ADVERTISEMENT

ಶಹಾಪುರ | ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ: ತೀವ್ರ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 6:55 IST
Last Updated 5 ನವೆಂಬರ್ 2025, 6:55 IST
ಶಹಾಪುರ ನಗರದ ಸರ್ಕಾರಿ ಮಾದರಿ ಪದವಿ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ 2ನೇ ದಿನ ರಾಜ್ಯಮಟ್ಟದ ಚೆಸ್ ಆಟದಲ್ಲಿ ತಲ್ಲೀನರಾಗಿರುವ ವಿದ್ಯಾರ್ಥಿಗಳು
ಶಹಾಪುರ ನಗರದ ಸರ್ಕಾರಿ ಮಾದರಿ ಪದವಿ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ 2ನೇ ದಿನ ರಾಜ್ಯಮಟ್ಟದ ಚೆಸ್ ಆಟದಲ್ಲಿ ತಲ್ಲೀನರಾಗಿರುವ ವಿದ್ಯಾರ್ಥಿಗಳು   

ಶಹಾಪುರ: ವಿಶ್ಲೇಷಣಾತ್ಮಕ ಚಿಂತನೆಯನ್ನು ಮಾಡುವ ಜತೆಗೆ ಮಿದುಳಿನ ಭಾಗಗಳಿಗೆ ಪ್ರೇರಣೆ ನೀಡುವ ಅಲ್ಲದೆ ಸ್ಮರಣಶಕ್ತಿ ಹೆಚ್ಚಿಸುವ ಚೆಸ್ ಸ್ಪರ್ಧೆಯು ಎರಡನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ ಸ್ಪರ್ಧಾಳುಗಳ ತೀವ್ರ ಪೈಪೋಟಿ ಕಂಡುಬಂದಿತು.

ನಗರದ ಸರ್ಕಾರಿ ಮಾದರಿ ಪದವಿ ಕಾಲೇಜಿನಲ್ಲಿ 17 ವರ್ಷದ ಒಳಗಿನ ಬಾಲಕ ಮತ್ತು ಬಾಲಕಿಯರ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯಾದಗಿರಿ ಉಪನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆಯುತ್ತಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ 157 ಬಾಲಕರು ಹಾಗೂ 151 ಬಾಲಕಿಯರು ಹಾಗೂ 70 ಜನ ತಂಡದ ವ್ಯವಸ್ಥಾಪಕರ ನೋಂದಣಿಯಾಗಿದೆ. ಸುಮಾರು 250 ಜನ ಪಾಲಕರು ಮಕ್ಕಳೊಂದಿಗೆ ಆಗಮಿಸಿದ್ದಾರೆ. ಎಲ್ಲಾ ಅಧಿಕಾರಿಗಳು, ದೈಹಿಕ ಶಿಕ್ಷಣ ಶಿಕ್ಷಕರು, ಒಟ್ಟಾರೆ ಸುಮಾರು 800 ಜನರಿಗೆ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಬಾಲಕರಿಗಾಗಿ 88 ಟೇಬಲ್ ಹಾಗೂ ಬಾಲಕಿಯರಿಗಾಗಿ 86 ಟೇಬಲ್ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಟೂರ್ನಿಯಲ್ಲಿ ಒಟ್ಟು 9 ಸುತ್ತುಗಳಿದ್ದು, ಮೊದಲನೇ ದಿನ ಎರಡು ಸುತ್ತು ಮುಕ್ತಾಯಗೊಂಡಿದೆ. ವೇಳಾಪಟ್ಟಿಯಂತೆ ಎರಡನೇ ದಿನ ನಾಲ್ಕು ಸುತ್ತು ಆಡಿಸಲು ನಿರ್ಧರಿಸಲಾಗಿತ್ತು. ಅದರಂತೆ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಮೂರನೇ ಸುತ್ತು ಹಾಗೂ 11 ಗಂಟೆಗೆ ನಾಲ್ಕನೇ ಸುತ್ತು, ಮಧ್ಯಾಹ್ನ 2 ಗಂಟೆಗೆ ಐದನೇ ಸುತ್ತು, 4.30ಗೆ ಆರನೇ ಸುತ್ತಿಗೆ ಸಮಯವನ್ನು ನಿಗದಿಪಡಿಸಿ ಆಟ ಆಡಿಸಲಾಗಿದೆ ಎಂದು ಡಿಡಿಪಿಐ ಚನ್ನಬಸಪ್ಪ ಮುಧೋಳ ತಿಳಿಸಿದರು.

ನಿವೃತ್ತ ಜಂಟಿ ನಿರ್ದೇಶಕ ಸಕ್ರಪ್ಪಗೌಡ ಬಿರಾದಾರ, ಗುರಣ್ಣಗೌಡ ಪೊಲೀಸ್‌ಪಾಟೀಲ, ಬಿಇಒ ವೈ.ಎಸ್.ಹರಗಿ, ಹಣಮಂತರಾರ ಸೋಮಾಪುರ ಉಪಸ್ಥಿತರಿದ್ದರು.

ಶಹಾಪುರ ನಗರದಲ್ಲಿ ರಾಜ್ಯಮಟ್ಟದ ಚೆಸ್ ಪಂದ್ಯಾವಳಿ ಆಯೋಜನೆಯು ಅಚ್ಚುಕಟ್ಟಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ಬಂದ ನಮಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸಿದೆ
ರಾಘವೇಂದ್ರ ಉಡುಪಿ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.