
ಯಾದಗಿರಿ: ‘ಜಿಲ್ಲೆಯ ಗುರುಮಠಕಲ್ ವ್ಯಾಪ್ತಿಯಲ್ಲಿ ಈವರೆಗೆ ಕನಿಷ್ಟ ₹80 ಲಕ್ಷ ಮೌಲ್ಯದ 400 ಕುರಿಗಳ ಕಳ್ಳತನವಾಗಿದೆ. ಕೂಡಲೇ ಕಳ್ಳರನ್ನು ಬಂಧಿಸಬೇಕು. ಕುರಿಗಳನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೆಆರ್‌ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ನಿಜಲಿಂಗಪ್ಪ ಪೂಜಾರಿ ಮಾತನಾಡಿ, ಗುರುಮಠಕಲ್ ಮತಕ್ಷೇತ್ರದಲ್ಲಿ ವರ್ಷದಿಂದ ಕುರಿಗಳ್ಳತನ ಕುರಿತು ಕುರಿಗಾಹಿಗಳು ಪೊಲೀಸ್ ಠಾಣೆಗಳಿಗೆ ದೂರು ನೀಡಲು ಹೋದಾಗ, ದೂರು ನೀಡಲು ಬಂದವರನ್ನೇ ಭಯಪಡಿಸಿದ್ದಾರೆ. ಜತೆಗೆ ಕುರಿಗಾಹಿಗಳ ಬೆಂಬಲಿಸಲು ಬಂದ ಕುರುಬ ಸಮಾಜದ ಮುಖಂಡರನ್ನೂ ನಿಂದಿಸಲಾಗಿದೆ ಎಂದು ದೂರಿದರು.
ಸೈದಾಪುರ ಪೊಲೀಸ್ ಠಾಣೆಯಲ್ಲಿ ಕೇವಲ ನಾಲ್ಕೈದು ಪ್ರಕರಣಗಳು ಮಾತ್ರ ದಾಖಲಾಗಿವೆ. ದೂರು ನೀಡಲು ಹೋದಾಗ ಸ್ಪಂದಿಸದ ಮತ್ತು ದೂರು ನೀಡಿದ ನಂತರವೂ ಕ್ರಮವಹಿಸದಿರುವುದು ಅನುಮಾನಕ್ಕೆ ಎಡೆಮಾಡಿದೆ ಎಂದು ಆರೋಪಿಸಿದರು.
ಕುರುಬ ಸಮಾಜದಿಂದ ವಾರದ ಹಿಂದೆ ಹೇಳಿಕೆ ನೀಡಿದ ನಂತರ ದೂರು ದಾಖಲಾದಲ್ಲಿ ಕುರಿಗೆ ₹6 ಸಾವಿರದಂತೆ ಕಳ್ಳರಿಂದ ಜಪ್ತಿ ಮಾಡಿ ನೀಡುತ್ತಿದ್ದು, ಮಾರುಕಟ್ಟೆ ದರ ಕನಿಷ್ಟ ₹15 ಸಾವಿರದಷ್ಟಿದೆ. ಇದರಿಂದ ಕುರಿಗಾಹಿಗಳಿಗೆ ಶೇ.50 ಮತ್ತು ಅದಕ್ಕಿತ ಹೆಚ್ಚಿನ ನಷ್ಟವಾಗುತ್ತಿದೆ. ಆದ್ದರಿಂದ ಗಂಭೀರವಾಗಿ ಪರಿಗಣಿಸಿ, ಕುರಿಗಾಹಿಗಳಿಗೆ ನ್ಯಾಯಕೊಡಿಸಬೇಕು ಎಂದು ಮನವಿ ಮಾಡಿದರು.
ಕೆಲ ಪೊಲೀಸ್ ಸಿಬ್ಬಂದಿ ದಶಕಕ್ಕೂ ಹೆಚ್ಚು ಕಾಲದಿಂದ ಸೈದಾಪುರ ಠಾಣೆಯಲ್ಲೇ ಇದ್ದಾರೆ. ಅಂತಹ ಭ್ರಷ್ಟರನ್ನು ಕೂಡಲೇ ವರ್ಗಾಯಿಸಬೇಕು. ಕುರಿಗಾಹಿಗಳ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಮುಂದಿನ ಹದಿನೈದು ದಿನಗಳಲ್ಲಿ ದೊಡ್ಡ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಸಾಂಪ್ರಾದಾಯಿಕ ಅಲೇಮಾರಿ ಕುರಿಗಾಹಿಗಳ ಹಿತರಕ್ಷಣಾ ಸಮಿತಿಯ ಮುಖಂಡ ಶಿವಕುಮಾರ ಮುನಗಲ್, ಅಸಂಘಟಿತ ರಾಜ್ಯ ಕುರಿಗಾಹಿಗಳ ಹೋರಾಟಗಾರ ಗೋಪಾಲ ಎಂ.ಪಿ.ಬೀದರ್, ಗ್ರಾ.ಪಂ. ಸದಸ್ಯ ತಾಯಪ್ಪ ಪೂಜಾರಿ ಕರಣಗಿ, ರೈತ ಮುಖಂಡ ಮಹಾದೇವಪ್ಪ ಕಣೇಕಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.