ಯಾದಗಿರಿ: ಕಾಡಿನಲ್ಲಿ ಪ್ರಕೃತಿದತ್ತವಾಗಿ ಬೆಳೆದಿರುವ ಸೀತಾಫಲ ಹಣ್ಣು ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ನಗರದಲ್ಲಿ ಎಲ್ಲಿ ನೋಡಿದರಲ್ಲಿ ವ್ಯಾಪಾರಿಗಳು ಬುಟ್ಟಿ ತುಂಬಿಕೊಂಡು ಮಾರುತ್ತಿದ್ದಾರೆ.
ಯಾದಗಿರಿ ತಾಲ್ಲೂಕಿನ ಬಂದಳ್ಳಿ, ಯಡ್ಡಳ್ಳಿ, ಯರಗೋಳ, ಹತ್ತಿಕುಣಿ, ಆಶನಾಳ, ರಾಮಸಮುದ್ರ, ಮೈಲಾಪುರ, ಬೆಳಗೇರಾ, ಅರಕೇರಾ (ಕೆ), ಕಟಗಿ, ಶಹಾಪುರ ನಗರದ ಸುತ್ತಲಿನ ಗುಡ್ಡಗಳು, ಗುರುಮಠಕಲ್ ತಾಲ್ಲೂಕಿನ ಕಂದಕೂರ, ತಾತಳಗೇರಾ, ಬೋರಾಬಂಡ, ಧರ್ಮಪುರ, ಚಿಂತನಹಳ್ಳಿ, ಮಿನಾಸಪುರ, ಸುರಪುರ ಸೇರಿ ಮೊದಲಾದ ಗುಡ್ಡಗಾಡು ಪ್ರದೇಶದಲ್ಲಿ ಈ ಹಣ್ಣಿನ ಗಿಡಗಳು ನೈಸರ್ಗಿಕವಾಗಿ ಬೆಳೆದುನಿಂತಿವೆ.
ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ ಸೀತಾಫಲ ಗಿಡಗಳಲ್ಲಿ ಹೂವು ಅರಳಿ, ಆಗಸ್ಟ್ ತಿಂಗಳ ಕೊನೆಯ ವೇಳೆಗೆ ಹಣ್ಣಾಗಿ ಮಾರುಕಟ್ಟೆಗೆ ಲಗ್ಗೆ ಇರಿಸುತ್ತವೆ. ಈ ವರ್ಷ ಉತ್ತಮ ಮಳೆ ಆಗಿದ್ದರೂ ಮೊಗ್ಗು ಕಟ್ಟುವ ವೇಳೆಯಲ್ಲಿ ಮಳೆಯ ಅಭಾವ ಆಗಿತ್ತು. ಹೀಗಾಗಿ, ಗಿಡಗಳಲ್ಲಿ ಹಣ್ಣಿನ ಸಂಖ್ಯೆಗಳಲ್ಲಿ ಕಡಿಮೆಯಾಗಿದ್ದರೂ ಸಿಹಿ ಮತ್ತು ರುಚಿಯಲ್ಲಿ ಒಂದಿಷ್ಟೂ ಕಡಿಮೆಯಾಗಿಲ್ಲ. ಹೀಗಾಗಿ, ಅರಣ್ಯ ಇಲಾಖೆಗೆ ಲಕ್ಷಾಂತರ ರೂಪಾಯಿ ಕೊಟ್ಟು ಬೆಟ್ಟಗಳನ್ನು ಗುತ್ತಿಗೆ ಪಡೆದ ವರ್ತಕರು ಹಣ್ಣುಗಳ ಮಾರಾಟದಲ್ಲಿ ನಿರತವಾಗಿದ್ದಾರೆ.
