ADVERTISEMENT

ಯಾದಗಿರಿ: ಮಕ್ಕಳು, ವೃದ್ಧರಲ್ಲಿ ಗಂಟಲು ಬೇನೆ, ಶೀತ, ಜ್ವರ

ಬಿ.ಜಿ.ಪ್ರವೀಣಕುಮಾರ
Published 18 ಡಿಸೆಂಬರ್ 2023, 5:33 IST
Last Updated 18 ಡಿಸೆಂಬರ್ 2023, 5:33 IST
ಯಾದಗಿರಿ ನಗರ ಹೊರವಲಯದ ಹೊಸ ಜಿಲ್ಲಾಸ್ಪತ್ರೆಯಲ್ಲಿ ಹೊರ ರೋಗಿಗಳು ತಪಾಸಣೆ ಚೀಟಿಗಾಗಿ ಸರದಿಯಲ್ಲಿ ನಿಂತಿದ್ದರು
ಯಾದಗಿರಿ ನಗರ ಹೊರವಲಯದ ಹೊಸ ಜಿಲ್ಲಾಸ್ಪತ್ರೆಯಲ್ಲಿ ಹೊರ ರೋಗಿಗಳು ತಪಾಸಣೆ ಚೀಟಿಗಾಗಿ ಸರದಿಯಲ್ಲಿ ನಿಂತಿದ್ದರು   

ಯಾದಗಿರಿ: ‘ನಮಗ್ ಎಷ್ಟಾಕ್ಯಾ ಬಿಸಿಲ್ ಇರಲಿ ತಿರುಗಾಡ್ತಿವಿ. ಚಳಿ ಮತ್ತ್ಯಾ ಮಳೆ ಅಂದರೆ ಆಗುವುದಿಲ್ಲ. ಈ ಬ್ಯಾರಿ ಮಳೆ ಬಂದಿಲ್ಲ ಆದ್ರೆ ಚಳಿ ಜಾಸ್ತಿಯಾಗಿ ನೆಗಡಿ, ಕೆಮ್ಮು ಸಣ್ಣ ಉರಿ ಬರಕತ್ಯಾವ್, ಚುಕ್ಕೊಳು ಕೈ ಬಿಡವಲ್ಲು’...

ಇದು ಹಲವು ದಿನಗಳಿಂದ ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದ ಉಂಟಾದ ಬದಲಾವಣೆಯಿಂದ ಜನ ಜೀವನದ ಆರೋಗ್ಯದ ಮೇಲೆ ದುಷ್ಪರಿಣಾಮ ಬಿದ್ದಿರುವ ಬಗ್ಗೆ ನುಡಿಯುತ್ತಿರುವ ಗ್ರಾಮೀಣ ಭಾಗದ ಜನತೆ.

ಕಳೆದ 10 ದಿನದ ಮಾಗಿಯ ಚಳಿಗೆ ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಶೀತ, ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡಿವೆ. ಮಕ್ಕಳ ಆಸ್ಪತ್ರೆಗಳು ತುಂಬಿಕೊಂಡು ನಿಂತಿವೆ. ಇದು ವೈರಲ್ ಆಗಿದೆ ಎನ್ನುತ್ತಾರೆ ವೈದ್ಯರೊಬ್ಬರು.

ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಚಳಿ ಅನುಭವ ಆಗುತ್ತಿದ್ದು, ದಿನದಿಂದ ದಿನಕ್ಕೆ ಚಳಿ ಹೆಚ್ಚುತ್ತಿದೆ. ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಕನಿಷ್ಠ 20ರಷ್ಟು ತಾಪಮಾನವಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇದ್ದು, ನೆಗಡಿ, ಕೆಮ್ಮು ಸಾಮಾನ್ಯವಾಗಿವೆ.

