ADVERTISEMENT

ಅದ್ಧೂರಿ ಶ್ರೀನಿವಾಸ ಕಲ್ಯಾಣೋತ್ಸವ

ಅಪಾರ ಸಂಖ್ಯೆಯಲ್ಲಿ ಸೇರಿದ ಜನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2018, 16:00 IST
Last Updated 22 ಡಿಸೆಂಬರ್ 2018, 16:00 IST
ಸುರಪುರದ ಗರುಡಾದ್ರಿ ಕಲಾಮಂದಿರದಲ್ಲಿ ಶನಿವಾರ ಶ್ರೀನಿವಾಸ ಕಲ್ಯಾಣ ಮಹೋತ್ಸವ ವೈಭವದಿಂದ ಜರುಗಿತು
ಸುರಪುರದ ಗರುಡಾದ್ರಿ ಕಲಾಮಂದಿರದಲ್ಲಿ ಶನಿವಾರ ಶ್ರೀನಿವಾಸ ಕಲ್ಯಾಣ ಮಹೋತ್ಸವ ವೈಭವದಿಂದ ಜರುಗಿತು   

ಸುರಪುರ:ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಶನಿವಾರ ನಡೆದ ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಅಪಾರ ಜನ ಸೇರಿದರು. ವಧು ವರರಾಗಿದ್ದ ಶ್ರೀನಿವಾಸ ದೇವರು ಮತು ಭೂದೇವಿ–ಶ್ರೀದೇವಿ ಅಮ್ಮನವರ ಕಲ್ಯಾಣ ಮಹೋತ್ಸವಕ್ಕೆ ಕಿಕ್ಕಿರಿದು ಸೇರಿದ್ದ ಜನರು ಸಾಕ್ಷಿಯಾದರು.

ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಪರಿವಾರದವರು ಈ ಉತ್ಸವ ಏರ್ಪಡಿಸಿದ್ದರು.ಬೆಳಿಗ್ಗೆ 5.30ಕ್ಕೆ ಸುಪ್ರಭಾತ ಸೇವೆ, 6ಕ್ಕೆ ವೆಂಕಟರಮಣನ ಸಹಸ್ರ ನಾಮಾರ್ಚನ ಪಾರಾಯಣ ನಡೆಯಿತು. ನಂತರ ನಿರ್ಮಾಲ್ಯ ವಿಸರ್ಜನೆ, ತೋಮಾಲಸೇವೆ, ಅಭಿಷೇಕ, ಮಂಗಳಸ್ನಾನ, ಪುಷ್ಪಾಲಂಕಾರ ಜರುಗಿದವು.

ಕಲ್ಯಾಣ ಮಹೋತ್ಸವದಲ್ಲಿ ವಿವಿಧ ಪುಷ್ಪಾದಿಗಳಿಂದ ಮುತ್ತು ರತ್ನಾಭರಣಗಳಿಂದ ಶೋಭಿತನಾಗಿದ್ದ ವರ ಶೀನಿವಾಸದೇವರನ್ನು ವಧುವಿನ ಪಕ್ಷ ವಹಿಸಿದ್ದ ರಾಜಾ ಮದನ ಗೋಪಾಲ ನಾಯಕ ಪರಿವಾರದವರು ಬರ ಮಾಡಿಕೊಂಡರು.

ADVERTISEMENT

ಕಂಕಣ ಭಾಗ್ಯ, ಯಜ್ಞೋಪವೀತ, ಕುಂಕುಮಾರ್ಚಾನೆ, ಪುಷ್ಪಾರ್ಚನೆ ಸೇರಿದಂತೆ ಕಲ್ಯಾಣ ಮಹೋತ್ಸವದ ವಿವಿಧ ಘಟ್ಟಗಳ ನಂತರ ವಧು ವರರ ಗೋತ್ರ ಪಠಣ, ಶೋಡೋಪಚಾರ ನಡೆಯಿತು. ಭಾಜಾಭಜಂತ್ರಿ ಮೇಳದೊಂದಿಗೆ ಪಂಚರಾತ್ರಾಗಮ ಶಾಸ್ತ್ರ ಉಕ್ತಿ ವಿಧಿಯಂತೆ ಕಲ್ಯಾಣ ಮಹೋತ್ಸವ ಜರುಗಿತು.

ನಂತರ ಮಧುಪರ್ಕ ವಿನಿಯೋಗದ ಮೂಲಕ ಕನ್ಯಾದಾನ ಮಾಡಲಾಯಿತು. ರೇಷ್ಮೆ ಪೀತಾಂಬರ ಧನಕನಕಾದಿಗಳನ್ನು ವರೋಪಚಾರವಾಗಿ ನೀಡಲಾಯಿತು. ನಂತರ ಶ್ರೀನಿವಾಸ ದೇವರಿಗೆ ಮಂಗಳಾರತಿ, ಮಹಾ ಮಂಗಳಾರತಿ, ತೀರ್ಥಪ್ರಸಾದ, ಮಂತ್ರ ಪುಷ್ಪ ವಿನಿಯೋಗವಾಯಿತು. ಕಲ್ಯಾಣ ಮಹೋತ್ಸದ ನಂತರ ನಾಗವಲ್ಲಿ ಮತ್ತು ಲಾಜಾ ಹೋಮ ಜರುಗಿತು.

