ADVERTISEMENT

ಸರಳವಾಗಿ ನಡೆದ ಹಾಲೋಕುಳಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 16:37 IST
Last Updated 11 ಸೆಪ್ಟೆಂಬರ್ 2020, 16:37 IST
ಸುರಪುರದ ಇತಿಹಾಸ ಪ್ರಸಿದ್ಧ ವೇಣುಗೋಪಾಲಸ್ವಾಮಿ ಜಾತ್ರೆ ಅಂಗವಾಗಿ ಶುಕ್ರವಾರ ಸ್ತಂಭಾರೋಹಣ ನೆರವೇರಿತು
ಸುರಪುರದ ಇತಿಹಾಸ ಪ್ರಸಿದ್ಧ ವೇಣುಗೋಪಾಲಸ್ವಾಮಿ ಜಾತ್ರೆ ಅಂಗವಾಗಿ ಶುಕ್ರವಾರ ಸ್ತಂಭಾರೋಹಣ ನೆರವೇರಿತು   

ಸುರಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ವೇಣುಗೋಪಾಲಸ್ವಾಮಿ (ಹಾಲೋಕುಳಿ) ಜಾತ್ರೆಯನ್ನು ಶುಕ್ರವಾರ ಸರಳವಾಗಿ ಆಚರಿಸಲಾಯಿತು.

ಜಾತ್ರೆಯ ವಿಶೇಷ ಸ್ತಂಭಾರೋಹಣ ಕೆಲವೇ ಸಮಯದಲ್ಲಿ ಮುಗಿದು ಹೋಯಿತು. ಪ್ರತಿ ವರ್ಷ ದೇವಸ್ಥಾನದ ಆವರಣದಲ್ಲಿ 5 ಕಂಬಗಳ ಆರೋಹಣ ನಡೆಯುತ್ತಿತ್ತು. ಸಾವಿರಾರು ಭಕ್ತರು ನೆರೆದಿರುತ್ತಿದ್ದರು. ಈ ವರ್ಷ ದೇವಸ್ಥಾನದ ಆವರಣದಲ್ಲಿ ಒಂದು ಮತ್ತು ಹನುಮಾನ ದೇವಸ್ಥಾನದ ಎದುರು ಒಂದು ಕಂಬ ಹಾಕಲಾಗಿತ್ತು. ಬೆಳಿಗ್ಗೆ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಆಂಜನೇಯಚಾರ್ಯುಲು ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು, ಪೂಜಾ ಕೈಂಕರ್ಯ ನಡೆದವು.

ಸುರಕ್ಷಿತ ಅಂತರದಲ್ಲಿ ಕೆಲವೇ ಭಕ್ತರು ದೇವರ ದರ್ಶನ ಪಡೆದರು. ಸಂಜೆ ಸ್ತಂಭಾರೋಹಣ ವೀಕ್ಷಿಸಿದರು. ಜಾತ್ರೆಯ ಅಂಗವಾಗಿ ಆಟಿಕೆ ಸಾಮಾನು, ಜೋಕಾಲಿ ಇತರ ಮಕ್ಕಳ ಆಟಿಕೆಗಳು, ಮಿಠಾಯಿ, ಬಳೆ ಇತರೆ ವ್ಯಾಪಾರಕ್ಕೆ ಅವಕಾಶವಿರಲಿಲ್ಲ.

ADVERTISEMENT

‘ಮೂರು ಶತಮಾನಗಳಿಂದ ಜಾತ್ರೆ ನಡೆಯುತ್ತಾ ಬಂದಿದೆ. ಇದೇ ಮೊದಲ ಬಾರಿಗೆ ಕೊರೊನಾ ಹಿನ್ನೆಲೆಯಲ್ಲಿ ಜಾತ್ರೆಯನ್ನು ಸರಳವಾಗಿ ಆಚರಿಸಲಾಗಿದೆ. ಧಾರ್ಮಿಕ ವಿಧಾನಗಳನ್ನು ಬಿಡಲು ಬರುವುದಿಲ್ಲವಾದ್ದರಿಂದ ದೇವಸ್ಥಾನದಲ್ಲಿ ಪೂಜೆ ನಡೆದಿದೆ. ವೇಣುಗೋಪಾಲಸ್ವಾಮಿ ದೇಶವನ್ನು ಕೊರೊನಾದಿಂದ ಮುಕ್ತಗೊಳಿಸಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಗಿದೆ’ ಎಂದು ಸಂಸ್ಥಾನಿಕ ರಾಜಾ ಕೃಷ್ಣಪ್ಪನಾಯಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.