ADVERTISEMENT

‘ನಿರಂತರವಾಗಿ 3–4 ದಿನ ಜ್ವರ ಕಾಣಿಸಿಕೊಂಡರೆ ರಕ್ತ ತಪಾಸಣೆ ಮಾಡಿ, ಡೆಂಗಿ ಇಲ್ಲವೆ ಮಲೇರಿಯಾ ರೋಗದ ಲಕ್ಷಣಗಳು ಎಂಬ ಸಲಹೆಯನ್ನು ವೈದ್ಯರು ನೀಡುತ್ತಿದ್ದಾರೆ. ಚಳಿಯಲ್ಲಿ ಮಕ್ಕಳ ಸಂರಕ್ಷಣೆ ಮಾಡುವುದು ಕಷ್ಟವಾಗಿದೆ. ನಮಗೂ ತುಸು ಸಾಮಾನ್ಯ ಕಾಯಿಲೆ ಬರುತ್ತಲಿವೆ. ಏನು ಮಾಡುವುದು ಅನಿವಾರ್ಯವಾಗಿ ಕೂಲಿ ಕೆಲಸಕ್ಕೆ ತೆರಳಬೇಕಲ್ಲ’ ಎಂಬ ಅಸಹಾಯಕತೆ ವ್ಯಕ್ತಪಡಿಸುತ್ತಾರೆ ವನದುರ್ಗ ಗ್ರಾಮದ ಮಹಿಳೆ ಒಬ್ಬರು.

‘ನ್ಯುಮೋನಿಯಾ, ಪಾರ್ಶ್ವವಾಯು ಸಮಸ್ಯೆಯಿರುವವರು ತುಂಬಾ ಜಾಗರೂಕತೆಯಿಂದ ಇರಬೇಕು. ಸದ್ಯ ಕೆಮ್ಮು, ಜ್ವರ, ಗಂಟಲು ಬೇನೆಯ ರೋಗಿಗಳ ಸಂಖ್ಯೆ ಹೆಚ್ಚಿದೆ. ಸಂಜೆ ತಂಗಾಳಿ ಅಥವಾ ಚಳಿ ಹೆಚ್ಚಾಗಿರುವ ವೇಳೆ ಕಡ್ಡಾಯವಾಗಿ ಉಣ್ಣೆಬಟ್ಟೆ ಧರಿಸಿ. ಜತೆಗೆ ಸರಿಯಾಗಿ ಆಹಾರ ಸೇವಿಸುವುದು ಮುಖ್ಯ ಎಂದು ವೈದ್ಯೆ ಡಾ.ವರ್ಷಾರಾಣಿ ಬಿ. ಸಲಹೆ ನೀಡಿದರು.

‘ದಿನೇ ದಿನೆ ವಾತಾವರಣ ತಂಪಾಗುತ್ತಿದೆ. ಮಕ್ಕಳು, ವೃದ್ಧರು ಮತ್ತು ಅನಾರೋಗ್ಯದಿಂದ ಬಳಲುವವರನ್ನು ಆದಷ್ಟು ತಂಪಿನಲ್ಲಿ ಬಿಡಬಾರದು. ಬಿಸಿ ಬಿಸಿಯಾಗಿ ಊಟ ಮಾಡಿಸಿ, ಉಣ್ಣೆಯ ಉಡುಪುಗಳನ್ನು ಧರಿಸಿ, ಸಂಜೆ ವೇಳೆ ಮನೆಯಲ್ಲೇ ಬೆಚ್ಚಗಿನ ವಾತಾವರಣದಲ್ಲಿ ಇರಿಸಬೇಕು’ ಎಂದು ವೈದ್ಯಾಧಿಕಾರಿ ಡಾ.ಜಿ.ಭಾಗರೆಡ್ಡಿ ಸಲಹೆ ನೀಡಿದರು.

‘ನವೆಂಬರ್‌ನಿಂದ ಫೆಬ್ರುವರಿವರೆಗೆ ಚಳಿಗಾಲ. ಈ ಋತುವಿನಲ್ಲಿ ಮಕ್ಕಳಿಗೆ, ವೃದ್ಧರಿಗೆ, ವೈರಲ್ ಜ್ವರ, ನೆಗಡಿ, ಕೆಮ್ಮು ಸಾಮಾನ್ಯ. ಇದನ್ನು ಎದುರಿಸಲು ಆರೋಗ್ಯ ಇಲಾಖೆ ಸನ್ನದ್ಧವಾಗಿದೆ’ ಎಂದು ಸುರಪುರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪನಾಯಕ ತಿಳಿಸಿದರು.

