ADVERTISEMENT

ಯಾದಗಿರಿ | ರಾಜ್ಯಮಟ್ಟದ ಯುವಜನೋತ್ಸವ: ಸಕಲ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಡಿ.3, 4ರಂದು ರಾಜ್ಯಮಟ್ಟದ ಯುವಜನೋತ್ಸವ; ಸುಮಾರು 1,200 ಸ್ಪರ್ಧಾಳು ಸೇರುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 4:43 IST
Last Updated 25 ಅಕ್ಟೋಬರ್ 2025, 4:43 IST
ಯಾದಗಿರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಮಾತನಾಡಿದರು. ಅಧಿಕಾರಿಗಳು ಉಪಸ್ಥಿತರಿದ್ದರು
ಯಾದಗಿರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಮಾತನಾಡಿದರು. ಅಧಿಕಾರಿಗಳು ಉಪಸ್ಥಿತರಿದ್ದರು   

ಯಾದಗಿರಿ: ‘ಜಿಲ್ಲೆಯಲ್ಲಿ ಡಿಸೆಂಬರ್ 3 ಮತ್ತು 4ರಂದು ರಾಜ್ಯಮಟ್ಟದ ಯುವಜನೋತ್ಸವ ನಡೆಯಲಿದೆ.  ಯುವಜನೋತ್ಸವದ ಸಂಘಟನೆಗೆ ಈಗಿನಿಂದಲೇ ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರಾಜ್ಯಮಟ್ಟದ ಯುವಜನೋತ್ಸವ ಹಮ್ಮಿಕೊಳ್ಳುವ ಕುರಿತು ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

‘ಯಾದಗಿರಿಯಲ್ಲಿ ರಾಜ್ಯಮಟ್ಟದ ಯುವಜನೋತ್ಸವ ಸಂಘಟನೆಗೆ ಸರ್ಕಾರದ ನಿರ್ದೇಶನ ನೀಡಿದೆ. ಹೀಗಾಗಿ, ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು. ಮುಖ್ಯ ಸಮಾರಂಭದ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವರು. ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು’ ಎಂದರು.

ADVERTISEMENT

‘ಮುಖ್ಯ ಸಮಾರಂಭಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಮುಖ್ಯ ವೇದಿಕೆ ಹಾಕಲಾಗುವುದು. ಶಾಮಿಯಾನ, ವಿದ್ಯುತ್ ಅಲಂಕಾರ ಮಾಡಬೇಕು. ವಿವಿಧ ವಸತಿ ನಿಲಯ, ಸಮುದಾಯ ಭವನಗಳಲ್ಲಿ ವಸತಿ, ಊಟೋಪಚಾರ ವ್ಯವಸ್ಥೆ, ಸಾರಿಗೆ ಸೇರಿದಂತೆ ಅವಶ್ಯಕ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ವಿವಿಧೆಡೆ ಕಾರ್ಯಕ್ರಮಗಳಿಗಾಗಿ ಏಳು ವೇದಿಕೆಗಳನ್ನು ನಿರ್ಮಾಣ ಮಾಡಬೇಕು. ಪೂರ್ವ ಸಿದ್ಧತೆಗಳನ್ನು ನೋಡಿಕೊಳ್ಳಲು ಸ್ವಾಗತ ಸಮಿತಿ, ನೋಂದಣಿ ಸಮಿತಿ, ವಸತಿ ಸಮಿತಿ, ಸಾರಿಗೆ ಸಮಿತಿ, ಊಟೋಪಚಾರ ಸಮಿತಿ, ಹಣಕಾಸು, ಶಿಷ್ಟಾಚಾರ ಸಮಿತಿ, ವೇದಿಕೆ ನಿರ್ಮಾಣ ಹಾಗೂ ಅಲಂಕಾರ ಸಮಿತಿ, ತೀರ್ಪುಗಾರರ ಸಮಿತಿ, ರಕ್ಷಣಾ ಸಮಿತಿ, ಆರೋಗ್ಯ ಸಮಿತಿ, ಪ್ರಚಾರ ಸಮಿತಿ, ವಿಜ್ಞಾನ ಮತ್ತು ವಸ್ತುಪ್ರದರ್ಶನ ಸಮಿತಿ, ಸ್ವಯಂ ಸೇವಕರ ಸಮಿತಿಗಳನ್ನು ರಚಿಸಲಾಗಿದೆ’ ಎಂದರು.

ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿ ರಾಜು ಬಾವಿ ಹಳ್ಳಿ ಮಾತನಾಡಿ, ‘ಯುವಜನೋತ್ಸವದಲ್ಲಿ 15 ವರ್ಷದಿಂದ 29 ವರ್ಷ ವಯೋಮಾನದ ನಡುವಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಯುವಕ, ಯುವತಿಯರು, ಸಂಘದ ಸದಸ್ಯರು ಭಾಗವಹಿಸುವರು’ ಎಂದರು.

‘ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ವಿಜೇತರಾದ ಪ್ರತಿ ಜಿಲ್ಲೆಯಿಂದ 32 ಜನ ಸ್ಪರ್ಧಾಳುಗಳಂತೆ ಸುಮಾರು 1,200 ಜನ ಯುವಕ ಯುವತಿಯರು ಪಾಲ್ಗೊಳ್ಳಬಹುದು. ಅಧಿಕಾರಿ, ಸಿಬ್ಬಂದಿ ವರ್ಗ ಒಳಗೊಂಡಂತೆ 1,500 ಜನ ರಾಜ್ಯದ ಎಲ್ಲ ಜಿಲ್ಲೆಗಳಿಂದ ಭಾಗವಹಿಸುವರು’ ಎಂದು ಹೇಳಿದರು.

‘ಯುವಜನೋತ್ಸವದಲ್ಲಿ ಜಾನಪದ ನೃತ್ಯ, ಜಾನಪದ ಗೀತೆ, (ಪ್ರಾದೇಶಿಕ ಭಾಷೆ), ಕಥೆ ಬರೆಯುವುದು,(ಹಿಂದಿ, ಇಂಗ್ಲಿಷ್, ಪ್ರಾದೇಶಿಕ ಭಾಷೆಗಳು), ಭಾಷಣ, ಕವಿತೆ ಬರೆಯುವುದು, ವಿಜ್ಞಾನ ಮೇಳ ಹಾಗೂ ವಸ್ತು ಪ್ರದರ್ಶನವೂ ಇರಲಿದೆ’ ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಕೋಲಾರ್, ಸಹಾಯಕ ಆಯುಕ್ತ ಶ್ರೀಧರ್ ಗೋಟೂರ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ದೇವರಮನಿ, ಡಿಡಿಪಿಐ ಚನ್ನಬಸಪ್ಪ ಮುಧೋಳ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಮಿತಿಗಳ ಅಧ್ಯಕ್ಷರು ತುರ್ತಾಗಿ ಸಭೆ ಕರೆದು ತಮ್ಮ ಸಮಿತಿಯ ಸದಸ್ಯರೊಂದಿಗೆ ಸಮನ್ವಯ ಸಾಧಿಸಬೇಕು. ಸೂಕ್ತ ಕ್ರಮ ಕೈಗೊಂಡು ಮುಂದಿನ ಸಭೆಯಲ್ಲಿ ಮಾಹಿತಿಯೂ ಒದಗಿಸಬೇಕು
ಹರ್ಷಲ್ ಭೋಯರ್ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.