ಶಹಾಪುರ (ಯಾದಗಿರಿ ಜಿಲ್ಲೆ): ಇಲ್ಲಿನ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ಚಿತ್ತಾಪುರ ತಾಲ್ಲೂಕಿನ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ಮಂಗಳವಾರ ಶಹಾಪುರ ಠಾಣೆಯ ಪೊಲೀಸರು ಕಲಬುರಗಿಯಲ್ಲಿ ಬಂಧಿಸಿದ್ದಾರೆ.
‘ಟಿಎಪಿಸಿಎಂಎಸ್‌ನ ₹2.6 ಕೋಟಿ ಮೌಲ್ಯದ 6,077 ಕ್ವಿಂಟಲ್ ಪಡಿತರ ಅಕ್ಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರಪುರ ಡಿವೈಎಸ್ಪಿ ಜಾವೇದ್ ಇನಾಂದಾರ್ ತನಿಖೆ ನಡೆಸುತ್ತಿದ್ದಾಗ ಬಂಧಿತ ಆರೋಪಿಗಳು ರಾಜು ರಾಠೋಡ ಹಾಗೂ ಮಣಿಕಂಠ ರಾಠೋಡ ಅವರಿಗೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದರು. ಹೀಗಾಗಿ ಮಣಿಕಂಠ ರಾಠೋಡ ಅವರನ್ನು ಬಂಧಿಸಲಾಗಿದೆ’ ಎಂದು ಶಹಾಪುರ ಠಾಣೆಯ ಪಿಐ ಎಸ್.ಎನ್.ಪಾಟೀಲ ಮಾಹಿತಿ ನೀಡಿದರು.
‘ಕೆಲ ತಿಂಗಳ ಹಿಂದೆ ಮಣಿಕಂಠ ರಾಠೋಡ ತಲೆ ಮರೆಸಿಕೊಂಡು ದೆಹಲಿಯಲ್ಲಿದ್ದರು. ಹೊರ ರಾಜ್ಯವಾಗಿದ್ದರಿಂದ ಅಲ್ಲಿನ ಪೊಲೀಸರು ಬಂಧನದ ವಾರೆಂಟ್ ಕೇಳುತ್ತಿದ್ದರಿಂದ ತನಿಖಾಧಿಕಾರಿಗೆ ಕಾನೂನು ತೊಡಕು ಉಂಟಾಗಿ ಬಂಧಿಸಲು ಸಾಧ್ಯವಾಗಲಿಲ್ಲ. ಇದೀಗ ಕಲಬುರಗಿಯಲ್ಲಿ ಮಣಿಕಂಠ ರಾಠೋಡ ಇರುವುದು ಖಚಿತ ಮಾಹಿತಿ ಸಿಕ್ಕಿದ್ದರಿಂದ ಮಂಗಳವಾರ ಬಂಧಿಸಲಾಗಿದೆ’ ಎಂದು ತಿಳಿಸಿದರು.
ನಾಟಕೀಯ ಬೆಳವಣಿಗೆ: ಕಲಬುರಗಿ ಅಪಾರ್ಟ್‌ಮೆಂಟ್ ಒಂದರಲ್ಲಿ ಪೊಲೀಸರು ಮಣಿಕಂಠ ಅವರನ್ನು ಬಂಧಿಸಲು ತೆರಳಿದ್ದಾಗ ನಾಟಕೀಯ ಬೆಳೆವಣಿಗೆ ನಡೆದಿದೆ.
ನೋಟಿಸ್ ನೀಡಿ, ವಾರೆಂಟ್ ತೋರಿಸಿ ಎಂದ ಮಣಿಕಂಠ ಪ್ರತಿರೋಧ ವ್ಯಕ್ತಪಡಿಸಿದ್ದು, ಪೊಲೀಸರೊಂದಿಗೆ ವಕೀಲರನ್ನು ಫೋನ್‌ನಲ್ಲಿ ಮಾತನಾಡಿಸಿರುವ ದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಹಿಂದೆ ಪೊಲೀಸರು ಜನವರಿಯಲ್ಲಿ ಬಂಧಿಸಲು ದೆಹಲಿಗೆ ತೆರಳಿದಾಗಲೂ ನಾಟಕೀಯ ಬೆಳವಣಿಗೆ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.