ವಡಗೇರಾ: ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರ ಹಯ್ಯಾಳ(ಬಿ). ಇಲ್ಲಿ ಆಗಾಗ, ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಗಾಗಿ ಸಿದ್ಧರಾಗಬೇಕಾದರೆ ಹರಸಾಹಸ ಪಡಬೇಕು.
ಇಂತಹ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರಕ್ಷಿತಾ ಹೊನ್ನಯ್ಯ ಪೂಜಾರಿ 625 ರಲ್ಲಿ 601 ಅಂಕಗಳನ್ನು ಪಡೆದು ಶೇ 96.16 ಫಲಿತಾಂಶದೊಂದಿಗೆ ಉತ್ತೀರ್ಣರಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ -1 ರಲ್ಲಿ ವಡಗೇರಾ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಈ ಶಾಲೆಯಲ್ಲಿ ಶಿಕ್ಷಕರು ಪಾಠ ಬೋಧನೆ ನಂತರ ಮತ್ತೆ ಅದೇ ಪಾಠವನ್ನು ಪ್ರೊಜೆಕ್ಟರ್ ಮುಖಾಂತರ ಮಕ್ಕಳಿಗೆ ವಿವರಿಸುತ್ತಿದ್ದರು. ಹಾಗೆಯೇ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ವಿಶೇಷವಾದ ತರಗತಿಗಳನ್ನು ತೆಗೆದುಕೊಳ್ಳುತಿದ್ದರು.
ಹಯ್ಯಾಳ(ಬಿ) ಸರ್ಕಾರಿ ಪ್ರೌಢಶಾಲೆಯಲ್ಲಿ ಖಾಯಂ ಶಿಕ್ಷಕರು ಇಬ್ಬರು. ಅತಿಥಿ ಶಿಕ್ಷಕರು ನಾಲ್ವರು ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಾಲೆಯ ಮುಖ್ಯಶಿಕ್ಷಕ ಅತಿಥಿ ಶಿಕ್ಷಕರ ಮನವೊಲಿಸಿ ಸಕ್ರಿಯವಾಗಿ ಬೋಧನೆಯಲ್ಲಿ ತೊಡಗಿಸಿಕೊಳ್ಳಲು ಹುರಿದುಂಬಿಸಿದ ಫಲವೇ ಇಂದು ಶಾಲೆಯ ಫಲಿತಾಂಶ ಉನ್ನತ ಶ್ರೇಣಿಯಲ್ಲಿ ಇರುವುದು.
ದಾಖಲೆ: ಹಯ್ಯಾಳ(ಬಿ) ಗ್ರಾಮದಲ್ಲಿ 1984ರಲ್ಲಿ ಪ್ರೌಢಶಾಲೆ ಆರಂಭವಾಗಿದೆ. ಕಳೆದ ವರ್ಷದವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 93 ಅಂಕಗಳನ್ನು ಪಡೆದು ಉತ್ತೀರ್ಣರಾದ ದಾಖಲೆ ಇತ್ತು. ಆದರೆ ಈ ವರ್ಷ ಶೇ 96.16 ಅಂಕಗಳನ್ನು ಪಡೆದು ರಕ್ಷಿತಾ ಪೂಜಾರಿ ಆ ದಾಖಲೆಯನ್ನು ಅಳಿಸಿ ಹಾಕಿದ್ದಾಳೆ.
ಈ ವರ್ಷ ಈ ಶಾಲೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದವರ ಸಂಖ್ಯೆ 64. ಇದರಲ್ಲಿ ಉತ್ತೀರ್ಣರಾದವರು 34. ಶೇ ಫಲಿತಾಂಶ 52ರಷ್ಟಾಗಿದೆ.
ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ 11 ಸರ್ಕಾರಿ ಪ್ರೌಢಶಾಲೆ, 2 ಮೊರಾರ್ಜಿ ವಸತಿ ಶಾಲೆ. 3 ಖಾಸಗಿ ಶಾಲೆಗಳು ಬರುತ್ತವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ -1 ಕ್ಕೆ ಹಾಜರಾದ ವಿದ್ಯಾರ್ಥಿಗಳು 810 ಇದರಲ್ಲಿ ಹಯ್ಯಾಳ(ಬಿ) ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರಕ್ಷಿತಾ ಪೂಜಾರಿ ತಾಲ್ಲೂಕಿಗೆ ಪ್ರಥಮ.
ನಮ್ಮ ಶಾಲೆಯ ವಿದ್ಯಾರ್ಥಿನಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆಯುವಲ್ಲಿ ಅತಿಥಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆಶರಣಪ್ಪ ಸಿದ್ದಪ್ಪ ಶಿರಶ್ಯಾಡ್ ಮಖ್ಯಶಿಕ್ಷಕ
ನನ್ನ ಎಲ್ಲಾ ಶ್ರೇಯಸ್ಸು ಶಿಕ್ಷಕರು ಹಾಗೂ ನನ್ನ ಪಾಲಕರದ್ದು. ಮಂದೆ ವಿಜ್ಞಾನ ವಿಷಯದ ಶಿಕ್ಷಕಿಯಾಗುವ ಕನಸಿದೆರಕ್ಷಿತಾ ಹೊನ್ನಯ್ಯ ಪೂಜಾರಿ
ಹಯ್ಯಾಳ(ಬಿ) ಶಾಲೆಯ ಶಿಕ್ಷಕರು ಫಲಿತಾಂಶ ಸುಧಾರಣೆ ಶ್ರಮಿಸಿದ್ದಾರೆ. ಆ ಶ್ರಮದ ಫಲವೇ ವಿದ್ಯಾರ್ಥಿನಿ ತಾಲ್ಲೂಕಿಗೆ ಪ್ರಥಮ ಬಂದಿರುವುದು ಶಿವಪ್ಪ ಎಸ್ ಮಾತನೂರ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.