ADVERTISEMENT

ಕುಡಿಯುವ ನೀರು ಪೂರೈಕೆಗೆ ಆದ್ಯತೆ: ಶಾಸಕ ಶರಣಬಸಪ್ಪ ದರ್ಶನಾಪುರ

₹ 59 ಕೋಟಿ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಆರಂಭ: ಶಾಸಕ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 14:44 IST
Last Updated 10 ಜೂನ್ 2021, 14:44 IST
 ಶರಣಬಸಪ್ಪ ದರ್ಶನಾಪುರ
 ಶರಣಬಸಪ್ಪ ದರ್ಶನಾಪುರ   

ಶಹಾಪುರ: ತಾಲ್ಲೂಕಿನ ಭೀಮಾ ನದಿಯಿಂದ ನಗರದ ಫಿಲ್ಟರ್‌ಬೆಡ್ ಕೆರೆಗೆ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡುವ ₹ 59 ಕೋಟಿ ವೆಚ್ಚದ ಕಾಮಗಾರಿಗೆ ಈಚೆಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಅದರಂತೆ ಕಾಮಗಾರಿಯ ಟೆಂಡರ್ ಕರೆಯಲಾಗಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ತಾಲೂಕಿನ ಶಿರವಾಳ, ಮಡ್ನಾಳ, ಇಂಗಳಿಗೆ ಗ್ರಾಮಗಳಿಂದ ಕೊಳವೆ ಮಾರ್ಗದ ಮೂಲಕ ನಗರದ ಫಿಲ್ಟರ್ ಬೆಡ್ ಕೆರೆಯಲ್ಲಿ ನೀರು ಸಂಗ್ರಹಿಸಲಾಗುವುದು ಎಂದರು.

ಕೆರೆಯಿಂದ ನಗರದಲ್ಲಿ ಅಲ್ಲಲ್ಲಿ ನಿರ್ಮಿಸಲಾದ 15ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್‌ಗಳ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಇದರಿಂದಾಗಿ ನಗರದ ಜನತೆಗೆ ದಿನಂಪ್ರತಿ 16ಎಂಎಲ್‌ಡಿಯಷ್ಟು ಶುದ್ಧೀಕರಿಸಿದ ನೀರು ಪೂರೈಸಬಹುದಾಗಿದೆ. ಅಂದಿನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಅವಧಿಯಲ್ಲಿ ಶಾಶ್ವತ ಕುಡಿಯುವ ನೀರಿಗಾಗಿ ₹ 185 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಸಲಾಗಿತ್ತು. ಅದರಂತೆ ₹ 60 ಅನುದಾನ ಬಿಡುಗಡೆಗಾಗಿ ಹಣಕಾಸಿನ ಮಂಜೂರಾತಿ ನೀಡಿದ್ದರು. ರಾಜಕೀಯ ಬದಲಾವಣೆಯಿಂದ ಮತ್ತೆ ಯೋಜನೆ ನೆನೆಗುದಿಗೆ ಬಿದ್ದಿತ್ತು. ಈಗ ಬಿಜೆಪಿ ಸರ್ಕಾರ ₹ 59 ಕೋಟಿ ವೆಚ್ಚ ಕೆಲಸಕ್ಕೆ ಮಂಜೂರಾತಿ ನೀಡಿದೆ ಎಂದರು.

ADVERTISEMENT

ಅಲ್ಲದೆ ನಗರದ ಒಳಚರಂಡಿ ಯೋಜನೆ ಅನುಷ್ಠಾನಕ್ಕಾಗಿ ₹ 172 ಕೋಟಿ ವೆಚ್ಚದ ಪ್ರಸ್ತಾವವನ್ನು 2019 ಏ.24ರಂದು ಸರ್ಕಾರಕ್ಕೆ ಸಲ್ಲಿಸಿದೆ. ಇಂದಿಗೂ ಅನುಮೋದನೆ ಸಿಕ್ಕಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಈಗ ಮುಳುಗುವ ಹಡಗಿನಂತೆ ಆಗಿದೆ. ಮುಖ್ಯಮಂತ್ರಿ ಬದಲಾವಣೆಯಲ್ಲಿ ಕಾಲಹರಣವಾಗುತ್ತಿರುವಾಗ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವುದು ದೂರದ ಮಾತು ಆಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಜಿಲ್ಲಾ ವಕ್ತಾರ ಮಲ್ಲಪ್ಪ ಉಳ್ಳುಂಡಗೇರಿ, ಶಂಕರಗೌಡ ಮತ್ತು ರಾಜಕುಮಾರ, ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.