
ಶಹಾಪುರ: ‘ತಾಲ್ಲೂಕಿನ ಸಗರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೆ ಏರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಾ ಬಂದಿದ್ದೇವೆ. ಇದುವರೆಗೂ ಅಧಿಕ ಪ್ರಸ್ತಾವನೆಯಾಗಿ ಉಳಿದುಕೊಂಡಿದೆ. ಜನಹಿತ ದೃಷ್ಟಿಯಿಂದ ಸರ್ಕಾರವು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು’ ಎಂದು ಸಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ ಎಸ್.ಸಿದ್ರಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
‘ಸಗರ ಗ್ರಾಪಂ ವ್ಯಾಪ್ತಿಯಲ್ಲಿ 13 ವಾರ್ಡ್ ಹೊಂದಿದ್ದು, 37 ಜನ ಗ್ರಾಪಂ ಸದಸ್ಯರು ಇದ್ದಾರೆ. 20ಸಾವಿರಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಅಲ್ಲದೆ ಪಂಚಾಯಿತಿ ವ್ಯಾಪ್ತಿಯಲ್ಲಿ 22 ಅಂಗನವಾಡಿ ಕೇಂದ್ರ, 13 ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಮಾದರಿ ಶಾಲೆ, ಪಿಯು ಕಾಲೇಜು, ಉಪ ಪೊಲೀಸ್ ಠಾಣೆ ಇದೆ. ಅಲ್ಲದೆ ಸುತ್ತಮುತ್ತ ಹಳ್ಳಿಯ ಕೇಂದ್ರ ಸ್ಥಾನವು ಇದಾಗಿದೆ’ ಎಂದು ಮಾಹಿತಿ ನೀಡಿದರು.
‘ಈಗಾಗಲೇ ಗ್ರಾಪಂ ಆಡಳಿತ ಮಂಡಳಿಯ ಸದಸ್ಯರು ಸಹ ಒಕ್ಕೋರಲಿನಿಂದ ಬೇಡಿಕೆಯನ್ನು ಇಟ್ಟಿದ್ದಾರೆ. ಜನಪರ ಹಾಗೂ ಜನ ಹಿತದೃಷ್ಟಿಯಿಂದ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು’ ಎಂದು ಅವರು ಮುಖ್ಯಮಂತ್ರಿ ಅವರಿಗೆ ಬರೆದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.