ADVERTISEMENT

ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಾಳೆ

ಯಾದಗಿರಿ, ಶಹಾಪುರ, ಸುರಪುರದಲ್ಲಿ ಬಹಿರಂಗ ಸಭೆ: ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 16:41 IST
Last Updated 24 ನವೆಂಬರ್ 2020, 16:41 IST
ಕೆ.ಸೋಮಶೇಖರ್, ಎಸ್‌ಯುಸಿಐ (ಕಮ್ಯುನಿಷ್ಟ್‌) ಜಿಲ್ಲಾ ಕಾರ್ಯದರ್ಶಿ
ಕೆ.ಸೋಮಶೇಖರ್, ಎಸ್‌ಯುಸಿಐ (ಕಮ್ಯುನಿಷ್ಟ್‌) ಜಿಲ್ಲಾ ಕಾರ್ಯದರ್ಶಿ   

ಯಾದಗಿರಿ: ಕೇಂದ್ರ ಸರ್ಕಾರದ ಬಂಡವಾಳಶಾಹಿಗಳ ಪರವಾದ ಮತ್ತು ಜನವಿರೋಧಿ, ಕಾರ್ಮಿಕ ವಿರೋಧಿ ಹಾಗೂ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಎಐಯುಟಿಯುಸಿ, ಸಿಐಟಿಯು, ಎಐಟಿಯುಸಿ ಸೇರಿದಂತೆ ದೇಶದ ಹತ್ತು ಕೇಂದ್ರ ಕಾರ್ಮಿಕ ಸಂಘಟನೆಗಳಿಂದ ನವೆಂಬರ್ 26 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಸಲಾಗುತ್ತಿದೆ ಎಂದು ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ್‌ ತಿಳಿಸಿದರು.

ನಗರದಲ್ಲಿ ಅಂದು ಮಧ್ಯಾಹ್ನ 12.30ಕ್ಕೆ ನಗರದ ಹೊಸ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಲಾಗುತ್ತಿದೆ. ಹಳೆ ಬಸ್ ನಿಲ್ದಾಣದ ಬಳಿ ಸಭೆ ನಡೆಯಲಿದೆ. ಶಹಾಪುರದಲ್ಲಿ ಚರಬಸವೇಶ್ವರ ಸಿಬಿ ಕಮಾನ್‍ನಿಂದ ಬಸವೇಶ್ವರರ ವೃತ್ತದವರೆಗೆ ಮೆರವಣಿಗೆ ನಡೆಯಲಿದೆ. ಬಸವೇಶ್ವರ ವೃತ್ತದಲ್ಲಿ ಸಭೆ ನಡೆಯಲಿದೆ. ಸುರಪುರದಲ್ಲಿ ಮಹತ್ಮಾ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಣಕಾಸು ವಲಯ ಸೇರಿದಂತೆ ರೈಲ್ವೆ, ವಿಮಾನಯಾನ, ಆರೋಗ್ಯ, ಶಿಕ್ಷಣ, ವಿದ್ಯುತ್, ದೂರ ಸಂಪರ್ಕ, ಬ್ಯಾಂಕ್, ವಿಮಾ ಮತ್ತಿತರ ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಕಾರ್ಖಾನೆ, ಬಂದರು ಮುಂತಾದ ಸರ್ಕಾರದ ಉತ್ಪಾದನಾ ಮತ್ತು ಸೇವಾ ಸಂಸ್ಥೆಗಳ ಸಾಂಸ್ಥೀಕರಣವನ್ನು ನಿಲ್ಲಿಸಬೇಕು. 44 ಕಾರ್ಮಿಕ ಕಾನೂನುಗಳನ್ನು ಕಾರ್ಮಿಕ ವಿರೋಧಿಯಾಗಿ ತಿದ್ದುಪಡಿ ಮಾಡಿ ತಂದಿರುವ 4 ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ಎಲ್ಲರಿಗೂ ಪಿಂಚಣಿ ಒದಗಿಸಬೇಕು. ಎನ್‌ಪಿಎಸ್ ರದ್ದು ಮಾಡಿ ಮತ್ತು ಹಿಂದಿನ ಪಿಂಚಣಿ ಯೋಜನೆಯನ್ನು ಪುನಃಸ್ಥಾಪಿಸಬೇಕು ಎನ್ನುವ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಹೋರಾಟ ನಡೆಯಲಿದೆ ಎಂದರು.

ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷೆ ಡಿ.ಉಮಾದೇವಿ, ಸಿಐಟಿಯು ಜಿಲ್ಲಾ ಮುಖಂಡ ಗಾಲೀಬ್‍ಸಾಬ್ ಎಂ.ಬೆಳಗೇರ, ಎಐಟಿಯುಸಿ ಜಿಲ್ಲಾ ಸಹ ಕಾರ್ಯದರ್ಶಿ ಕಲ್ಪನಾ ಗುರುಸುಣಗಿ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್., ಸಿಐಟಿಯು ಜಿಲ್ಲಾ ಮುಖಂಡ ಅನಿತಾ ಹಿರೇಮಠ ಇದ್ದರು.

ADVERTISEMENT

***

ಮುಷ್ಕರದಲ್ಲಿ ಜಿಲ್ಲೆಯ ಸುಮಾರು ಹತ್ತು ಸಾವಿರ ಕಾರ್ಮಿಕರು, ನೌಕರರು ಮತ್ತು ಕೂಲಿ ಕಾರ್ಮಿಕರು ಭಾಗಿಯಾಗಲಿದ್ದಾರೆ. ಮುಷ್ಕರಕ್ಕೆ ವಿವಿಧ ಸಂಘ–ಸಂಸ್ಥೆಗಳು ಬೆಂಬಲ ನೀಡಿವೆ.
– ಕೆ.ಸೋಮಶೇಖರ್, ಎಸ್‌ಯುಸಿಐ ಜಿಲ್ಲಾ ಘಟಕದ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.