ಕಾಡಿನಲ್ಲಿ ಪ್ರಕೃತಿದತ್ತವಾಗಿ ಬೆಳೆದಿರುವ ಸೀತಾಫಲ ಹಣ್ಣಿಗೆ ಕೀಟನಾಶಕ, ರಾಸಾಯನಿಕ ಗೊಬ್ಬರದ ಹಂಗಿಲ್ಲ. ಸಹಜವಾಗಿ ಪಕ್ವವಾದ ಹಣ್ಣುಗಳಿಗೆ ಗ್ರಾಹಕರು ಇಷ್ಟಪಡುತ್ತಾರೆ. ಹಣ್ಣುಗಳನ್ನು ತಿನ್ನ ಬಯಸುವವರೆಲ್ಲ ಅರಣ್ಯಕ್ಕೆ ಹೋಗಿ ಕಿತ್ತು ತಿನ್ನುವಂತಿಲ್ಲ. ಅರಣ್ಯ ಇಲಾಖೆಯು ತನ್ನ ಅಧೀನದಲ್ಲಿರುವ ಹಣ್ಣಿನ ಬೆಟ್ಟ ಪ್ರದೇಶಗಳನ್ನು ಘಟಕಗಳನ್ನಾಗಿ ಮಾಡಿ, ಎರಡು ವರ್ಷಗಳ ಅವಧಿಗೆ ಹರಾಜು ಮಾಡಿ ಕೊಡುತ್ತಾರೆ. ಆಸಕ್ತ ಒಬ್ಬರು, ಇಬ್ಬರು, ಇಲ್ಲವೇ 10ರಿಂದ 15 ಜನರ ಗುಂಪು ಗುತ್ತಿಗೆ ಪಡೆದು ಬೆಟ್ಟಗಳನ್ನು ಕಾಯುತ್ತಾರೆ. ಕೂಲಿ ಆಳುಗಳ ಮೂಲಕ ಹಣ್ಣುಗಳನ್ನು ಕಿತ್ತು ತಂದು ನಗರಗಳ ಮಾರುಕಟ್ಟೆಗೆ ಸರಬರಾಜು ಮಾಡುತ್ತಾರೆ.
ಕೂಲಿ ಕಾರ್ಮಿಕರು ಸೂರ್ಯ ಉದಯಿಸುವ ಮೊದಲೇ ಪ್ಲಾಸ್ಟಿಕ್ ಚೀಲ, ಬುಟ್ಟಿಗಳನ್ನು ಹಿಡಿದು ಬೆಟ್ಟವನ್ನು ಹತ್ತುತ್ತಾರೆ. ಹಣ್ಣುಗಳನ್ನು ಬುಟ್ಟಿಯಲ್ಲಿ ಹಾಕಿಕೊಂಡು, ಹಣ್ಣು ಕಟ್ಟುವ ಹಂತದಲ್ಲಿರುವ ಕಾಯಿಗಳನ್ನು ಕಿತ್ತು ಚೀಲದಲ್ಲಿ ತುಂಬಿಕೊಂಡು ನಿತ್ಯ ಮಾರಾಟ ಮಾಡುತ್ತಿದ್ದಾರೆ. ಕೆಲವರು ನಗರಕ್ಕೆ ತಂದು ಮಾರಿದರೆ ಮತ್ತೆ ಕೆಲವರು ಬೆಟ್ಟದ ಬದಿಯ ರಸ್ತೆಗಳ ಬದಿಯಲ್ಲೇ ನಿಂತು ಮಾರುತ್ತಿದ್ದಾರೆ. ಗುತ್ತಿಗೆದಾರರು ಬೊಲೆರೊ ವಾಹನಗಳಲ್ಲಿ ನೆರೆಯ ಜಿಲ್ಲೆಗಳಿಗೆ ಒಯ್ದು ಮಾರಾಟ ಮಾಡುವಲ್ಲಿ ನಿರತವಾಗಿದ್ದಾರೆ.
ಹಣ್ಣಿನ ಗಾತ್ರವನ್ನು ಅವಲಂಭಿಸಿ ದರ ನಿಗದಿ ಆಗುತ್ತದೆ. ಬುಟ್ಟಿಯ ಲೆಕ್ಕದಲ್ಲಿ ಸಣ್ಣ ಗಾತ್ರದ ಬುಟ್ಟಿಗೆ ₹ 150ರಿಂದ ದೊಡ್ಡ ಬುಟ್ಟಿಗೆ ₹ 600ರ ವರೆಗೆ ಮಾರಾಟ ಮಾಡುತ್ತಿದ್ದಾರೆ. ಕಾಯಿ ಹಣ್ಣಾದ ಬಳಿಕ ಹೆಚ್ಚು ದಿನಗಳ ಸ್ವಾದ ಉಳಿಯುವುದಿಲ್ಲ. ಹೀಗಾಗಿ, ಸೂರ್ಯ ನೆತ್ತಿಯ ಮೇಲೆ ಏರಿದಂತೆ ಹಣ್ಣಿನ ದರದಲ್ಲಿ ಇಳಿಕೆ ಆಗುತ್ತದೆ. ಆ ದಿನದ ಹಣ್ಣುಗಳನ್ನು ಆ ದಿನವೇ ಮಾರಿ ಮರುದಿನ ಮತ್ತೆ ಬೇರೆ ಹಣ್ಣುಗಳೊಂದಿಗೆ ಮಾರುಕಟ್ಟೆಗೆ ಬರುತ್ತಾರೆ. ಹೀಗಾಗಿ, ಅಂದಿನ ದಿನ ವ್ಯಾಪಾರ ಅಂದೇ ಮುಗಿಸಿ ಕೈತೊಳೆದುಕೊಳ್ಳುವುದು ಸೀತಾಫಲ ಹಣ್ಣಿನ ವರ್ತಕರ ವಾಡಿಕೆ.
