ADVERTISEMENT

ಶಹಾಬಾದ್ ಕಲ್ಲಿಗೆ ವೈರತ್ವದ ‘ರಕ್ತದ ಕಲೆ’!

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 6:40 IST
Last Updated 13 ನವೆಂಬರ್ 2025, 6:40 IST
ದುಷ್ಕರ್ಮಿಗಳ ದಾಳಿಗೆ ಒಳಗಾದ ಕಾರು
ದುಷ್ಕರ್ಮಿಗಳ ದಾಳಿಗೆ ಒಳಗಾದ ಕಾರು   

ಯಾದಗಿರಿ: ಸುಣ್ಣದ ಕಲ್ಲಿಗೆ ಹೆಸರುವಾಸಿಯಾಗಿರುವ ನೆರೆಯ ಕಲಬುರಗಿ ಜಿಲ್ಲೆಯ ಶಹಾಬಾದ್‌ ಸ್ಟೋನ್‌ ಪ್ರದೇಶದಲ್ಲಿ ವೈರತ್ವದ ದಾಳಿಗಳು ನಿಲ್ಲುತ್ತಿಲ್ಲ. ಮಾಜಿ ಸಚಿವರೊಬ್ಬರ ಅಣ್ಣನ ಇಬ್ಬರು ಮಕ್ಕಳ ಕೊಲೆಯ ಬಳಿಕ ಸೊಸೆ ಕೊಲೆಗೆ ನಗರದ ಸಮೀಪದಲ್ಲಿ ವಿಫಲಯತ್ನವೊಂದು ಬುಧವಾರ ನಡೆದಿದೆ.‌

ಸಮಾಜ ಕಲ್ಯಾಣ ಇಲಾಖೆಯ ಎಸ್‌ಡಿಎ ಅಂಜಲಿ ಗಿರೀಶ ಕಂಬಾನೂರ ಹಲ್ಲೆಗೆ ಒಳಗಾಗಿ ಸಾವು, ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮಾಜಿ ಕಾರ್ಮಿಕ ಸಚಿವ ದಿ. ಸಿ.ಗುರುನಾಥ ಅವರ ಅಣ್ಣನ ಸೊಸೆ‌ಯಾಗಿದ್ದು, ಶಹಾಬಾದ್ ನಗರಸಭೆಯ ಅಧ್ಯಕ್ಷೆಯೂ ಆಗಿದ್ದರು. 

‘ಯಾದಗಿರಿಯ ಲಕ್ಷ್ಮಿ ನಗರದಲ್ಲಿ ವಾಸವಿರುವ ಅಂಜಲಿ, ಬುಧವಾರ ಎಂದಿನಂತೆ ಮನೆ ಕೆಲಸ ಮುಗಿಸಿ ಕಾರಿನಲ್ಲಿ ಕಚೇರಿಗೆ ತೆರಳುತ್ತಿದ್ದರು. ಕಲಬುರಗಿ ರಸ್ತೆಯ ಗ್ರೀನ್ ಸೀಟಿ ಸಮೀಪ ನಾಲ್ವರು ದುಷ್ಕರ್ಮಿಗಳು ಕಾರಿನಲ್ಲಿ ಬಂದು ಅಡ್ಡಗಟ್ಟಿದರು. ಕಾರಿನ ಮುಂಭಾಗದ ಗಾಜು ಜಖಂಗೊಳಿಸಿದರು. ಚಾಲಕ ಅಜೀಮಿರ್‌ ಅವರನ್ನು ಹೆದರಿಸಿ, ಮುಖ್ಯ ರಸ್ತೆಯಿಂದ ಬದಿಯ ಕಚ್ಚಾ ರಸ್ತೆಗೆ ಕರೆದೊಯ್ದರು. ಕಾರಿನ ಗಾಜುಗಳನ್ನು ಪುಡಿ ಮಾಡಿ, ಹಿಂಬದಿಯಲ್ಲಿ ಕುಳಿತಿದ್ದ ಅಂಜಲಿಯ ಮೇಲೆ ಮಾರಕಾಸ್ತ್ರಗಳಿಂದ ಮನಸ್ಸೋ ಇಚ್ಛೆ ಹಲ್ಲೆ ಮಾಡಿ ಪರಾರಿಯಾದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ದಾಳಿಯಿಂದಾಗಿ ಎಡಗಣ್ಣಿನ ಮೇಲೆ, ಕೆನ್ನೆ, ಕಣ್ಣಿನ ಹಿಂಬದಿ, ಎಡಗೈ, ಬೆನ್ನು ಸೇರಿದಂತೆ ಇತರೆಡೆ ಮಾರಕಾಸ್ತ್ರದ ಏಟುಗಳು ಆಳವಾಗಿ ಬಿದ್ದಿವೆ. ಚರ್ಮ ಕಿತ್ತುಬಂದು ಅಂಜಲಿ ಅವರ ಮೈ ರಕ್ತಸಿಕ್ತವಾಗಿತ್ತು. ಚಾಲಕ ತಕ್ಷಣವೇ ಆಕೆಯನ್ನು ‘ಯಿಮ್ಸ್‌’ನ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಿದರು. ಗಾಯಗಳಿಗೆ ಹೊಲಿಗೆ ಹಾಕಿ ಚಿಕಿತ್ಸೆ ನೀಡಿದ ಸಿಬ್ಬಂದಿ, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಕಳುಹಿಸಿದರು’ ಎಂದರು.

