ADVERTISEMENT

ಯಾದಗಿರಿ: ಎಟಿಎಂಗಳಲ್ಲಿಲ್ಲ ಸ್ಯಾನಿಟೈಸರ್‌

ಬಹುತೇಕ ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲ, ‘ಅಂತರ’ವೂ ಇಲ್ಲ

ಬಿ.ಜಿ.ಪ್ರವೀಣಕುಮಾರ
Published 18 ಮೇ 2020, 19:45 IST
Last Updated 18 ಮೇ 2020, 19:45 IST
ಯಾದಗಿರಿಯ ಹೊಸಳ್ಳಿ ಕ್ರಾಸ್‌ ರಸ್ತೆ ಬಳಿ ಇರುವ ಎಟಿಎಂನಲ್ಲಿ ಭದ್ರತಾ ಸಿಬ್ಬಂದಿ ಇಲ್ಲ, ಸ್ಯಾನಿಟೈಸರ್‌ ವ್ಯವಸ್ಥೆಯೂ ಇಲ್ಲ
ಯಾದಗಿರಿಯ ಹೊಸಳ್ಳಿ ಕ್ರಾಸ್‌ ರಸ್ತೆ ಬಳಿ ಇರುವ ಎಟಿಎಂನಲ್ಲಿ ಭದ್ರತಾ ಸಿಬ್ಬಂದಿ ಇಲ್ಲ, ಸ್ಯಾನಿಟೈಸರ್‌ ವ್ಯವಸ್ಥೆಯೂ ಇಲ್ಲ   

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕೆಲ ಎಟಿಎಂ ಹೊರತು ಪಡಿಸಿ ಬಹುತೇಕಕೇಂದ್ರಗಳಲ್ಲಿಸ್ಯಾನಿಟೈಸರ್‌ ವ್ಯವಸ್ಥೆ ಇಲ್ಲ. ಭದ್ರತಾ ಸಿಬ್ಬಂದಿಯೂ ಇಲ್ಲ. ಹೀಗಾಗಿ ಇಲ್ಲಿ ಅಂತರ ಕಾಯ್ದಕೊಳ್ಳುವ ನಿಯಮ ಬಹುತೇಕ ವಿಫಲವಾಗುತ್ತಿದೆ.

ಜಿಲ್ಲೆಯಲ್ಲಿ ರಾಷ್ಟ್ರೀಕೃತ, ಖಾಸಗಿ, ಸಹಕಾರಿ, ಪಿಕೆಜಿಬಿ, ಕೆಎಸ್‌ಎಫ್‌ಸಿ ಸೇರಿದಂತೆ 123 ಬ್ಯಾಂಕ್‌ಗಳಿವೆ. ಸುಮಾರು70ರಿಂದ 80 ಎಟಿಎಂಗಳಿವೆ. ಆದರೆ, ಬಹುಪಾಲು ಎಟಿಎಂಗಳಲ್ಲಿ ಸಾಂಕ್ರಾಮಿಕ ರೋಗ ಕೊರೊನಾ ಸಂಬಂಧಿಸಿದಂತೆ ಯಾವುದೇ ಸೂಚನೆ ಪಾಲನೆಯಾಗುತ್ತಿಲ್ಲ.

ಎಟಿಎಂ ಒಳಗೆ ಒಬ್ಬರ ನಂತರ ಮತ್ತೊಬ್ಬರು ಪ್ರವೇಶ ಮಾಡಬೇಕು. ಆದರೆ, ಇಬ್ಬರು ಮೂವರು ಎಟಿಎಂಗಳಲ್ಲಿ ನಿಂತಿರುತ್ತಾರೆ. ಎಲ್ಲಿಯೂ ಅಂತರ ಪಾಲನೆಯಾಗುತ್ತಿಲ್ಲ. ಕೊರೊನಾ ಸಾಂಕ್ರಾಮಿಕ ರೋಗವಾಗಿದ್ದರಿಂದ ಪದೇ ಪದೇ ಕೈ ತೊಳೆಯಬೇಕು. ಎಲ್ಲ ಕಡೆ ಸ್ಯಾನಿಟೈಸರ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಡಳಿತ ಸೂಚನೆಯಾಗಿದೆ. ಆದರೆ, ಎಟಿಎಂಗಳಲ್ಲಿ ಈ ನಿಯಮಕ್ಕೆ ಎಳ್ಳುನೀರು ಬಿಡಲಾಗಿದೆ.

ADVERTISEMENT

ಸಾರ್ವಜನಿಕ ಕಚೇರಿ, ಕೇಂದ್ರಗಳಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್‌ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಜಿಲ್ಲಾಡಳಿತದ ಸೂಚನೆಯಾಗಿದೆ. ಆದರೆ, ಎಟಿಎಂ ಕೇಂದ್ರಗಳಲ್ಲಿ ಬ್ಯಾಂಕ್‌ ಅಧಿಕಾರಿಗಳು ಈ ನಿಯಮ ಗಾಳಿಗೆ ತೂರಿದ್ದಾರೆ ಎಂಬುದು ಗ್ರಾಹಕರ ದೂರಾಗಿದೆ.

