ADVERTISEMENT

‌‘ಮಣ್ಣು ರೈತನ ಕಣ್ಣು’

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 5:55 IST
Last Updated 24 ಡಿಸೆಂಬರ್ 2025, 5:55 IST
ಯಾದಗಿರಿ ತಾಲ್ಲೂಕಿನ ಯಡ್ಡಳ್ಳಿ ಗ್ರಾಮದಲ್ಲಿ ಮಂಗಳವಾರ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ರೈತರಿಗೆ ಮಣ್ಣು ಆರೋಗ್ಯ ಚೀಟಿ ವಿತರಿಸಲಾಯಿತು
ಯಾದಗಿರಿ ತಾಲ್ಲೂಕಿನ ಯಡ್ಡಳ್ಳಿ ಗ್ರಾಮದಲ್ಲಿ ಮಂಗಳವಾರ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ರೈತರಿಗೆ ಮಣ್ಣು ಆರೋಗ್ಯ ಚೀಟಿ ವಿತರಿಸಲಾಯಿತು   

ಯಾದಗಿರಿ: ‘ಮಣ್ಣು ರೈತನ ಕಣ್ಣು ಇದ್ದಂತೆ. ಜಗತ್ತಿನ ಸರ್ವ ಜೀವರಾಶಿಗಳಿಗೆ ಮಣ್ಣೇ ಆಧಾರವಾಗಿದ್ದು, ನಾವು ಸತ್ತರೆ ಮಣ್ಣಿನಲ್ಲಿ ಹೂಳುತ್ತಾರೆ ಮಣ್ಣೇ ಸತ್ತರೆ ನಾವೆಲ್ಲಿಗೆ’ ಎಂದು ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ ಪ್ರಶ್ನಿಸಿದರು. 

ತಾಲ್ಲೂಕಿನ ಯಡ್ಡಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕೃಷಿ ಇಲಾಖೆಯ ವತಿಯಿಂದ  ಶಾಲಾ ಮಣ್ಣು ಆರೋಗ್ಯ ಹಾಗೂ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ರೈತರಿಗೆ ಮಣ್ಣು ಆರೋಗ್ಯ ಚೀಟಿ ವಿತರಿಸಿ ಅವರು ಮಾತನಾಡಿದರು.

‘ಮಣ್ಣಿನ ಆರೋಗ್ಯವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಮಣ್ಣು ಪರೀಕ್ಷೆಯನ್ನು ಮಾಡಿಸಿ, ವರದಿಯಲ್ಲಿನ ಶಿಫಾರಸಿನಂತೆ ಗೊಬ್ಬರಗಳನ್ನು ಬಳಸಿ ಹೆಚ್ಚಿನ ಇಳುವರಿ ಪಡೆಯಬಹುದು. ಭೂಮಿ ಆರೋಗ್ಯವಾಗಿದ್ದರೆ ನಾವೆಲ್ಲರೂ ಸದೃಢ ಆರೋಗ್ಯ ಹೊಂದಲು ಸಾಧ್ಯ’ ಎಂದರು.

ADVERTISEMENT

‘ದೇಶದ ಬೆನ್ನೆಲುಬು ಆಗಿರುವ ರೈತರನ್ನು ಸ್ಮರಿಸಿ, ಅವರನ್ನು ಗೌರವಿಸಲು ಹಾಗೂ ಐದನೇ ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಗೌರವಾರ್ಥವಾಗಿ ರಾಷ್ಟ್ರೀಯ ರೈತ ದಿನ ಆಚರಣೆ ಮಾಡಲಾಗುತ್ತಿದೆ. ರೈತರ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ಚರಣ್ ಸಿಂಗ್ ಅವರು ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದರು’ ಎಂದು ಹೇಳಿದರು.

ಗ್ರಾಮದ ಮುಖಂಡ ಶರಣಪ್ಪಗೌಡ ಪಟ್ಟೇದಾರ ಮಾತನಾಡಿ, ‘ವಿದ್ಯಾರ್ಥಿಗಳು ತಂದೆಗೆ ತಕ್ಕ ಮಕ್ಕಳಂತೆ ವಿದ್ಯಾಭ್ಯಾಸದ ಜೊತೆಗೆ ಕೃಷಿ ಚಟವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕೃಷಿ ಕುರಿತು ಹೆಚ್ಚಿನ ಜ್ಞಾನ ಸಂಪಾದಿಸಬೇಕು’ ಎಂದರು.

ಪರೀಕ್ಷೆ ಮಾಡಿದ ಮಣ್ಣು ಆರೋಗ್ಯ ಚೀಟಿಗಳನ್ನು ರೈತರಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಏಕಲವ್ಯ ಶಾಲೆಯ ಶಿಕ್ಷಕಿ ಚಂದ್ರಶೇಖರ ತ್ರಿಪಾಠಿ, ಮುಖ್ಯಶಿಕ್ಷಕರಾದ ಬಸವರಾಜಪ್ಪ, ಅರ್ಜುನ್‌ ಹೊಸಮನಿ, ರವೀಂದ್ರ ಬಡಿಗೇರ, ಶಿಕ್ಷಕಿಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.