ADVERTISEMENT

ಸೈದಾಪುರ | ಇಬ್ಬರು ಕುರಿಗಳ್ಳರ ಬಂಧನ: ಇನ್ನಿಬ್ಬರಿಗಾಗಿ ಶೋಧ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 7:25 IST
Last Updated 29 ಅಕ್ಟೋಬರ್ 2025, 7:25 IST
ರವಿ ಚವ್ಹಾಣ್
ರವಿ ಚವ್ಹಾಣ್   

ಯಾದಗಿರಿ: ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆ ಕುರಿಗಳನ್ನು ಕಳ್ಳತನ ಮಾಡಿದ್ದ ಪ್ರಕರಣಗಳ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಇನ್ನಿಬ್ಬರ ಪತ್ತೆಗೆ ಬಲೆ ಬೀಸಿದ್ದಾರೆ.

ಬಳಿಚಕ್ರ ತಾಂಡಾ ನಿವಾಸಿ ರವಿ ಚವ್ಹಾಣ್ (35) ಹಾಗೂ ಗುರುಮಠಕಲ್‌ ತಾಲ್ಲೂಕಿನ ಬದ್ದೇಪಲ್ಲಿ ತಾಂಡಾದ ವಾಹನ ಚಾಲಕ ಮಲ್ಲ್ಯ ನಾಯಕ ರಾಠೋಡ (38) ಬಂಧಿತ ಆರೋಪಿಗಳು. ಕುರಿಗಳ್ಳತನದಲ್ಲಿ ತೊಡಗಿದ್ದ ಇನ್ನಿಬ್ಬರು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳಿಂದ ₹ 1.80 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಪಿಕಪ್ ಸರಕು ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಾಗಿರುವ ಇಬ್ಬರು ಆರೋಪಿಗಳನ್ನು ಸೈದಾಪುರ ಪೊಲೀಸ್ ಠಾಣೆಯಿಂದ ಗಡಿಪಾರು ಮಾಡುವ ಕುರಿತು ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಆಗಸ್ಟ್‌ 28ರಂದು ದಪ್ಪಲ್ಲಿ ಗ್ರಾಮದ ಮಲ್ಲಪ್ಪ ಯಾಮ್ಕೆ ಅವರು ತಮ್ಮ 22 ಕುರಿಗಳು ಕಳುವಾದ ಬಗ್ಗೆ ದೂರು ದಾಖಲಿಸಿದ್ದರು. ಸೆಪ್ಟೆಂಬರ್ 29ರಂದು ಬಾಲಭೇಡ ಗ್ರಾಮದ ಚಂದಪ್ಪ ನೇರಡಗಂ ಅವರು 31 ಕುರಿಗಳು ಕಳ್ಳತನವಾಗಿವೆ ಎಂದು ಪ್ರಕರಣ ದಾಖಲಿಸಿದ್ದರು. ಇದೇ ರೀತಿ ಮತ್ತೊಂದು ಕುರಿ ಕಳ್ಳತನದ ಪ್ರಕರಣವೂ ದಾಖಲಾಗಿತ್ತು. ಈ ಮೂರು ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು ತನಿಖಾ ಕಾರ್ಯವನ್ನು ಚುರುಕುಗೊಳಿಸಿದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ ಎಂದು ಮಾಹಿತಿ ನೀಡಿದರು.‌

‘ನಾಲ್ವರು ಆರೋಪಿಗಳು ಯಾದಗಿರಿ ಜಿಲ್ಲೆಯ ಮಾತ್ರವಲ್ಲದೆ ನೆರೆಯ ತೆಲಂಗಾಣದ ರಾಜ್ಯದಲ್ಲಿ ಕುರಿಗಳನ್ನು ಕದ್ದು ತಂದು ಯಾದಗಿರಿ, ಶಹಾಪುರ, ವಿಜಯಪುರ ಜಿಲ್ಲೆಯ ಸಿಂದಗಿ ಸಂತೆಯಲ್ಲಿ ಕುರಿಗಳನ್ನು ಮಾರುತ್ತಿದ್ದರು. ತೆಲಂಗಾಣದ ಮಾಗನೂರುನಲ್ಲಿ ಒಬ್ಬನ ವಿರುದ್ಧ ಎರಡು, ಇನ್ನೊಬ್ಬನ ವಿರುದ್ಧ ಒಂದು ಕುರಿ ಕಳ್ಳತನ ಪ್ರಕರಣಗಳು ದಾಖಲಾಗಿವೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎಸ್‌ಪಿ ಮಾರ್ಗದರ್ಶನದಲ್ಲಿ ಕ್ರೈಮ್ ಪಿಎಸ್‌ಐ ಅಲ್ಲಾಭಕ್ಷಿ, ಪಿಎಸ್‌ಐಗಳಾದ ಭೀಮರಾಯ, ಭೀಮರೆಡ್ಡಿ, ಸಿಬ್ಬಂದಿ ಭೀಮಾಶಂಕರ, ರಾಜಕುಮಾರ್, ಸಾಬರೆಡ್ಡಿ ಅವರಿದ್ದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.  

ಮಲ್ಲ್ಯ ನಾಯಕ 

ಬೈಕ್‌ನಲ್ಲಿ ಬಂದು ಕುರಿ ಕದ್ದವರ ಬಂಧನ‌‌

ಗುರುಮಠಕಲ್ ತಾಲ್ಲೂಕಿನ ಪಸಪೂಲ್ ಗ್ರಾಮದಲ್ಲಿ ಬೈಕ್ ಮೇಲೆ ಬಂದು ಕುರಿ ಕದ್ದೊಯ್ದಿದ್ದ ಮೂವರು ಆರೋಪಿಗಳನ್ನು ಗುರುಮಠಕಲ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ ತಾಲ್ಲೂಕಿನ ಚಾಮನಳ್ಳಿ ತಾಂಡಾದ ವಿಠ್ಠಲ್ ಮನ್ನು ಚವ್ಹಾಣ್ ನಿತಿನ್ ಸೋಮು ಚವ್ಹಾಣ್ ಹಾಗೂ ಸುನಿಲ್ ಚವ್ಹಾಣ್ ಬಂಧಿತ ಆರೋಪಿಗಳು. ಯಾದಗಿರಿ– ಹೈದಾರಬಾದ್ ಹೆದ್ದಾರಿ ಬದಿಯಲ್ಲಿ ಪಸಪೂಲ್ ಗ್ರಾಮದ ನಿವಾಸಿ ಸಣ್ಣ ಮಹಾದೇವಪ್ಪ ಅವರು ಕುರಿಗಳನ್ನು ಮೇಯಿಸುತ್ತಿದ್ದರು. ನಾರಾಯಣಪೇಟ್ ಕಡೆಯಿಂದ ಮೂವರು ಬೈಕ್‌ ಮೇಲೆ ಬಂದು ಕುರಿವೊಂದನ್ನು ಎತ್ತಿಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದರು. ಆರೋಪಿಗಳನ್ನು ಬಂಧಿಸಿ ಕುರಿ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.