ADVERTISEMENT

ಆಮ್ಲಜನಕ ಉತ್ಪಾದನಾ ಘಟಕ ಶುರು

​ಪ್ರಜಾವಾಣಿ ವಾರ್ತೆ
Published 21 ಮೇ 2021, 4:23 IST
Last Updated 21 ಮೇ 2021, 4:23 IST
ಯಾದಗಿರಿಜಿಲ್ಲಾ ಕೋವಿಡ್ ಆಸ್ಪತ್ರೆಯ ಆಮ್ಲಜನಕ ಉತ್ಪಾದನಾ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಭೇಟಿ ನೀಡಿದರು
ಯಾದಗಿರಿಜಿಲ್ಲಾ ಕೋವಿಡ್ ಆಸ್ಪತ್ರೆಯ ಆಮ್ಲಜನಕ ಉತ್ಪಾದನಾ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಭೇಟಿ ನೀಡಿದರು   

ಯಾದಗಿರಿ: 50 ರಿಂದ 70 ಜನರಿಗೆ ಏಕಕಾಲಕ್ಕೆ ಆಮ್ಲಜನಕವನ್ನು ಒದಗಿಸುವ ಸಾಮರ್ಥ್ಯ ಹೊಂದಿರುವ ಜಿಲ್ಲಾ ಕೋವಿಡ್ ಆಸ್ಪತ್ರೆಯ ಆಮ್ಲಜನಕ ಉತ್ಪಾದನಾ ಘಟಕ ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಿದೆ.

ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಸಮ್ಮುಖದಲ್ಲಿ ಪ್ರಾಯೋಗಿಕ ಕಾರ್ಯ ಯಶಸ್ವಿಯಾಗಿ ನಡೆಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ, ದುಬಾರಿ ವೆಚ್ಚದ ಇಸ್ರೇಲ್‌ನಿಂದ ಕಾಣಿಕೆಯಾಗಿ ಬಂದಿರುವ ಈ ಆಮ್ಲಜನಕ ಉತ್ಪಾದನಾ ಘಟಕ (ಕಂಟೇನರ್)ವು ಒಂದು ನಿಮಿಷಕ್ಕೆ 500 ಲೀಟರ್ ಆಮ್ಲಜನಕ ತಯಾರಿಸುತ್ತದೆ. ಇದು ನೈಸರ್ಗಿಕವಾಗಿ ದೊರೆಯುವ ಗಾಳಿಯಿಂದಲೇ ಆಮ್ಲಜನಕವನ್ನು ತಯಾರಿಸುತ್ತದೆ. 50 ರಿಂದ 70 ಜನರಿಗೆ ಏಕಕಾಲಕ್ಕೆ ಆಮ್ಲಜನಕವನ್ನು ಒದಗಿಸುವ ಸಾಮರ್ಥ್ಯ ಹೊಂದಿದ್ದು, ಕೋವಿಡ್ ಸೋಂಕಿತರ ಆಮ್ಲಜನಕ ಕೊರತೆ ಸಮಸ್ಯೆ ನೀಗಿಸಲಿದೆ ಎಂದು ತಿಳಿಸಿದರು.

ADVERTISEMENT

ಕಂಟೇನರ್ ಪ್ಲಾಟ್‍ಫಾರಂ ನಿರ್ಮಾಣ, ವಿದ್ಯುತ್, ಪೈಪ್‍ಲೈನ್ ವ್ಯವಸ್ಥೆ ಎಲ್ಲಾ ಸೇರಿ ಘಟಕ ಸ್ಥಾಪನೆಗೆ ಸುಮಾರು ₹10 ಲಕ್ಷ ಖರ್ಚಾಗಿದೆ. ಯುಪಿಎಸ್ ಕೂಡಿಸುವ ವ್ಯವಸ್ಥೆ ಮಾತ್ರ ಬಾಕಿ ಇದೆ. ಸದ್ಯದಲ್ಲೇ ಅದನ್ನು ಕೂಡಿಸಲಾಗುವುದು ಹೇಳಿದರು.

ಆಸ್ಪತ್ರೆಯ 8-10 ಸಿಬ್ಬಂದಿಗೆ ಈ ಘಟಕ ಹೇಗೆ ನಿರ್ವಹಣೆ ಮಾಡಬೇಕೆಂದು ಬೆಂಗಳೂರಿನಿಂದ ಬಂದ ಎಕ್ಸ್‌ಲೆನ್ಸಿಯಾ ಎಂಟರ್ ಪ್ರೈಸಸ್ ಪ್ರೈವೇಟ್ ಲಿಮಿಟೆಡ್‍ನ ತಂತ್ರಜ್ಞರ ತಂಡವೊಂದು ತರಬೇತಿ ನೀಡಿದೆ ಎಂದರು.

ಇಸ್ರೇಲ್‍ಗೆ ಧನ್ಯವಾದ: ಇದೇ ವೇಳೆ ಬೆಂಗಳೂರಿನಿಂದ ಬಂದ ಎಕ್ಸ್‌ಲೆನ್ಸಿಯಾ ಎಂಟರ್ ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಸಿಬ್ಬಂದಿ ‘ಥ್ಯಾಂಕ್ಯೂ ಟು ಇಸ್ರೇಲ್’ ಎಂಬ ಭಿತ್ತಿಪತ್ರ ಹಿಡಿದು, ದುಬಾರಿ ಬೆಲೆಯ ಕಂಟೇನರ್ ನೀಡಿದ್ದಕ್ಕೆ ಹಾಗೂ ಇದನ್ನು ತರಿಸಲು ಶ್ರಮಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಧನ್ಯವಾದ ಅರ್ಪಿಸಿದರು.

ಈ ವೇಳೆ ಪ್ರಭಾರಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಜೀವ್ ಕುಮಾರ್‌ರಾಯಚೂರಕರ್, ದಂತ ತಜ್ಞ ಡಾ.ಶ್ರೀನಿವಾಸಪ್ರಸಾದ್, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.