ದಾಳಿ ಬಳಿಕ ಆರೋಪಿಗಳು ಪರಾರಿ ಆಗಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದು ಗೊತ್ತಾಗಿದೆ. ಮಹಾರಾಷ್ಟ್ರದತ್ತ ತೆರಳಿದ್ದು ಪೊಲೀಸರ ತಂಡವೊಂದು ಅವರ ಬೆನ್ನು ಹತ್ತಿದೆ
ಪೃಥ್ವಿಕ್ ಶಂಕರ್, ಯಾದಗಿರಿ ಎಸ್‌ಪಿ

ಗಂಡ, ಮೈದುನ ಕೊಲೆಯಲ್ಲಿ ಅಂತ್ಯ: ಅಂಜಲಿ ಅವರ ಗಂಡ ಗಿರೀಶ (ಶಹಾಬಾದ್ ನಗರಸಭೆ ಮಾಜಿ ಅಧ್ಯಕ್ಷ) ಹಾಗೂ ಮೈದುನ ಸತೀಶ ಕಂಬಾನೂರ ಅವರನ್ನು ಕೊಲೆ ಮಾಡಲಾಗಿತ್ತು. ಇದರಿಂದ ಹೆದರಿ ಅವರು ಯಾದಗಿರಿಯಲ್ಲಿ ವಾಸ ಮಾಡುತ್ತಿದ್ದಾರೆ.

2019ರ ಡಿಸೆಂಬರ್ 11ರ ತಡರಾತ್ರಿ ಮರಳಿನ ಟಿಪ್ಪರ್ ತಡೆದಿದ್ದಕ್ಕೆ ಗಿರೀಶ ಅವರ ಮೇಲೆ ವಿಜಯಕುಮಾರ ಹಳ್ಳಿ, ಮಲ್ಲಿಕಾರ್ಜುನ ಗೋಳಾ, ಶಂಕರ ಅಳ್ಳೊಳ್ಳಿ ಅವರಿದ್ದ ಗುಂಪು ದಾಳಿ ಮಾಡಿತ್ತು. ಇದರಿಂದ ಕುತ್ತಿಗೆ, ಹೊಟ್ಟೆ ಭಾಗಕ್ಕೆ ತೀವ್ರ ಗಾಯವಾಗಿ ಚಿಕಿತ್ಸೆಯಿಂದ ಬದುಕಿ ಉಳಿದರು.  

2020ರ ಫೆಬ್ರುವರಿ 29ರ ಬೆಳಿಗ್ಗೆ ಗಿರೀಶ ಸಹೋದರ ಸತೀಶ ಅವರನ್ನು ಶಂಕರವಾಡಿ ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ವಿಜಯಕುಮಾರ, ಶಂಕರ ಸೇರಿ 14 ಮಂದಿಯನ್ನು ಬಂಧಿಸಲಾಗಿತ್ತು.