ನಗರದ ಹೊಸಳ್ಳಿ ಕ್ರಾಸ್‌ ರಸ್ತೆ ಬಳಿ ಐಸಿಐಸಿಐ ಬ್ಯಾಂಕ್‌ನ ಎಟಿಎಂ ಸ್ಥಾಪಿಸಲಾಗಿದೆ. ಆದರೆ, ಇಲ್ಲಿ ಆರಂಭದಿಂದಲೂ ಭದ್ರತಾ ಸಿಬ್ಬಂದಿ ಇಲ್ಲ. ಕೊರೊನಾ ಸಂದರ್ಭದಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಿಲ್ಲ ಎಂದು ಗ್ರಾಹಕರು ದೂರುತ್ತಾರೆ.

‘ನಾನು ಹಲವಾರು ದಿನಗಳಿಂದ ಎಟಿಎಂ ಕೇಂದ್ರಕ್ಕೆ ಬರುತ್ತಿದ್ದೇನೆ. ಆದರೆ, ಬ್ಯಾಂಕ್‌ ಅಧಿಕಾರಿಗಳು ಇಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿಲ್ಲ. ಹಣ ಪಡೆಯಲು ನೂರಾರು ಗ್ರಾಹಕರು ಬರುತ್ತಾರೆ. ಆದರೆ, ಇಲ್ಲಿರುವ ಎಟಿಎಂ ಕೇಂದ್ರದ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ’ ಎಂದು ಗ್ರಾಹಕ ಸುರೇಶ ಕುಮಾರ ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಎಟಿಎಂ ಕೇಂದ್ರದ ಬಳಿಯೇ ಪೊಲೀಸರುಚೌಕಿ ಹಾಕಿಕೊಂಡಿದ್ದಾರೆ. ಆದರೆ, ಅವರು ನಿಯಮ ಪಾಲನೆಗೆ ತಿಳಿ ಹೇಳುತ್ತಿಲ್ಲ. ಇದರಿಂದ ನಮ್ಮ ಸುರಕ್ಷತೆ ಹೇಗೆ. ಎಲ್ಲ ವರ್ಗದ ಜನರು ಬಂದು ಹಣ ಪಡೆಯಲು ಅಂಕಿಗಳನ್ನು ಒತ್ತಲೇ ಬೇಕಾಗಿದೆ. ಹೀಗಾಗಿ ಇಲ್ಲಿ ಸೇರಿದಂತೆಜಿಲ್ಲೆಯ ಎಲ್ಲಎಟಿಎಂಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು’ ಎನ್ನುತ್ತಾರೆ ರಾಜೇಶ್ ಪಾಟೀಲ.

ಟೋಕನ್‌ ವ್ಯವಸ್ಥೆ:

‘ಬ್ಯಾಂಕ್‌ಗಳಲ್ಲಿ ಹೆಚ್ಚಿನ ಜನಸಂದಣಿ ತಪ್ಪಿಸಲು ಟೋಕನ್‌ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಟೋಕನ್‌ ಪಡೆದವರು ಆಯಾ ಸಮಯಕ್ಕೆ ಬರಲು ಸಾಧ್ಯವಾಗುತ್ತಿದೆ. ಮುಂದೆ ಎಟಿಎಂಗಳಲ್ಲಿ ಎಲ್ಲ ವ್ಯವಸ್ಥೆ ಕಲ್ಪಿಸಲಾಗುವುದು.ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು’ಎಂದುಲೀಡ್‌ ಬ್ಯಾಂಕ್‌ ಮ್ಯಾನೇಜರ್ ಬಿ.ಎ.ಕೃಷ್ಣಾ ಹೇಳುತ್ತಾರೆ. ‌

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಸಾರ್ವಜನಿಕರು ಸೇರುವ ಸ್ಥಳದಲ್ಲಿ ಕಡ್ಡಾಯವಾಗಿ ಅಂತರ ಪಾಲನೆ, ಸ್ಯಾನಿಟೈಸರ್‌ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

***

ಕೆಲವೊಂದು ಎಟಿಎಂಗಳಲ್ಲಿದ್ದ ಸ್ಯಾನಿಟೈಸರ್‌ ಅನ್ನು ಸಾರ್ವಜನಿಕರು ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಕೆಲ ಕಡೆ ಸಮಸ್ಯೆ ಆಗಿದೆ. ದೊಡ್ಡ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ಇದ್ದಾರೆ
ಬಿ.ಎ.ಕೃಷ್ಣಾ, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌

***

ನಗರದಲ್ಲಿ ಬಹುತೇಕ ಎಟಿಎಂಗಳಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ ಇಲ್ಲ. ಗ್ರಾಹಕರು ಅಂತರ ಕಾಯ್ದುಕೊಳ್ಳುತ್ತಿಲ್ಲ. ಭದ್ರತಾ ಸಿಬ್ಬಂದಿ ಇದ್ದರೆ ಒಬ್ಬೊಬ್ಬರನ್ನು ಎಟಿಎಂ ಒಳಗೆ ಬಿಡಬಹುದು
ಮುಸ್ತಾಫ್‌ ಪಟೇಲ್‌, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.