋರಾಟಗಾರ ಬೀರಲಿಂಗ ಬಿ.ಪೂಜಾರಿ, ಜಯ ಕರ್ನಾಟಕ ಜಿಲ್ಲಾ ಘಟಕದ ಬಿ.ಎನ್‌.ವಿಶ್ವನಾಥ ನಾಯಕ, ಸುರಪುರ ಜಯ ಕರ್ನಾಟಕ ಸಂಘಟನಾ ತಾಲ್ಲೂಕು ಅಧ್ಯಕ್ಷ ರವಿಕುಮಾರ ನಾಯಕ, ನಗರ ಘಟಕದ ಅಧ್ಯಕ್ಷ ಮಲ್ಲು ನಾಯಕ, ಬಲಭೀಮ ನಾಯಕ, ಆಶಾ ಕಿರಣ ಸಾಮಾಜಿಕ ಸೇವಾ ಸಂಸ್ಥೆ ಸದಸ್ಯೆ ಸೋನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.