‘ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಲಾಖೆಯಿಂದ ಯಾವುದೇ ಸೂಚನೆ ಇಲ್ಲ. ಆದರೂ ತಾಲ್ಲೂಕಿನ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಯನ್ನು ಸಮರ್ಪಕವಾಗಿ ದಾಸ್ತಾನು ಮಾಡಿದ್ದೇವೆ. ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು, ಫಿಜಿಶಿಯನ್ ಇದ್ದಾರೆ’ ಎಂದರು.

‘ಇದುವರೆಗೆ ತಾಲ್ಲೂಕಿನಲ್ಲಿ ಚಳಿಗೆ ಸಂಬಂಧಿಸಿದಂತೆ ವೈರಲ್ ಜ್ವರ, ನೆಗಡಿ, ಕೆಮ್ಮು ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿಲ್ಲ’ ಎಂದರು.

ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಎಂ.ಪಿ. ಚಪೆಟ್ಲಾ, ಭೀಮಶೇನರಾವ ಕುಲಕರ್ಣಿ

ನೆಗಡಿ ಕೆಮ್ಮು ಬಂದ ಮಕ್ಕಳ ಬಗ್ಗೆ ಕಾಳಜಿವಹಿಸಬೇಕು. ಊಟ ಮಾಡುವಾಗ ಶುದ್ಧವಾಗಿ ಕೈ ತೊಳೆದುಕೊಳ್ಳಬೇಕು. ಚಳಿಗಾಲದಲ್ಲಿ ಬಂದು ಹೋಗುವ ಸಾಮಾನ್ಯ ಕಾಯಿಲೆಗಳು ಇವಾಗಿವೆ
ಡಾ.ವೆಂಕಟೇಶ ಟೊಣಪೆ ಮಕ್ಕಳ ರೋಗ ತಜ್ಞ ಶಹಾಪುರ
ಬಿಸಿನೀರು ಬಿಸಿಯಾದ ಆಹಾರ ಸೇವಿಸಿ. ಮಕ್ಕಳು ಮತ್ತು ವಯಸ್ಸಾದವರ ಕುರಿತು ವಿಶೇಷ ಕಾಳಜಿ ವಹಿಸಿ. ದೇಹದ ಉಷ್ಣ ಕಾಯ್ದಿರಿಸಿಕೊಳ್ಳುವುದು ಅಗತ್ಯ. ಭಯದ ಅವಶ್ಯಕತೆಯಿಲ್ಲ. ಹಾಗೆಂದು ಬೇಜವಾಬ್ದಾರಿಯೂ ಬೇಡ
–ಡಾ.ಬಸವರಾಜ ಬೇಲಿ ವೈದ್ಯ
ಸಂಜೆ ಆಗುತ್ತಿದ್ದಂತೆ ಚಳಿ ಜಾಸ್ತಿಯಾಗುತ್ತಲಿದೆ.ಗ್ರಾಮೀಣ ಭಾಗದ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿ ಸೊಳ್ಳೆ ಉತ್ಪತ್ತಿಯಾಗಿ ಮಲೇರಿಯಾ ರೋಗ ಹರಡುವ ಆತಂಕ ಶುರುವಾಗಿದೆ
ರಂಗನಾಥ ದೊರೆ ವನದುರ್ಗ
ಚಳಿಗಾಲ ಇರುವುದರಿಂದ ಮಕ್ಕಳನ್ನು ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಹೊರಗೆ ಆಡಲು ಬಿಡಬಾರದು. ಮಕ್ಕಳಿಗೆ ಐಸ್‌ಕ್ರೀಮ್ ಇತರ ಶೀತಯುಕ್ತ ಪದಾರ್ಥಗಳನ್ನು ನೀಡಬಾರದು
ಡಾ. ರಾಜಾ ವೆಂಕಪ್ಪನಾಯಕ ಟಿಎಚ್‌ಓ ಸುರಪುರ