ಎಲ್ಲೆಲ್ಲಿ ಮಾರಾಟ?: ಯಾದಗಿರಿ ನಗರದ ಹಳೇ ಬಸ್ ನಿಲ್ದಾಣ ಮುಂಭಾಗ, ನೇತಾಜಿ ಸುಭಾಷ್ ವೃತ್ತ, ರೈಲು ನಿಲ್ದಾಣ ರಸ್ತೆ, ಹೊಸ ಬಸ್ ನಿಲ್ದಾಣ, ಗಾಂಧಿ ವೃತ್ತ, ಗಂಜ್ ಪ್ರದೇಶದ ವೃತ್ತ, ಚಿತ್ತಾಪುರ ರಸ್ತೆ ಬದಿಯಲ್ಲಿ ಚಿಕ್ಕ– ಚಿಕ್ಕ ಬುಟ್ಟಿಗಳಲ್ಲಿ ಆಕರ್ಷಕವಾಗಿ ಜೋಡಿಸಿದ ಸೀತಾಫಲ ಹಣ್ಣುಗಳ ಮಾರಾಟ ಜೋರಾಗಿದೆ.
ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವವರು ಚಿಕ್ಕಮಕ್ಕಳು ಗುಡ್ಡಕ್ಕೆ ಹೋಗಿ ಸೀತಾಫಲ ಹರಿದುಕೊಂಡು ಹೋಗುತ್ತಾರೆ. ಗುಡ್ಡಗಳನ್ನು ಸಂಜೆವರೆಗೂ ಕಾಯುವುದೇ ದೊಡ್ಡ ಕೆಲಸರಾಮಣ್ಣ ಡೊಣ್ಣಿಗೇರಿ ಸಗಟು ವ್ಯಾಪಾರಿ
ಈ ಬಾರಿ ಸೀತಾಫಲದ ಇಳುವರಿ ಹೆಚ್ಚಾದರೂ ದರದಲ್ಲಿ ಕಡಿಮೆಯಾಗಿಲ್ಲ. ಇದು ನೈಸರ್ಗಿಕ ಬೆಳೆ. ತೋಟದಲ್ಲಿ ಬೆಳೆಯುವ ಸೀತಾಫಲಕ್ಕಿಂತ ಮಧುರವಾಗಿರುತ್ತದೆಕೆ.ಟಿ. ಜೋಷಿ ಗ್ರಾಹಕ
ಅರಣ್ಯ ಇಲಾಖೆ ಖಜಾನೆಗೆ ₹ 8.50 ಲಕ್ಷ
ಅರಣ್ಯ ಇಲಾಖೆಯು ಜಿಲ್ಲೆಯಲ್ಲಿ ಸೀತಾಫಲ ಗಿಡಗಳು ಬೆಳೆಯುವ ಗುಡ್ಡಗಾಡು ಪ್ರದೇಶವನ್ನು ಎಂಟು ಘಟಕಗಳನ್ನಾಗಿ ಮಾಡಿಕೊಂಡಿದೆ. ವಿಸ್ತೀರ್ಣ ಹಾಗೂ ಗಿಡಗಳಿಗೆ ತಕ್ಕಂತೆ ಟೆಂಡರ್ ದರ ನಿಗದಿ ಮಾಡಿ ಎರಡು ವರ್ಷಗಳ ಅವಧಿಗೆ ಗುತ್ತಿಗೆ ನೀಡುತ್ತದೆ. ಇದರಿಂದ ಅರಣ್ಯ ಇಲಾಖೆಗೆ ₹ 8.50 ಲಕ್ಷ ಹರಿದುಬಂದಿದೆ. ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಪ್ರಾದೇಶಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ್‌ಕುಮಾರ್ ‘ಗುರುಮಠಕಲ್ ಯಾದಗಿರಿ ಶಹಾಪುರ ಹಾಗೂ ಸುರಪುರ ತಾಲ್ಲೂಕುಗಳನ್ನು ಒಳಗೊಂಡು ಎಂಟು ಘಟಕಗಳನ್ನಾಗಿ ಮಾಡಿಕೊಂಡು ಎರಡು ವರ್ಷಗಳ ಅವಧಿಗೆ ಸೀತಾಫಲ ಹಣ್ಣಿನ ಪ್ರದೇಶಗಳನ್ನು ಹರಾಜು