ADVERTISEMENT

ಮಕರ ಸಂಕ್ರಮಣ: ನದಿಗಳಲ್ಲಿ ಪುಣ್ಯಸ್ನಾನ

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 6:14 IST
Last Updated 16 ಜನವರಿ 2023, 6:14 IST
ಯಾದಗಿರಿ ಸಮೀಪದ ಭೀಮಾನದಿಯಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿ ವಿವಿಧ ಭಕ್ಷ್ಯ ಬೋಜನ ಸವಿದರು
ಯಾದಗಿರಿ ಸಮೀಪದ ಭೀಮಾನದಿಯಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿ ವಿವಿಧ ಭಕ್ಷ್ಯ ಬೋಜನ ಸವಿದರು   

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಮಕರ ಸಂಕ್ರಮಣ ಪ್ರಯುಕ್ತ ಕೃಷ್ಣಾ, ಭೀಮಾನದಿಯಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿದರು.

ಕುಟುಂಬ ಸಮೇತ ನದಿ ತೀರಕ್ಕೆ ತೆರಳಿ ಎಳ್ಳುಹಚ್ಚಿ ಸ್ನಾನ ಮಾಡಿದರು.

ಬಳಿಕ ಕಲ್ಲು ಬಂಡೆಗಳ ಮೇಲೆ ಶೇಂಗಾ ಹೋಳಿಗೆ, ಖಡಕ್ ರೊಟ್ಟಿ, ಸಜ್ಜೆ ರೊಟ್ಟಿ, ಎಣ್ಣೆ ಬದನೆಕಾಯಿ, ವಿವಿಧ ತರಕಾರಿಗಳಿಂದ ಮಾಡಿದ ಭರ್ಥ, ಶೇಂಗಾ ಚಟ್ನಿ, ಚಿತ್ರಾನ್ನ, ಮೊಸರನ್ನ, ಮೊಸರು ಹೀಗೆ ಮನೆಯಿಂದ ಬುತ್ತಿಯನ್ನು ಸಾಮೂಹಿಕವಾಗಿ ಭೋಜನ ಮಾಡಿದರು.

ADVERTISEMENT

ಭೀಮಾ ನದಿ ತೀರದ ಹುರಸಗುಂಡಗಿ, ಅಬ್ಬೆತುಮಕೂರು, ನಾಯ್ಕಲ್, ಹಾಲಗೇರಾ ಸೇರಿದಂತೆ ವಿವಿಧ ಗ್ರಾಮದ ಭಕ್ತರು ಪುಣ್ಯ ಸ್ನಾನ ಮಾಡಿ ಮಿಂದೆದ್ದರು.

ಕೃಷ್ಣೆಯಲ್ಲಿ ಮಿಂದೆದ್ದ ಭಕ್ತರು

ನಾರಾಯಣಪುರ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಮೀಪದ ಶ್ರೀಛಾಯಾ ಭಗವತಿ ಕ್ಷೇತ್ರದ ಕೃಷ್ಣಾ ನದಿಯಲ್ಲಿ ಭಕ್ತರು ಎಳ್ಳು ಅರಿಷಿಣ, ಎಣ್ಣೆ ಮಿಶ್ರಣವನ್ನು ಹಚ್ಚಿಕೊಂಡು ಪವಿತ್ರ ಸ್ನಾನ ಮಾಡಿ ದೇವಿಯ ದರ್ಶನ ಪಡೆದರು.

ನದಿ ತಟದ ಛಾಯಾ ಭಗವತಿ ಕ್ಷೇತ್ರಕ್ಕೆ ವಿವಿಧ ಜಿಲ್ಲೆಗಳಿಂದ ವಾಹನಗಳು, ಬೈಕ್‌ಗಳ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ನದಿಯಲ್ಲಿ ಪುಣ್ಯ ಸ್ನಾನಮಾಡಿ ಕುಟುಂಬ, ಸ್ನೇಹಿತರೊಟ್ಟಿಗೆ ಮನೆಯಲ್ಲಿ ತಯಾರಿಸಿ ತಂದಿದ್ದ ಶೇಂಗಾ ಹೋಳಿಗೆ ತುಪ್ಪ, ಎಳ್ಳಚ್ಚಿದ ಸಜ್ಜೆ ರೊಟ್ಟೆ, ಕಡಕ್ ಜೋಳದ ರೊಟ್ಟಿ, ಚಪಾತಿ, ಹಸಿಮೆಣಸಿನ ಚಟ್ನಿ, ಎಣ್ಣಿಗಾಯಿ ಬದನೆಕಾಯಿ, ಜುಣುಕಾ, ಉಸಳಿ(ಮೊಳಕೆ) ಕಾಳು ಪಲ್ಲೆ, ಸೆಂಗಾ ಹಿಂಡಿ, ಮೊಸರು, ಚಿತ್ರನ್ನ, ಹಸಿ ತರಕಾರಿ, ಕಬ್ಬು, ಹಸಿಕಡಲೆ ಸೇರಿದಂತೆ ಬಜ್ಜಿ ಕುರಕುಲ ತಿಂಡಿಗಳನ್ನು ನದಿ ತೀರದ ನಿಸರ್ಗದ ಮಡಿಲಲ್ಲಿ ಕುಳಿತು ಸಾಮೂಹಿಕ ಭೋಜನ ಮಾಡಿ ಹಬ್ಬವನ್ನು
ಸಂಭ್ರಮಿಸಿದರು.

ವಿಶೇಷ ಗಂಗಾ ಪೂಜೆ: ಗ್ರಾಮೀಣ ಮಹಿಳೆಯರು ನದಿ ಸ್ನಾನ ಮಾಡಿ ತೀರದಲ್ಲಿರುವ ಶಿಲೆಗೆ ಶ್ರದ್ಧಾ ಭಕ್ತಿಯಿಂದ ಹೂ, ಪತ್ರಿ ಸಮರ್ಪಿಸಿ ಸಾಂಪ್ರಾದಾಯಕ ಹಾಡುಗಳೊಂದಿಗೆ ಗಂಗಾ ಪೂಜೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.