ಹುಣಸಗಿ: ತಾಲ್ಲೂಕಿನ ರೇವು ನಾಯಕ ತಾಂಡಾದಲ್ಲಿ ಶಾಲಾ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಕೊಡೇಕಲ್ಲ ಠಾಣೆಯಲ್ಲಿ ಕೆಲವರ ವಿರುದ್ಧ ಪ್ರಕರಣ ದಾಖಲಾಗಿದೆ.
ರೇವು ನಾಯಕ ತಾಂಡಾದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಈ ಶಾಲೆಯಲ್ಲಿ ಮಧ್ಯಾಹ್ನದ ಸಮಯದಲ್ಲಿ ಬೋಧನೆಯಲ್ಲಿ ತೊಡಗಿದಾಗ ಕಿಡಿಗೇಡಿಗಳು ಶಾಲಾ ಕೊಠಡಿ ಪ್ರವೇಶಿಸಿ ಶಿಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಪಾಠದ ಸಂದರ್ಭದಲ್ಲಿ ಶಾಲಾ ಮಕ್ಕಳಿಗೂ ಕೆಲ ಪ್ರಶ್ನೆಗಳನ್ನು ಕೇಳಿ ಬೈದಿದ್ದಾರೆ ಎಂದು ಶಾಲೆಯ ಶಿಕ್ಷಕರು ಕೊಡೇಕಲ್ಲ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಯಾದಗಿರಿ ಎಸ್.ಪಿ ಪೃಥ್ವಿಕ್ ಶಂಕರ್ ಹಾಗೂ ಹುಣಸಗಿ ಸಿಪಿಐ ರವಿಕುಮಾರ ಪೊಲೀಸರೊಂದಿಗೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂವರು ಆರೊಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೂ ಒಪ್ಪಿಸಲಾಗಿದೆ.
ಇನ್ನುಳಿದವರ ಪತ್ತೆಗೆ ಬಲೆ ಬೀಸಲಾಗಿದೆ. ಮಕ್ಕಳು ಹಾಗೂ ಪಾಲಕರು ಯಾವುದೇ ಆತಂಕ ಗೊಳ್ಳದಂತೆ ಪೊಲೀಸರು ಧೈರ್ಯ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಶಾಲೆ ಎಂದಿನಂತೆ ನಡೆದಿದೆ.
ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಐ ಚನ್ನಬಸಪ್ಪ ಮುಧೋಳ ಶಾಲೆಗೆ ಭೇಟಿ ನೀಡಿ ಶಿಕ್ಷಕರು ಹಾಗೂ ಮಕ್ಕಳ ಸಮಸ್ಯೆಯನ್ನು ಆಲಿಸಿದರು.
ಬಳಿಕ ನನಗೆ ಭಯ ಹಾಗೂ ಆತಂಕ ಇದೆ ಎಂದು ಶಾಲೆಯ ಶಿಕ್ಷಕರೊಬ್ಬರು ತಿಳಿಸಿದ್ದರಿಂದಾಗಿ ಅವರನ್ನು ಬೇರೆ ಶಾಲೆಗೆ ನಿಯೋಜನೆ ಮಾಡಿ ತಕ್ಷಣಕ್ಕೆ ಬೇರೊಬ್ಬ ಶಿಕ್ಷಕರನ್ನು ಈ ಶಾಲೆಗೆ ಕಳಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಶಾಲೆಯಲ್ಲಿ ಸುಮಾರು 35 ಮಕ್ಕಳು ತರಗತಿಗೆ ಹಾಜರಾಗಿದ್ದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲುರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.