ADVERTISEMENT

‘ಕ್ರೀಡೆಗಳಿಂದ ಮನಸ್ಸು, ಹೃದಯ ಹಗುರ’

ನೌಕರರ ವಾರ್ಷಿಕ ಕ್ರೀಡಾಕೂಟ; ಕಡತಗಳಲ್ಲಿ ಮುಳುಗಿರುತ್ತಿದ್ದ ಮನಸ್ಸುಗಳಿಗೆ ಅಲ್ಪವಿರಾಮ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 14:45 IST
Last Updated 2 ಫೆಬ್ರುವರಿ 2019, 14:45 IST
ಯಾದಗಿರಿಯ ಜಿಲ್ಲಾಕ್ರೀಡಾಂಗಣದದಲ್ಲಿ ಶನಿವಾರ ನಡೆದ ಕಂದಾಯ ಇಲಾಖೆ ನೌಕರರ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಕ್ರಿಕೆಟ್‌ ರಕ್ಷಣಾತ್ಮಕವಾಗಿ ಆಡಿದ ಪರಿ
ಯಾದಗಿರಿಯ ಜಿಲ್ಲಾಕ್ರೀಡಾಂಗಣದದಲ್ಲಿ ಶನಿವಾರ ನಡೆದ ಕಂದಾಯ ಇಲಾಖೆ ನೌಕರರ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಕ್ರಿಕೆಟ್‌ ರಕ್ಷಣಾತ್ಮಕವಾಗಿ ಆಡಿದ ಪರಿ   

ಯಾದಗಿರಿ: ನಿತ್ಯವೂ ಕಡತಗಳ ಮಧ್ಯೆ ಮುಳುಗಿದ್ದ ಕಂದಾಯ ಇಲಾಖೆ ಸಿಬ್ಬಂದಿ ಶನಿವಾರ ಜಿಲ್ಲಾಕ್ರೀಡಾಂಗಣದಲ್ಲಿ ಉತ್ಸುಕರಾಗಿ ಓಡಾಡುತ್ತಿದ್ದರು. ನಸುಕಿನಿಂದಲೇ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿ, ನೀರು ಚಿಮುಕಿಸಿ ಹದಗೊಳಿಸಿದ್ದರು. ಕ್ರೀಡಾ ಧ್ವಜದ ಕಟ್ಟೆ ಎದುರು ಮಹಿಳಾ ಸಿಬ್ಬಂದಿ ರಂಗೋಲಿ ಹಾಕಿ ಸುಂದರಗೊಳಿಸಿದ್ದರು.

ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಆಗಮಿಸುತ್ತಿದ್ದಂತೆ ಅಲ್ಲಿದ್ದವರ ಮೈಯಲ್ಲಿ ಮಿಂಚಿನ ಸಂಚಾರವಾಯಿತು. ಕಂದಾಯ ಇಲಾಖೆ ನೌಕರರ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ, ಕ್ರಿಕೆಟ್‌ ಬ್ಯಾಟ್ ಹಿಡಿದು ನೇರ ಅಂಗಳಕ್ಕೆ ಇಳಿದರು. ಥೇಟ್‌ ವಿರಾಟ್ ಕೊಹ್ಲಿ ರೀತಿಯಲ್ಲಿಯೇ ಬ್ಯಾಟ್ ಬೀಸಿದರು. ಅನುಭವಿ ದಾಂಡಿಗನಂತೆ ಜಿಲ್ಲಾಧಿಕಾರಿ ಬ್ಯಾಟ್ ಬೀಸುತ್ತಿದ್ದರೆ, ಕಂದಾಯ ಇಲಾಖೆ ಸಿಬ್ಬಂದಿ ಹರ್ಷೋದ್ಘಾರದ ಮೂಲಕ ಹುರಿದುಂಬಿಸಿದರು. ಸದಾ ಕಡತಗಳ ವಿಲೇವಾರಿ ಒತ್ತಡದಲ್ಲಿ ಮುಳುಗಿರುತ್ತಿದ್ದ ಜಿಲ್ಲಾಧಿಕಾರಿ ಎಂಟು ನಿಮಿಷ ಕ್ರೀಡಾಂಗಣದಲ್ಲಿ ಮನದಣಿಯೇ ಆಡಿ ನಲಿದರು.

