ADVERTISEMENT

ಯಾದಗಿರಿ :ಸವಿತಾ ಮಹರ್ಷಿಯವರು ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಮಹಾನ್ ಯುಗ ಪುರುಷ

ಸವಿತಾ ಮಹರ್ಷಿ ಜಯಂತಿಯಲ್ಲಿ ಅಂಬಿಗೇರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 6:40 IST
Last Updated 29 ಜನವರಿ 2023, 6:40 IST
ಯಾದಗಿರಿ ಜಿಲ್ಲಾಡಳಿತ ಸಭಾಂಗಣದ ಆಡಿಟೋರಿಯಂ ಸಭಾಂಗಣದಲ್ಲಿ ಶನಿವಾರ ನಡೆದ ಸವಿತಾ ಮಹರ್ಷಿ ಜಯಂತೋತ್ಸವದಲ್ಲಿ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು
ಯಾದಗಿರಿ ಜಿಲ್ಲಾಡಳಿತ ಸಭಾಂಗಣದ ಆಡಿಟೋರಿಯಂ ಸಭಾಂಗಣದಲ್ಲಿ ಶನಿವಾರ ನಡೆದ ಸವಿತಾ ಮಹರ್ಷಿ ಜಯಂತೋತ್ಸವದಲ್ಲಿ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು   

ಯಾದಗಿರಿ : ಸವಿತಾ ಮಹರ್ಷಿಯವರು ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಮಹಾನ್ ಯುಗ ಪುರುಷ. ಅವರು ಸಮಾಜಮುಖಿಯಾಗಿ ದಾರಿದೀಪವಾಗಿದ್ದಾರೆ ಎಂದು ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸವಿತಾ ಮಹರ್ಷಿ ಜಯಂತೋತ್ಸವ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಸಭಾಂಗಣದ ಆಡಿಟೋರಿಯಂ ಸಭಾಂಗಣದಲ್ಲಿ ಶನಿವಾರ ನಡೆದ ಸವಿತಾ ಮಹರ್ಷಿ ಜಯಂತೋತ್ಸವ ಪ್ರಯುಕ್ತ ದೀಪ ಬೆಳಗಿಸಿ, ಸವಿತಾ ಮಹರ್ಷಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ಸವಿತಾ ಸಮಾಜವು ಸಂಘಟನೆಯಿಂದ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಬೆಳೆಯಬೇಕು ಎಂದು ಕರೆ ನೀಡಿದ ಅವರು, ಸಮಾಜಕ್ಕಾಗಿ ಸಮಾಜದ ಭವನ ನಿರ್ಮಾಣಕ್ಕೆ ಜಾಗವನ್ನು ಶಾಸಕರು ನಗರದ ಗಂಜ್ ಪ್ರದೇಶದಲ್ಲಿ ಮೀಸಲಿಡುವುದಾಗಿ ಘೋಷಿಸಿದ್ದಾರೆ. ಸಮಾಜವರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ADVERTISEMENT

ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೆಂದ್ರನಾಥ ಕೆ ನಾದ್ ಮಾತನಾಡಿ, ಅಪಾರ ಜ್ಞಾನಭಂಡಾರ ಹೊಂದಿದ ಸವಿತಾ ಮಹರ್ಷಿಯ ಜಯಂತಿಯನ್ನು ಆಚರಿಸುವ ಮೂಲಕ ಸರ್ಕಾರ ಆದರ್ಶಗಳ ಹಾದಿಯಲ್ಲಿ ನಡೆಯಲು ನಮಗೆ ಬೆಳಕು ತೋರಿಸಿದೆ. ಸವಿತಾ ಸಮಾಜದ ಮಹರ್ಷಿಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ನ್ಯೂ ಕನ್ನಡ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವೆಂಕಟರಾವ್ ಕುಲಕರ್ಣಿ ಉಪನ್ಯಾಸ ನೀಡಿ, ಪೌರಾಣಿಕ ವ್ಯಕ್ತಿಯಾದ ಸವಿತಾ ಮಹರ್ಷಿಯು ರಥಸಮ್ತಿಯ ದಿನ ಜನಿಸಿದರು. ಧಾರ್ಮಿಕವಾಗಿ ಶಿವನ ಎಡಗಣ್ಣನ್ನು ಚಂದ್ರನಿಗೆ ಬಲಗಣ್ಣನ್ನು ಸೂರ್ಯನಿಗೆ ಹೊಲಿಸಲಾಗುತ್ತದೆ. ಶಿವನ ಬಲಗಣ್ಣಿನಿಂದ ಜನಿಸಿದವನೇ ಸವಿತಾ ಮಹರ್ಷಿ ಎಂದು ಪ್ರತೀತಿಯಿದೆ. ಸವಿತಾ ಸಮಾಜದವರನ್ನು ಸೂರ್ಯ ವಂಶಕ್ಕೆ ಸೇರಿದವರೆಂದು ಹೆಮ್ಮೆಯಿಂದ ಹೇಳಬಹುದು ಎಂದರು.