ಚಳಿಗಾಲದ ಸಮಯದಲ್ಲಿ ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸುವುದು ಸೂಕ್ತ. ವೃದ್ಧರನ್ನು ಮಕ್ಕಳನ್ನು ಚಳಿಯಿಂದ ಕಾಪಾಡಬೇಕು. ಬೆಚ್ಚನೆಯ ಬಟ್ಟೆ ಧರಿಸಬೇಕು
ಡಾ. ಮುಕುಂದ ಯನಗುಂಟಿ ಮಕ್ಕಳ ತಜ್ಞ
‘ಬೆಚ್ಚನೆಯ ಉಡುಪು ಧರಿಸಿ‘
ಯಾದಗಿರಿ ಹೊಸ ಜಿಲ್ಲಾಸ್ಪತ್ರೆಗೆ ಸಾಮಾನ್ಯವಾಗಿ ಪ್ರತಿದಿನ 500–600 ಹೊರ ರೋಗಿಗಳು ಬರುತ್ತಿದ್ದಾರೆ. ನೆಗಡಿ ಕೆಮ್ಮು ಸಾಮಾನ್ಯವಾಗಿದೆ. ಅಲ್ಲದೇ ಈಗ ಕೋವಿಡ್‌ ಲಕ್ಷಣ ಇರುವವರಿಗೆ ಕೋವಿಡ್‌ ತಪಾಸಣೆ ಮಾಡಲಾಗುತ್ತಿದೆ. ವಯಸ್ಸಾದವರು ಸ್ವಲ್ಪ ತಡವಾಗಿ ಎದ್ದೇಳಬೇಕು. ತುಂಬಾ ಶೀತ ಇರುವಾಗ ವಾಕಿಂಗ್‌ ಮಾಡುವುದಕ್ಕಿಂತ ಸೂರ್ಯನ ಶಾಖ ಇರುವಾಗ ವ್ಯಾಯಾಮ ಮಾಡಬಹುದು. ಬಿಸಿಯಾದ ಆಹಾರ ಪದಾರ್ಥ ಸೇವನೆ ಆರೋಗ್ಯಕ್ಕೆ ಉತ್ತಮ. ಕಿವಿ ಮೈಕೈ ಮುಚ್ಚುವ ಉಡುಪು ಧರಿಸುವುದರಿಂದ ದೇಹ ಬೆಚ್ಚನೆ ಮಾಡಿಕೊಳ್ಳಬಹುದು –ಡಾ.ಪದ್ಮಾನಂದ ಗಾಯಕವಾಡ ಜಿಲ್ಲಾ ಶಸ್ತ್ರಚಿಕಿತ್ಸಕ
‘ಮಕ್ಕಳ ಬಗ್ಗೆ ಜಾಗೃತಿ ವಹಿಸಿ’
ಮಕ್ಕಳಲ್ಲಿ ಮಂಗನಬಾವು ಕಾಯಿಲೆ ಬರುತ್ತಲಿದೆ. ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಮಕ್ಕಳು ಹೆಚ್ಚು ಪ್ರಯಾಣ ಮಾಡಬಾರದು. ಆಯಾ ಕಾಲಕ್ಕೆ ತಕ್ಕಂತೆ ವಾತಾವರಣ ಇಲ್ಲವಾಗಿದೆ. ಮಳೆ ಬರದೆ ಒಣ ಹವೆ ಮುಂದುವರೆದು ರೋಗ ಕಾಣಿಸಿಕೊಂಡಿವೆ. ಡಿಸೆಂಬರ್‌ ಉತ್ತಮ ವಾತಾವರಣ ಇರಬೇಕಾಗಿತ್ತು. ಹವಾಮಾನ ಏರುಪೇರಿನಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಲಿದೆ. ಪಾಲಕರು ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕು. ಪರಿಸರ ನಾಶದಿಂದಲೂ ಆರೋಗ್ಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಲಿದೆ ಎನ್ನುವುದು ಮರೆಯಬೇಡಿ.–ಡಾ.ಸುದತ್ ದರ್ಶನಾಪುರ ಮಕ್ಕಳ ರೋಗ ತಜ್ಞ 
ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚಳ
ಗುರುಮಠಕಲ್‌: ತಾಲ್ಲೂಕು ವ್ಯಾಪ್ತಿಯಲ್ಲಿ ಚಳಿ ಹೆಚ್ಚುತ್ತಿದ್ದು ರಾತ್ರಿ ವೇಳೆ ಶೀತಗಾಳಿ ಬೀಸುತ್ತಿದೆ. ಶೀತ ವಾತಾವರಣದಿಂದ ಸಾಮಾನ್ಯವಾಗಿ ಆಸ್ಪತ್ರೆಗೆ ಗಂಟಲು ಬೇನೆ ನೆಗಡಿ ಕೆಮ್ಮು ಜ್ವರದ ಚಿಕಿತ್ಸೆಗೆ ಬರುವವರ ಸಂಖ್ಯೆಯೂ ಹೆಚ್ಚಿದೆ. ‘ಇಲ್ಲಿಗೆ ಹತ್ತಿರದ ಮೋತಕಪಲ್ಲಿ ಜಾತ್ರೆಯು ನಮ್ಮ ಭಾಗದ ದೊಡ್ಡ ಜಾತ್ರೆ. ಈ ಜಾತ್ರೆಯ ವಿಶೇಷವೇಂದರೆ 'ಚಳಿ'. ಸಾಧಾರಣ ವಾತಾವರಣವಿದ್ದರೂ ಜಾತ್ರೆ ವೇಳೆಗೆ ಚಳಿಗಾಳಿ ಆರಂಭವಾಗುತ್ತದೆ. ಈಗ ಎರಡು ದಿನದಿಂದ ಗಾಳಿ ಹೆಚ್ಚು ತಂಪೆನ್ನಿಸುತ್ತಿದೆ ಎಂದು ವಿವರಿಸಿದ್ದು’ ಹಿರಿಯ ಜೀವ ಲಕ್ಷ್ಮವ್ವ ಅವರು.
ಮಕ್ಕಳಲ್ಲಿ ನೆಗಡಿ ಕೆಮ್ಮು ಹೆಚ್ಚು
ಹುಣಸಗಿ: ‘ಕಳೆದ ಒಂದೆರಡು ವಾರಗಳಿಂದಲೂ ನೆಗಡಿ ಕೆಮ್ಮು ಜ್ವರ ಸೇರಿದಂತೆ ಇತರ ಕಾಯಿಲೆ ಸ್ವರೂಪ ಕಂಡುಬರುತ್ತದೆ’ ಎಂದು ಹುಣಸಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಸ್.ಬಿ.ಪಾಟೀಲ ತಿಳಿಸಿದರು. ‘ಪ್ರತಿದಿನವೂ ಸಮುದಾಯ ಆರೋಗ್ಯ ಕೇಂದ್ರಕ್ಕೆ 180ರಿಂದ 200ಕ್ಕೂ ಹೆಚ್ಚು ಹೊರರೋಗಿಗಳು ದಾಖಲಾಗುತ್ತಿದ್ದಾರೆ. ಅದರಲ್ಲಿ 15ರಿಂದ 20 ಮಕ್ಕಳಿಗೆ ಜ್ವರ ನೆಗಡಿ ಕೆಮ್ಮು ಕಾಣಿಸಿಕೊಂಡಿದ್ದು ಇದು ಸಾಮಾನ್ಯ’ ಎಂದು ಹೇಳಿದರು. ‘ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೇ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ. ಚಳಿಯಿಂದಾಗಿ ತಾಲ್ಲೂಕಿನಲ್ಲಿ ಮಕ್ಕಳಿಗೆ ಅಲ್ಪ ಪ್ರಮಾಣದಲ್ಲಿ ಜ್ವರಬಾಧೆ ಕಾಣಿಸಿಕೊಳ್ಳುವುದು ಸಾಮಾನ್ಯ’ ಎಂದು ವಿವರಿಸಿದರು. ಅದೇ ರೀತಿಯಾಗಿ ಕೊಡೇಕಲ್ಲ ಹಾಗೂ ರಾಜನಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಹಿತ ಚಿಕ್ಕ ಮಕ್ಕಳಿಗೆ ನೆಗಡಿ ಕೆಮ್ಮು ಕಾಣಿಸಿಕೊಳ್ಳುತ್ತಿದೆ ಎಂಬ ಮಾಹಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.