2022ರ ಜುಲೈ 11ರಂದು ಶಹಾಬಾದ್‌ನ ರೈಲ್ವೆ ನಿಲ್ದಾಣ ಸಮೀಪ ಗಿರೀಶ ಅವರನ್ನು ತಲ್ವಾರ್‌ನಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಸಂಬಂಧ ಶಂಕರ ಸೇರಿ 24 ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಕೇಸ್‌ನಲ್ಲಿ ಬಂಧಿಸಲು ತೆರಳಿದ್ದ ಪಿಎಸ್‌ಐ ಮೇಲೆ ಮಚ್ಚು ಬೀಸಿದ್ದ ವಿಜಯಕುಮಾರ ಕಾಲಿಗೆ ಗುಂಡು ಹಾರಿಸಲಾಗಿತ್ತು. ಆರು ಆರೋಪಿಗಳು ಜೈಲಿನಲ್ಲಿ ಇದ್ದು, ಉಳಿದವರು ಜಾಮೀನಿನ ಮೇಲೆ ಹೊರ ಬಂದಿದ್ದರು.

‘ಕಂಬಾನೂರ ಹಾಗೂ ಶಂಕರ, ವಿಜಯಕುಮಾರ ಸೇರಿ ಇತರರು ಒಂದೇ ಸಮುದಾಯಕ್ಕೆ ಸೇರಿದ್ದು, ‍ಪರಸ್ಪರ ಸಂಬಂಧಿಕರು ಆಗಬೇಕು. ಮಹಿಳೆಯರ ವಿಚಾರವಾಗಿ ವಾಗ್ವಾದದ ಮುಖೇನ ಆರಂಭವಾದ ಇಬ್ಬರ ನಡುವಿನ ಕಲಹ ಈಗ ಕೊಲೆಯ ಹಂತಕ್ಕೆ ಬಂದಿದೆ’ ಎನ್ನುತ್ತಾರೆ ಶಹಾಬಾದ್‌ನ ಸ್ಥಳೀಯರು.

‘ಸುಪಾರಿ ಕೊಟ್ಟು ಕೊಲೆಗೆ ಸಂಚು ಮಾಡಿದ ಶಂಕಿಯಿಂದ ಹಲ್ಲೆ’

‘ಸೆಪ್ಟೆಂಬರ್ 11ರಂದು ಜಾಮೀನ ಮೇಲೆ ಹೊರ ಬಂದಿರುವ ಕೊಲೆ ಆರೋಪಿ ಶಂಕರ ತನ್ನ ಗೆಳೆಯರೊಂದಿಗೆ ಶಹಾಬಾದ್ ಸಮೀಪದ ಐನಾಪೂರ ಡಾಬಾದಲ್ಲಿ ಊಟ ಮಾಡುತ್ತಿದ್ದರು. ಕಾರಿನಲ್ಲಿ ಬಂದ ಯುವಕರ ಗುಂಪು ಶಂಕರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿತ್ತು.‌‌ ಅಲ್ಲಿಯೇ ಇದ್ದ ಹೈವೇ ಪೆಟ್ರೋಲಿಂಗ್ ಸಿಬ್ಬಂದಿ ಆತನನ್ನು ರಕ್ಷಿಸಿದ್ದರು’ ಎಂದು ಎಸ್‌ಪಿ ಪೃಥ್ವಿಕ್ ಶಂಕರ್ ತಿಳಿಸಿದರು.    ‘ಅಂದಿನ ದಾಳಿಗೆ ಅಂಜಲಿ ಅವರು ಸುಪಾರಿ ಕೊಟ್ಟು ತನ್ನ ಕೊಲೆಗೆ ಯತ್ನಿಸಿರುವ ಅನುಮಾನ ಶಂಕರಗೆ ಬಂದಿರಬಹುದು. ಹೀಗಾಗಿ ಅಂಜಲಿ ಕೊಲೆಗೆ ಯತ್ನಿಸಿರುವ ಶಂಕೆ ಇದೆ. ಹಳೆಯ ವೈಷಮ್ಯ ಸೇರಿ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ಈ ಹಿಂದಿನ ಪ್ರಕರಣಗಳ ಮಾಹಿತಿ ಪಡೆಯಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.