‘ಕ್ರೀಡೆ, ಸಂಗೀತ, ಧ್ಯಾನ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಮನುಷ್ಯನ ದೈಹಿಕ, ಮಾನಸಿಕ ಸದೃಢತೆಗೆ ಪೂರಕವಾಗಿವೆ. ಎಲ್ಲರೂ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ವೇದಿಕೆ ಕಾರ್ಯಕ್ರಮದಲ್ಲಿ ಸಲಹೆ ನೀಡಿದರು.

ADVERTISEMENT

‘ಕಂದಾಯ ಇಲಾಖೆಎಲ್ಲ ಇಲಾಖೆಗಳ ಕೇಂದ್ರವಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ನೌಕರರ ಮೇಲೆ ಸಾಮಾನ್ಯವಾಗಿ ಒತ್ತಡ ಹಾಗೂ ಜವಾಬ್ದಾರಿ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಕೆಲಸ ಮಾಡುವವರು ಆರೋಗ್ಯ ಸರಿಯಾಗಿ ಇಟ್ಟುಕೊಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ಮನಸ್ಸು, ಹೃದಯ ಹಗುರಾಗುತ್ತದೆ’ ಎಂದರು.

‘ಸೋಲು- ಗೆಲುವು ಮುಖ್ಯವಲ್ಲ. ಪ್ರತಿಯೊಬ್ಬರೂ ಕ್ರೀಡಾಮನೋಭಾವದಿಂದ ಭಾಗವಹಿಸಬೇಕು. ನಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಕ್ರೀಡೆ ಕೂಡ ಒಂದು ವೇದಿಕೆಯಾಗಿದೆ’ ಎಂದು ಹೇಳಿದರು.

ಕ್ರಿಕೆಟ್, ವಾಲಿಬಾಲ್ ಹಾಗೂ ಕಬಡ್ಡಿ ಮೂರು ಹಂತದ ಕ್ರೀಡೆಗಳು ನಡೆಯಲಿದ್ದು, ಒಟ್ಟು ಆರು ತಂಡಗಳು ಭಾಗವಹಿಸಿವೆ. ಲಾಟರಿ ಎತ್ತುವ ಮೂಲಕ ಕ್ರಿಕೆಟ್ ತಂಡಗಳ ಆಯ್ಕೆ ನಡೆಯಿತು.

ಹುಣಸಗಿ-ಶಹಾಪುರ, ಯಾದಗಿರಿ-ಸುರಪುರ ತಂಡಗಳು ಪೈಪೋಟಿ ನಡೆಸಿದವು. ನಂತರ ಜಿಲ್ಲಾಧಿಕಾರಿ ಕಾರ್ಯಾಲಯದ ತಂಡ-ಗುರುಮಠಕಲ್ ತಂಡ ನೇರವಾಗಿ ಸೆಮಿಫೈನಲ್‌ಗೆ ಆಯ್ಕೆಯಾದವು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಉಪ ವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ಸುರೇಶ ಅಂಕಲಗಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಬಸಪ್ಪ ಕುಳಿಗೇರಿ, ಜಿಲ್ಲಾ ಗ್ರಾಮಲೆಕ್ಕಾಧಿಕಾರಿ ಸಂಘದ ಜಿಲ್ಲಾ ಅಧ್ಯಕ್ಷ ಸಿದ್ದಯ್ಯಸ್ವಾಮಿ ಇದ್ದರು.

ಗ್ರಾಮ ಲೆಕ್ಕಾಧಿಕಾರಿ ಮಧುಶ್ರೀ ಪ್ರಾರ್ಥಿಸಿದರು. ಗುರುಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಚನ್ನಬಸಪ್ಪ ಮ್ಯಾಗೇರಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.