ಮಾಡಲಾಗಿದೆ’ ಎಂದರು. ‘ಗುರುಮಠಕಲ್ ಚಿಂತನಪಳ್ಳಿ ಕೊಟಗೇರ ಮೋಟ್ನಳ್ಳಿ ಪ್ರದೇಶವನ್ನು ₹42100 ಯಂಪಾಳ ತಾತಳಗೇರ ಪ್ರದೇಶವನ್ನು ₹ 35500 ರಾಮಸಮುದ್ರ ಮೈಲಾಪುರ ಬಳಿಚಕ್ರ ವ್ಯಾಪ್ತಿಯನ್ನು ₹ 27500 ಯರಗೋಳ ಬಾಚವಾರ ಒಳಗೊಂಡ ಗುಡ್ಡಗಾಡನ್ನು ₹ 1.25 ಲಕ್ಷ ಶಹಾಪುರ ಪಟ್ಟಣ ಪ್ರದೇಶವನ್ನು ₹ 51500 ಸುರಪುರ ಮತ್ತು ತಳವಾರಗೇರ ಪ್ರದೇಶವನ್ನು ₹ 5.32 ಲಕ್ಷ ಹಾಗೂ ಹತ್ತಿಕುಣಿ ಪ್ರದೇಶವನ್ನು ₹ 36500 ಹರಾಜು ಮಾಡಲಾಗಿದೆ. ತೆರಿಗೆಯನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.
ಸುರಪುರ: ಭರ್ಜರಿ ಇಳುವರಿ
ಸುರಪುರ: ಉತ್ತಮ ಮಳೆ ಬಂದಿರುವುದರಿಂದ ಈ ಬಾರಿ ಸೀತಾಫಲ ಭರ್ಜರಿ ಇಳುವರಿ ಬಂದಿದೆ. ಸುರಪುರ ಏಳು ಸುತ್ತು ಗುಡ್ಡಗಳಿಂದ ಆವೃತ್ತವಾಗಿದೆ.
ಎಲ್ಲ ಗುಡ್ಡಗಳಲ್ಲಿ ಸೀತಾಫಲ ಗಿಡಗಳು ಸಮೃದ್ಧವಾಗಿ ಬೆಳೆದಿವೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಅರಣ್ಯ ಇಲಾಖೆಯು ಸೀತಾಫಲದ ಗುಡ್ಡಗಳನ್ನು ಹರಾಜು ಮಾಡುತ್ತದೆ. ಈ ಬಾರಿ ₹5.32 ಲಕ್ಷಕ್ಕೆ ಹರಾಜು ಮಾಡಲಾಗಿದೆ. 10ರಿಂದ 15 ಜನ ಸಗಟು ಮಾರಾಟಗಾರರು ಸೇರಿ ಹರಾಜು ಪಡೆದುಕೊಂಡು ಗುಡ್ಡ ಪ್ರದೇಶಗಳನ್ನು ಹಂಚಿಕೊಳ್ಳುತ್ತಾರೆ. ಪ್ರತಿ ದಿನ ನಸುಕಿನಲ್ಲಿ ಗುಡ್ಡಕ್ಕೆ ಹೋಗಿ ಮಾಗಿದ ಕಾಯಿಗಳನ್ನು ಕಿತ್ತುಕೊಂಡು ಬಂದು ಚಿಲ್ಲರೆ ಮಾರಾಟಗಾರರಿಗೆ ಮಾರುತ್ತಾರೆ. ಪ್ರತಿ ಬುಟ್ಟಿಗೆ ₹ 500ರಿಂದ ₹600 ಇದೆ. ₹ 100ಕ್ಕೆ 8ರಿಂದ 10 ಹಣ್ಣುಗಳನ್ನು ಕೊಡುತ್ತಿದ್ದಾರೆ. ಇಲ್ಲಿಯ ಸೀತಾಫಲ ಮಧುರವಾದ ರುಚಿ ಹೊಂದಿದ್ದು ದೂರದ ಊರುಗಳಿಂದ ಬಂದು ಸೀತಾಫಲ ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.