ಸಂಜೆ ನಗರದ ಬೀದಿಗಳಲ್ಲಿ ಗರುಡವಾಹನೋತ್ಸವಾರೂಢನಾದ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸದೇವರ ಭವ್ಯ ಮೆರವಣಿಗೆ ಜರುಗಿತು. ನಂತರ ಸಹಸ್ರ ದೀಪೋತ್ಸವ, ಉಯ್ಯಾಲೋತ್ಸವ, ಶ್ರೀನಿವಾಸದೇವರ ನಾಮ ಸಂಕೀರ್ತನೆಯೊಂದಿಗೆ ಪುಷ್ಪಯಾಗ ಜರುಗಿತು. ತದನಂತರ ಮಂಗಳಾರತಿ, ಮಹಾಮಂಗಳಾರುತಿ, ತೀರ್ಥಪ್ರಸಾದ ವಿನಿಯೋಗ ರಾತ್ರಿ 8 ಗಂಟೆಗೆ ಶ್ರೀನಿವಾಸ ದೇವರ ಶಯನೋತ್ಸವದೊಂದಿಗೆ ಕಲ್ಯಾಣ ಮಹೋತ್ಸವ ಸಂಪನ್ನಗೊಂಡಿತು.

ವೈದಿಕರಾದ ಮೋಹನ ಕೃಷ್ಣಾಚಾರ್ಯ, ಯೋಗಾನಂದಾಚಾರ್ಯ, ಜನಾರ್ಧನ ಭಟ್ಟಾಚಾರ್ಯ, ಅರುಣ ಭಟ್ಟಾಚಾರ್ಯ, ರಾಕೇಶ ಭಟ್ಟಾಚಾರ್ಯ, ಪುನೀತ ಭಟ್ಟಾಚಾರ್ಯ, ಶ್ರೀಹರಿ ಆದೋನಿ ಪೌರೋಹಿತ್ಯದಲ್ಲಿ ನೆರವು ನೀಡಿದರು.

ರಾಜಾ ಮದನಗೋಪಾಲ ಪರಿವಾರದ ರಾಜಾ ಪಾಮನಾಯಕ, ರಾಜಾ ರಾಯಪ್ಪ ನಾಯಕ, ರಾಜಾ ಅಮರೇಶ ನಾಯಕ, ರಾಜಾ ಮುಕುಂದ ನಾಯಕ ರಾಜಾ ಹನುಮಪ್ಪ ನಾಯಕ, ರಾಜಾ ಹರ್ಷವರ್ಧನ ನಾಯಕ, ರಾಜಾ ವಿಷ್ಣವರ್ಧನ ನಾಯಕ ಭಾಗವಹಿಸಿದ್ದರು.

ಇಷ್ಟಾರ್ಥಗಳು ಸಿದ್ಧಿಸುತ್ತವೆ: ‘ಕಲಿಯುಗದಲ್ಲಿ ಭಗವಂತನ ಸಾಕ್ಷಾತ್ಕಾರ ಇಲ್ಲ. ಆತನ ನಾಮಸ್ಮರಣೆ ಮಾಡುವುದರಿಂದ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಅದರಲ್ಲೂ ಶ್ರೀನಿವಾಸ ಕಲ್ಯಾಣ ಮಹೋತ್ಸವ ನೆರವೇರಿಸುವುದರಿಂದ ಕಷ್ಟಗಳು ದೂರವಾಗಿ, ಸುಖ, ಶಾಂತಿ, ಸಮೃದ್ಧಿ ಲಭಿಸುತ್ತದೆ’ ಎಂದು ಕೆಂಗೇರಿಯ ರಾಮಾನುಜಮಠದ ಪಂಚರಾತ್ರ ಆಗಮ ವೈದಿಕ ವಿದ್ವಾಂಸ ಚಿರಂಜೀವಿ ರಾಮಚಂದ್ರ ಭಟ್ಟಾಚಾರ್ಯ ಹೇಳಿದರು.

ಶ್ರೀನಿವಾಸ ಕಲ್ಯಾಣ ಮಹೋತ್ಸವದ ಪೌರೋಹಿತ್ಯ ವಹಿಸಿ ಮಾತನಾಡಿದ ಅವರು,‘ಶ್ರೀನಿವಾಸ ಕಲ್ಯಾಣ ಮಹೋತ್ಸವ ಕನಿಷ್ಠ ಒಂದು ದಿನ ನಡೆಯುವ ಕಾರ್ಯಕ್ರಮ. ಭಕ್ತಿಯಿಂದ, ಶಾಸ್ತ್ರೋಕ್ತವಾಗಿ ಈ ಮಹೋತ್ಸವ ನಡೆಸಿದರೆ ಶ್ರೀನಿವಾಸ ದೇವರು ಲಕ್ಷ್ಮಿ ಸಹಿತ ವರ ನೀಡುತ್ತಾನೆ ಎಂಬ ಪ್ರತೀತಿ ಇದೆ. ಲೋಕ ಕಲ್ಯಾಣಾರ್ಥವಾಗಿಯೂ ಇದನ್ನು ಕೈಗೊಳ್ಳಬಹುದು’ ಎಂದರು.

‘ಕಲ್ಯಾಣ ಮಹೋತ್ಸವದ ನಂತರ ಹೋಮ, ಹವನ ಕೈಗೊಳ್ಳುವುದು ಸಂಪ್ರದಾಯ. ಯಾಗಗಳ ಮೂಲಕ ಅಗ್ನಿಗೆ ಹವೀಸ್ಸು ನೀಡುವುದರಿಂದ ದೇವತೆಗಳು ಸಂತುಷ್ಟರಾಗುತ್ತಾರೆ. ಅನಿಷ್ಟಗಳು ದೂರವಾಗುತ್ತವೆ. ಮನೋರಥಗಳು, ಇಷ್ಟಾರ್ಥಗಳು ಈಡೇರುತ್ತವೆ. ಮತ್ತು ಆ ಪ್ರದೇಶದಲ್ಲಿ ಶಾಂತಿ ನೆಲೆಸಿ ಸಕಲ ಐಶ್ವರ್ಯಗಳಿಂದ ಸಮೃದ್ಧವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.