ಸಮಾಜದವರಲ್ಲಿ ಒಬ್ಬ ವ್ಯಕ್ತಿಯು ಸುಂದರವಾಗಿ ಕಾಣುವಂತೆ ಮಾಡುವ ಕ್ರಿಯಾತ್ಮಕ ಕಲೆಯಿದೆ. ಹೀಗಾಗಿ ಅವರಲ್ಲಿ ಸುಂದರತೆಯ ಕಲ್ಪನೆಯಿದೆ. ಎಲ್ಲಿ ಸೌಂದರ್ಯವಿದೆ ಅಲ್ಲಿ ಸತ್ಯವಿರುತ್ತದೆ. ಎಲ್ಲಿ ಸತ್ಯವಿರುತ್ತದೆಯೋ ಅಲ್ಲಿ ಶಿವನಿದ್ದಾನೆ. ಅದುವೆ ಸತ್ಯಂ ಶಿವಂ ಸುಂದರಂ ಎಂದು ಹಿರಿಯರು ಹೇಳಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರುದ್ರಗೌಡ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಮಾಜದ ಜಿಲ್ಲಾಧ್ಯಕ್ಷ ಅಪ್ಪಣ್ಣ ಚಿನ್ನಾಕಾರ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ, ಚುನಾವಣೆ ತಹಶೀಲ್ದಾರ ಸಂತೋಷರಾಣಿ, ಮುಖಂಡ ಮಹೇಶ ಮುದ್ನಾಳ, ಸಮಾಜದ ಮುಖಂಡರಾದ ಬನ್ನಪ್ಪ ಕಿಲ್ಲನಕೇರಾ, ಮಲ್ಲಿಕಾರ್ಜುನ ಕಟ್ಟಿಮನಿ, ನಾಗಪ್ಪ ಹತ್ತಿಕುಣಿ, ಶರಣು ಹೊಸಮನಿ, ಮಲ್ಲಿಕಾರ್ಜುನ ಮಲ್ಹಾರ, ಅಂಬಣ್ಣ ಹೋರುಂಚಾ, ಮಲ್ಲಣ್ಣ ವಡಗೇರಾ, ಗೋಪಾಲ ಕಿಲ್ಲೇದ್, ಮನೋಹರ್ ಮೇಷ್ಟ್ರು ಸೇರಿದಂತೆ ಸಮಾಜದ ಯುವ ಮುಖಂಡರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಇದ್ದರು.

‘ಶಿವನ ಬಲಗಣ್ಣಿನಿಂದ ಸೃಷ್ಠಿ’

ಹುಣಸಗಿ:ಪಟ್ಟಣದಲ್ಲಿ ಶನಿವಾರ ಸವಿತಾ ಸಮಾಜದ ವತಿಯಿಂದ ಸವಿತಾ ಮಹರ್ಷಿಗಳ ಜಯಂತಿ ಆಚರಿಸಲಾಯಿತು.

ಸಮಾಜದ ಮುಖಂಡರು ಸವಿತಾ ಮಹರ್ಷಿಗಳ ವೃತ್ತದಲ್ಲಿ ಮರ್ಹರ್ಷಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಶಿಕ್ಷಕ ಅಶೋಕ ರಾಜನಕೋಳೂರು ಮಾತನಾಡಿ, ರಥಸಪ್ತಮಿ ದಿನದಂದೇ ಶಿವ ಪರಮಾತ್ಮನ ಬಲಗಣ್ಣಿನಿಂದ ಸೃಷ್ಟಿಯಾದ ಸವಿತಾ ಮಹರ್ಷಿಗಳಿಗೆ ಚೌಲ ಕರ್ಮ, ಆಯುರ್ವೇದ ವೈದ್ಯ ಪದ್ಧತಿ, ಸಂಗೀತ ಸೇರಿ 3 ವರಗಳನ್ನು ದಯಪಾಲಿಸಿದ್ದರು ಎಂದ ಅವರು ಸೂರ್ಯೋಪಾಸನೆ ಹಾಗೂ ಅದರ ಮಹತ್ವದ ಕುರಿತು ಕಥೆಯನ್ನು ಹೇಳಿದರು.

ಸಮಾಜದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಶರಣಪ್ಪ ಕಲ್ಲದೇವನಹಳ್ಳಿ, ಅಧ್ಯಕ್ಷ ಸಂಗು ಬಾಚಿಮಟ್ಟಿ, ಅಶೋಕ ಮಾಳನೂರು, ಚಂದ್ರಶೇಖರ, ಬಸವರಾಜ ಚನ್ನೂರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.